ADVERTISEMENT

ಅರಕಲವಾಡಿ: ಹುಲಿ ಕಾರ್ಯಾಚರಣೆ ಮುಂದುವರಿಕೆ

ಮೂರು ಸಾಕಾನೆಗಳು ಭಾಗಿ, ವ್ಯಾಘ್ರನನ್ನು ಓಡಿಸಲು ಸಿಬ್ಬಂದಿ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 14:21 IST
Last Updated 6 ನವೆಂಬರ್ 2020, 14:21 IST
ಹುಲಿ ‌ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆನೆ
ಹುಲಿ ‌ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆನೆ   

ಚಾಮರಾಜನಗರ: ತಾಲ್ಲೂಕಿನ ಅರಕಲವಾಡಿ, ವಡ್ಗಲ್‌ಪುರ, ಸಾಸಿವೆ ಹಳ್ಳ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಕಾಡಿಗೆ ಅಟ್ಟುವುದಕ್ಕಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಮೂರು ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಿದರು.

40 ಸಿಬ್ಬಂದಿ ಮೂರು ತಂಡಗಳಾಗಿ ಶುಕ್ರವಾರ ವ್ಯಾಘ್ರನಿಗಾಗಿ ಹುಡುಕಾಟ ನಡೆಸಿದರು. ಕೆ.ಗುಡಿಯ ಶಿಬಿರದ ಗಜೇಂದ್ರ, ಬಂಡೀಪುರದ ಸಾಕಾನೆಗಳಾದ ಲಕ್ಷ್ಮಿ ಹಾಗೂ ಪಾರ್ಥಸಾರಥಿಯನ್ನು ಬಳಸಿಕೊಂಡು ಶೋಧ ಕಾರ್ಯಾಚರಣೆ ನಡೆಸಲಾಯಿತು.

ಬೆಳಿಗ್ಗೆ ಚೆನ್ನಪ್ಪನಪುರ ವ್ಯಾಪ್ತಿಯಲ್ಲಿ ಮಧ್ಯಾಹ್ನದ ಬಳಿಕ ವಡ್ಗಲ್‌ಪುರದ ಬಳಿ ಸಿಬ್ಬಂದಿ ಹುಡುಕಾಟ ನಡೆಸಿದರು. ಒಂದು ವೇಳೆ ಹುಲಿ ಅವಿತು ಕುಳಿತಿದ್ದರೆ, ಅದನ್ನು ಓಡಿಸುವುದಕ್ಕಾಗಿ ಪಟಾಕಿಯನ್ನೂ ಸಿಡಿಸಿದರು. ಸಂಜೆಯವರೆಗೂ ಹುಲಿ ಕಂಡು ಬರಲಿಲ್ಲ ಎಂದು ಗೊತ್ತಾಗಿದೆ.

ADVERTISEMENT

ಅರಕಲವಾಡಿ, ವಡ್ಗಲ್‌ಪುರ ಭಾಗದಲ್ಲಿ ಮೂರ್ನಾಲ್ಕು ದಿನಗಳಿಂದ ಹುಲಿಯ ಹೆಜ್ಜೆ ಗುರುತು ಕಂಡು ಬರುತ್ತಿದೆ. ಹುಲಿ ಸೆರೆಗೆ ಇಲಾಖೆಯಿಂದ ಅನುಮತಿ ಬೇಕಾಗಿರುವುದರಿಂದ ಸದ್ಯ ಅಧಿಕಾರಿಗಳು ಅದನ್ನು ಕಾಡಿಗೆ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಎರಡು ತಿಂಗಳ ಹಿಂದೆ ಸಾಸಿವೆ ಹಳ್ಳದ ಬಳಿ ಹುಲಿ ಕಂಡು ಬಂದಿತ್ತು. ಅದೇ ಹುಲಿಯೇ ಸುತ್ತಮುತ್ತಲಿನ ಪ್ರದೇಶದಲ್ಲಿ ಸುತ್ತಾಡುತ್ತಿರಬಹುದು ಎಂದು ಹೇಳಲಾಗುತ್ತಿದೆ.

‘ಕಾರ್ಯಾಚರಣೆ ಒಂದು ದಿನಕ್ಕೆ ನಿಲ್ಲುವುದಿಲ್ಲ. ಇನ್ನೂ ಮುಂದುವರಿಯಲಿದೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.