ADVERTISEMENT

ಜಿಲ್ಲೆಗೆ ದೊಡ್ಡ ಕೊಡುಗೆ ನೀಡದ ಬಜೆಟ್‌

ಕುಮಾರಸ್ವಾಮಿ ಬಜೆಟ್‌,

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 15:36 IST
Last Updated 5 ಜುಲೈ 2018, 15:36 IST
ಚಾಮರಾಜನಗರ ವೈದ್ಯಕೀಯ ಕಾಲೇಜಿನ ನೋಟ
ಚಾಮರಾಜನಗರ ವೈದ್ಯಕೀಯ ಕಾಲೇಜಿನ ನೋಟ   

ಚಾಮರಾಜನಗರ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದ ನೇತೃತ್ವ ವಹಿಸಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲೆಗೆ ಹೆಚ್ಚು ಕೊಡುಗೆಗಳಿಲ್ಲ.

ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ₹50 ಕೋಟಿಯಷ್ಟು ಅನುದಾನದ ಹಂಚಿಕೆಯ ಪ್ರಸ್ತಾಪ ಬಿಟ್ಟರೆಇಡೀ ಬಜೆಟ್‌ನಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ದೊಡ್ಡಮಟ್ಟಿನ ಬೇರೆ ಘೋಷಣೆಗಳಿಲ್ಲ. ಪ್ರಸ್ತಾವಿತ ಆಸ್ಪತ್ರೆಯ ಬಗ್ಗೆ ಸಿದ್ದರಾಮಯ್ಯ ಅವರು ಹಿಂದಿನ ಬಜೆಟ್‌ನಲ್ಲಿ₹100 ಕೋಟಿ ಹಂಚಿಕೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದರು. ₹90 ಕೋಟಿ ತಕ್ಷಣ ಬಿಡುಗಡೆ ಮಾಡಲೂ ಅನುಮತಿ ನೀಡಿದ್ದರು.ಅಂದು ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದ ಎಂ.ಸಿ. ಮೋಹನಕುಮಾರಿ ಅವರು ಆಸ್ಪತ್ರೆಗೆ ಗುದ್ದಲಿಪೂಜೆ ನೆರವೇರಿಸಿದ್ದರು.

ಗುರುವಾರ ಮಂಡಿಸಲಾದ ಹೊಸ ಬಜೆಟ್‌ನಲ್ಲಿ ಗದಗ, ಕೊಪ್ಪಳ, ಚಾಮರಾಜನಗರ ಮತ್ತು ಹಾಸನಗಳಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ₹200 ಕೋಟಿ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾಗಿ, ಜಿಲ್ಲೆಗೆ ₹50 ಕೋಟಿ ಸಿಗಬಹುದು ಎಂಬ ನಿರೀಕ್ಷೆ ಇದೆ.

ADVERTISEMENT

ವಾಯು ಗುಣಮಟ್ಟ ಅಳೆಯುವ ಕೇಂದ್ರ: ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ₹96 ಕೋಟಿ ವೆಚ್ಚದಲ್ಲಿ 42ವಾಯುಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ತಾಪಿಸುವ ಪ್ರಸ್ತಾವವೂ ಬಜೆಟ್‌ನಲ್ಲಿ ಇದೆ. ಹಾಗಾಗಿ, ಜಿಲ್ಲೆಯಲ್ಲೂ ಕನಿಷ್ಠ ಒಂದು ವಾಯುಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆಯಾಗುವುದು ಖಚಿತ.

ಪ್ರಸ್ತುತ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿರುವ ವೃದ್ಧಾಶ್ರಮಗಳನ್ನು ಉಪವಿಭಾಗಗಳಿಗೂ ವಿಸ್ತರಿಸಲಿರುವುದರಿಂದ, ಜಿಲ್ಲೆಯಲ್ಲಿ ಇನ್ನೊಂದುವೃದ್ಧಾಶ್ರಮ ನಿರ್ಮಾಣವಾಗುವುದನ್ನು ನಿರೀಕ್ಷಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.