ADVERTISEMENT

ಸಾರಿಗೆ ಮುಷ್ಕರ: ಬಸ್‌ಗಳ ವಿರಳ ಸಂಚಾರ

ಜಿಲ್ಲೆಯಲ್ಲಿ ಮುಷ್ಕರ ಭಾಗಶಃ ಯಶಸ್ವಿ: ಕಚೇರಿಗೆ, ಕಾಲೇಜುಗಳಿಗೆ ತೆರಳುವವರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 2:59 IST
Last Updated 6 ಆಗಸ್ಟ್ 2025, 2:59 IST
ಸಾರಿಗೆ ನಿಗಮಗಳ ನೌಕರರ ಮುಷ್ಕರದಿಂದಾಗಿ ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು
ಸಾರಿಗೆ ನಿಗಮಗಳ ನೌಕರರ ಮುಷ್ಕರದಿಂದಾಗಿ ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು   

ಚಾಮರಾಜನಗರ: ಸಾರಿಗೆ ನಿಗಮಗಳ ನೌಕರರ ಮುಷ್ಕರದಿಂದಾಗಿ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ವಿರಳವಾಗಿತ್ತು. ಉದ್ಯೋಗ ನಿಮಿತ್ತ ಕಚೇರಿಗೆ ತೆರಳುವವರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ನಿತ್ಯದ ಕೆಲಸ ಕಾರ್ಯಗಳಿಗೆ ತೆರಳಬೇಕಾದವರಿಗೆ ಮುಷ್ಕರದ ಬಿಸಿ ತಟ್ಟಿತು. 

ಚಾಮರಾಜನಗರದಿಂದ ಮೈಸೂರು, ಬೆಂಗಳೂರು, ಕೊಳ್ಳೇಗಾಲ, ಗುಂಡ್ಲುಪೇಟೆ ಸೇರಿದಂತೆ ಇತರೆಡೆಗೆ ತೆರಳುವ ಬಸ್‌ಗಳು ವಿರಳವಾಗಿದ್ದರಿಂದ ಪ್ರಯಾಣಿಕರು ನಿಲ್ದಾಣದಲ್ಲಿ ಕಾಯುತ್ತಿದ್ದ ದೃಶ್ಯಗಳು ಕಂಡುಬಂತು. ಪ್ರತಿದಿನ ನಗರದಿಂದ ಮೈಸೂರಿಗೆ ನಿರಂತರವಾಗಿ ಸಂಚರಿಸುತ್ತಿದ್ದ ಬಸ್‌ಗಳು ಮುಷ್ಕರದಿಂದಾಗಿ ತೀರಾ ಕಡಿಮೆ ಸಂಖ್ಯೆಯಲ್ಲಿದ್ದವು.

ಉದ್ಯೋಗ, ಶಿಕ್ಷಣ, ವ್ಯಾಪಾರ ಸೇರಿದಂತೆ ಹಲವು ಕಾರಣಗಳಿಗೆ ನಗರದಿಂದ ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣ ಬೆಳೆಸುತ್ತಿದ್ದು ಬಸ್‌ಗಳ ಕೊರತೆಯಿಂದ ಕಿರಿಕಿರಿ ಅನುಭವಿಸಿದರು. ತುರ್ತು ಕಾರ್ಯಗಳಿದ್ದವರು ಖಾಸಗಿ ಬಸ್‌ಗಳಲ್ಲಿ ತೆರಳಿದರೆ ಬಹುತೇಕರು ಕೆಎಸ್‌ಆರ್‌ಟಿಸಿ ಬಸ್‌ಗಳ ಬರುವಿಕೆಯ ಹಾದಿ ಕಾಯುತ್ತಿದ್ದರು.

ADVERTISEMENT

150 ಬಸ್‌ಗಳ ಸಂಚಾರ: 

ಜಿಲ್ಲೆಯು ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಚಾಮರಾಜನಗರ ಸಾರಿಗೆ ವಿಭಾಗಗಳನ್ನು ಒಳಗೊಂಡಿದ್ದು ಹೊರ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಗೆ ಪ್ರತಿ ನಿತ್ಯ 200ಕ್ಕೂ ಹೆಚ್ಚು ಬಸ್‌ಗಳು ಪ್ರಯಾಣಿಸುತ್ತಿದ್ದು ಮುಷ್ಕರದಿಂದಾಗಿ 150 ಬಸ್‌ಗಳು ಮಾತ್ರ ಪ್ರಯಾಣಿಸಿದವು. ಚಾಮರಾಜನಗರದಿಂದ 79 ಬಸ್‌ಗಳು ಸಂಚಾರ ಮಾಡಿವೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರಾದ ಅಶೋಕ್ ಕುಮಾರ್ ತಿಳಿಸಿದರು.

ಚಾಮರಾಜನಗರದಿಂದ ಹೆಚ್ಚು ಪ್ರಯಾಣಿಕರು ಸಂಚರಿಸುವ ಮಾರ್ಗಗಳಾದ ಮೈಸೂರು, ಕೊಳ್ಳೇಗಾಲ, ಗುಂಡ್ಲುಪೇಟೆ ತಾಲ್ಲೂಕುಗಳಿಗೆ ಆದ್ಯತೆ ಮೇರೆಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಕಚೇರಿ, ಶಾಲಾ ಕಾಲೇಜುಗಳ ಆರಂಭವಾಗುವ ಹಾಗೂ ಮುಕ್ತಾಯವಾಗುವ ಸಮಯದಲ್ಲಿ ಬಸ್‌ಗಳ ಕೊರತೆಯಾಗದಂತೆ ಎಚ್ಚರ ವಹಿಸಲಾಗಿತ್ತು ಎಂದು ಅಶೋಕ್ ಕುಮಾರ್ ಮಾಹಿತಿ ನೀಡಿದರು.

ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಮುಷ್ಕರದ ಸುದ್ದಿಯ ಪರಿಣಾಮ ಪ್ರಯಾಣಿಕರ ದಟ್ಟಣೆಯೂ ಕಡಿಮೆ ಇತ್ತು. ನಗರದಿಂದ ಹೊರ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿದ್ದರು. ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಲು ಸದಾ ಕಿಕ್ಕಿರಿದು ತುಂಬಿರುತ್ತಿದ್ದ ನಗರದ ನಿಲ್ದಾಣದಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿರಲಿಲ್ಲ.

ಖಾಸಗಿ ಬಸ್‌ಗಳಿಗೆ ಲಾಭ: 

ಸಾರಿಗೆ ಬಸ್‌ಗಳ ಅಲಭ್ಯತೆಯ ಪರಿಣಾಮ ಖಾಸಗಿ ಬಸ್‌ಗಳ ಓಡಾಟ ಹೆಚ್ಚಾಗಿತ್ತು. ಮೈಸೂರು, ನಂಜನಗೂಡು, ಗುಂಡ್ಲುಪೇಟೆ, ಕೊಳ್ಳೇಗಾಲ ತಾಲ್ಲೂಕುಗಳಿಗೆ ಖಾಸಗಿ ಬಸ್‌ಗಳು ಹೆಚ್ಚು ಸಂಚಾರ ಮಾಡಿದವು. ಸಾಮಾನ್ಯಗಿ ಪ್ರಯಾಣಿಕರ ಕೊರತೆ ಎದುರಿಸುವ ಖಾಸಗಿ ಬಸ್‌ಗಳಲ್ಲಿ ಮಂಗಳವಾರ ದಟ್ಟಣೆ ಹೆಚ್ಚಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.