ADVERTISEMENT

2025 ಹಿಂದಣ ಹೆಜ್ಜೆ: ಚಾಮರಾಜನಗರದಲ್ಲಿ ನಡೆದ ಈ ವರ್ಷದ ಸಿಹಿ–ಕಹಿ ಘಟನೆಗಳಿವು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 7:08 IST
Last Updated 29 ಡಿಸೆಂಬರ್ 2025, 7:08 IST
   

ಚಾಮರಾಜನಗರ: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು ಮಹತ್ವದ ವಿದ್ಯಮಾನ. ಮಾನವ–ಪ್ರಾಣಿ ಸಂಘರ್ಷ ತಾರಕಕ್ಕೇರಿದ ವರ್ಷ. ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾವಿನ ಘೋರ ದುರ್ಘಟನೆ.

ಅರಣ್ಯದೊಳಗೆ ಮಾನವ ಪ್ರಾಣಿ ಸಂಘರ್ಷ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಬಂಡೀಪುರ ಸಫಾರಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದು ಮಹತ್ವದ ಬೆಳವಣಿಗೆ. ನಂತರ ಸಫಾರಿಯ ಪರ ಮತ್ತು ವಿರುದ್ಧ ಬಿಸಿ ಚರ್ಚೆಗಳು ನಡೆದವು.

ದ್ವೇಷಕ್ಕೆ ಪ್ರತೀಕಾರವಾಗಿ ಹುಲಿಯನ್ನು ಮೂರು ತುಂಡುಗಳಾಗಿ ಕತ್ತರಿಸಿ ಬಿಸಾಡಿದ ಕೃತ್ಯ ಮನುಷ್ಯನ ಕ್ರೌರ್ಯಕ್ಕೆ ಸಾಕ್ಷಿಯಾಯಿತು. ಕಾಡುಪ್ರಾಣಿಗಳ ದಾಳಿಗೆ ಸಾವಿರಾರು ಎಕರೆ ಬೆಳೆ ನಾಶವಾಯಿತು, ಜಾನುವಾರುಗಳು ಬಲಿಯಾದವು, ಹುಲಿ ದಾಳಿಗೆ ಎರಡು ಅಮಾಯಕ ಜೀವಗಳು ಉಸಿರು ಚೆಲ್ಲಿದವು. ಹಲವರಿಗೆ ಗಂಭೀರ ಗಾಯಗಳಾದವು. 

ADVERTISEMENT

ಜೂನ್ 2ರಂದು ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವಲಯದಲ್ಲಿ ವಿಷಪ್ರಾಶನದಿಂದ 5 ಹುಲಿಗಳು (ತಾಯಿ ಹುಲಿ ಮತ್ತು 4 ಮರಿಗಳು) ಸಾವನ್ನಪ್ಪಿದವು. ಈ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿತು. ಘಟನೆ ಸಂಬಂಧ ಮಾದುರಾಜು, ನಾಗರಾಜು ಕೋನಪ್ಪ ಎಂಬುವರನ್ನು ಬಂಧಿಸಲಾಯಿತು. 

ಜಾನುವಾರು ಕೊಂದಿದ್ದಕ್ಕೆ ಪ್ರತೀಕಾರವಾಗಿ ಹುಲಿ ತಿಂದುಬಿಟ್ಟಿದ್ದ ಜಾನುವಾರು ಕಳೇಬರಕ್ಕೆ ಕಿಡಿಗೇಡಿಗಳು ವಿಷ ಹಾಕಿದ್ದರು. ವಿಷಪೂರಿತ ಮಾಂಸ ತಿಂದು ಐದು ಹುಲಿಗಳು ಮೃತಪಟ್ಟಿದ್ದವು. ಪ್ರಕರಣದ ತನಿಖೆಗೆ ಪಿಸಿಸಿಎಫ್‌ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಲಾಗಿತ್ತು.

ಐದು ಹುಲಿಗಳ ಹತ್ಯೆ ಘಟನೆ ಮಾಸುವ ಮುನ್ನವೇ ಅ.3ರಂದು ಅದೇ ಮಲೆ ಮಹದೇಶ್ವರ ವನ್ಯಧಾಮದ ಹನೂರು ಬಫರ್ ವಲಯ ವ್ಯಾಪ್ತಿಯ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯನ್ನು ಮೂರು ಭಾಗಗಳಾಗಿ ತುಂಡರಿಸಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಕೂಡ ಜಾನುವಾರು ಸಾವಿಗೆ ಪ್ರತೀಕಾರವಾಗಿ ನಡೆದಿತ್ತು. ಕೃತ್ಯ ಸಂಬಂಧ 6 ಆರೋಪಿಗಳನ್ನು ಬಂಧಿಸಲಾಗಿತ್ತು. ಸದ್ಯ ಎಲ್ಲರೂ ಜಾಮೀನನ ಮೇಲೆ ಬಿಡುಗಡೆಯಾಗಿದ್ದಾರೆ.

ಜುಲೈ 2ರಂದು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದಲ್ಲಿ 25 ಕೋತಿಗಳನ್ನು ವಿಷವಿಕ್ಕಿ ಕೊಂದ ಅಮಾನವೀಯ ಘಟನೆ ನಡೆಯಿತು.

ಬಂಡಿಪುರದೆಡೆಗೆ ನಡಿಗೆ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ಅನುಮತಿ ಕೋರಿ ಕೇರಳ ರಾಜ್ಯದ ಒತ್ತಡ ಖಂಡಿಸಿ ಪರಿಸರವಾದಿಗಳು ‘ನಮ್ಮ ನಡಿಗೆ ಬಂಡೀಪುರದೆಡೆಗೆ’ ಪಾದಯಾತ್ರೆ ನಡೆಸಿದ್ದು ರಾಜ್ಯದ ಗಮನ ಸೆಳೆಯಿತು.

ಜಿಲ್ಲೆಯಲ್ಲಿ ಜಾತ್ರೆಗಳು ಸುಸೂತ್ರವಾಗಿ ನಡೆದವು. ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಬಿಳಿಗಿರಿರಂಗನಾಥಸ್ವಾಮಿ ದೊಡ್ಡ ಜಾತ್ರೆ, ಚಾಮರಾಜೇಶ್ವರ ಸ್ವಾಮಿಯ ಮಹಾ ರಥೋತ್ಸವ, ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಶಿವರಾತ್ರಿ ಜಾತ್ರೆ ಹಾಗೂ ಯುಗಾದಿ, ದೀಪಾವಳಿ ಜಾತ್ರಾ ಮಹೋತ್ಸವ, ಮಂಟೇಸ್ವಾಮಿ ಪರಂಪರೆಯ ಚಿಕ್ಕಲ್ಲೂರು ಜಾತ್ರೆ ಸಂಭ್ರಮದಿಂದ ನಡೆಯಿತು. ಜಿಲ್ಲೆಯ ಗಡಿಭಾಗ ತಾಳವಾಡಿಯಲ್ಲಿ ನಟ ಪುನೀತ್ ರಾಜಕುಮಾರ್ ಅವರ ಸೋದರತ್ತೆ ನಾಗಮ್ಮ ಆ.1ರಂದು ನಿಧನರಾದರು.

ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವ ಮುನ್ನ ‌ವಜ್ರಮಲೆ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಈ ವೇಳೆ ಸುತ್ತೂರು ಶ್ರೀಗಳು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಇದ್ದರು
ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ನಡೆಯುವ ದೀಪಾವಳಿ ಜಾತ್ರೋತ್ಸವಕ್ಕೆ ಸಿಂಗಾರಗೊಂಡಿದ್ದ ದೇವಸ್ಥಾನದ ಆವರಣ
ಚಾಮರಾಜನಗರದಲ್ಲಿ ಚಾಮರಾಜೇಶ್ವರ ಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ನೆರವೇರಿತು
ಚಾಮರಾಜನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಸರು ಕುಡಿಕೆ ಕಡೆಯುವ ಮೂಲಕ ಉದ್ಘಾಟಿಸಿದರು
ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ನಡೆದ ‘ಪಕ್ಷಿ ಗಣತಿ’ಯಲ್ಲಿ ಕಾಣಿಸಿಕೊಂಡ ಪಕ್ಷಿ
ಹುಲಿ ಸೆರೆ ಹಿಡಿಯಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಬೋನಿಗೆ ಕೂಡಿ ಹಾಕಿರುವ ಗ್ರಾಮಸ್ಥರು
ನಾಗಮ್ಮ ನಟ ಪುನೀತ್ ರಾಜಕುಮಾರ್ ಸೋದರತ್ತೆ
ಚಾಮರಾಜನಗರ ತಾಲ್ಲೂಕಿನ ಜ್ಯೋತಿ ಗೌಡನಪುರದಲ್ಲಿ ಅಂಬೇಡ್ಕರ್ ಭಾವಚಿತ್ರ ಫ್ಲೆಕ್ಸ್‌ ಹರಿದು ಬುದ್ಧ ಹಾಗೂ ಅಂಬೇಡ್ಕರ್ ವಿಗ್ರಹಗಳನ್ನು ಭಗ್ನಗೊಳಿಸಿದ ಘಟನೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ದೃಶ್ಯ
ಬಂಡೀಪುರ ಅರಣ್ಯದೊಳಗೆ ರಾತ್ರಿ ಸಂಚಾರ ನಿರ್ಬಂಧ ಮುಂದುವರಿಸುವಂತೆ ಪರಿಸರ ಪ್ರೇಮಿಗಳು ‘ನಮ್ಮ ನಡಿಗೆ ಬಂಡೀಪುರದೆಡೆಗೆ’ ಪಾದಯಾತ್ರೆ ನಡೆಸಿದರು
ದೊಡ್ಡ ಗವಿಬಸಪ್ಪ
ಪ್ರೊ.ಎಸ್‌.ಮಲ್ಲಣ್ಣ

ಅಪಘಾತ ಕೊಲೆ ಸಾವಿನ ಸರಣಿ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಹಾಗೂ ಚಿಕ್ಕಿಂದುವಾಡಿ ಮುಖ್ಯ ರಸ್ತೆಯಲ್ಲಿ ಟಿಪ್ಪರ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ನಿತಿನ್ ಮಂಡ್ಯ ನಗರದ ಸುಹಾಸ್ ಹಲ್ಲೆಗೆರೆಯ ಶ್ರೇಯಸ್ ಮೈಸೂರಿನ ಶ್ರೀಲಕ್ಷ್ಮಿ ಹಾಗೂ ಪಿರಿಯಾಪಟ್ಟಣದ ಲಿಖಿತಾ ಮೃತಪಟ್ಟರು. ಚಾಮರಾಜನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಲಾರಿ ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಬಾಲಕರು ಮೃತಪಟ್ಟರು. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ಸಮೀಪವೇ ಗಿರೀಶ್ ಎಂಬಾತ ಪತ್ನಿ ವಿದ್ಯಾಳನ್ನು ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ. ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಮೂಲೆಹೊಳೆ ಚೆಕ್‌ಪೋಸ್ಟ್ ಬಳಿ ಆಭರಣ ತಯಾರಕನ ವಾಹನವನ್ನು ನ.22ರಂದು ಅಡ್ಡಗಟ್ಟಿ 1 ಕೆಜಿ 318 ಗ್ರಾಂ ಚಿನ್ನ ದೋಚಲಾಗಿತ್ತು.

ಹುಲಿ ದಾಳಿ: ಸಾವು–ನೋವು ಜೂನ್ 19ರಂದು ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದ ದೇಶಿಪುರ ಬೀಟ್‌ನಲ್ಲಿ ಹುಲಿ ದಾಳಿಗೆ ದೇಶಿಪುರ ಕಾಲೊನಿಯ ಪುಟ್ಟಮ್ಮ (32) ಮೃತರಾದರು. ಜಾನುವಾರು ಮೇಯಿಸುವಾಗ ಹುಲಿ ಏಕಾಏಕಿ ಮೇಲೆರಗಿ ಕೊಂದು ಹಾಕಿತ್ತು. ಜೂನ್ 10ರಂದು ಬಿಳಿಗಿರಿ ರಂಗನಾಥ ಸ್ವಾಮಿ ಅರಣ್ಯ ವ್ಯಾಪ್ತಿಯ ಬೇಡಗುಳಿ ಸಮೀಪದ ರಾಮಯ್ಯನ ಪೋಡಿನಲ್ಲಿ ಹುಲಿ ದಾಳಿಗೆ ರಂಗಮ್ಮ ಮೃತಪಟ್ಟಿದ್ದರು. ರವಿ ಎಂಬುವರ ಮೇಲೆ ದಾಳಿ ನಡೆದಿತ್ತು. ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು- ಕಲ್ಲಹಳ್ಳಿ ಗ್ರಾಮದ ಬಳಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹೆಣ್ಣು ಹುಲಿ ಮತ್ತು ಅದರ 3 ಮರಿಗಳನ್ನು ಅರಣ್ಯ ಇಲಾಖೆ ನ 10ರಂದು ಸೆರೆ ಹಿಡಿಯಿತು. ಚಾಮರಾಜನಗರ ತಾಲ್ಲೂಕಿನ ನಂಜೇದೇವನಪುರ ಗ್ರಾಮದ ಬಳಿ ಏಕಕಾಲದಲ್ಲಿ 5 ಹುಲಿಗಳು ಡಿ.20ರಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದವು. ಹುಲಿ ಸೆರೆ ಕಾರ್ಯಾಚರಣೆಗೆ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಡಿ.27ರಂದು ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಳ್ಳಬೇಟೆ ಶಿಬಿರದಲ್ಲಿ ಗಸ್ತು ನಡೆಸುವಾಗ ಹುಲಿ ದಾಳಿಗೆ ಸಣ್ಣ ಹೈದ (55) ಮೃತಪಟ್ಟಿದ್ದರು. ಗಸ್ತಿನಲ್ಲಿದ್ದ ಇಬ್ಬರು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಐತಿಹಾಸಿಕ ಸಚಿವ ಸಂಪುಟ ಸಭೆ ಏ.24ರಂದು ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆ ನಡೆದಿದ್ದು ಇದೇ ಮೊದಲು. ಚಾಮರಾಜನಗರದ ಒಳಚರಂಡಿ ವ್ಯವಸ್ಥೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕುಡಿಯುವ ನೀರಾವರಿ ಯೋಜನೆ ಕೆರೆ ತುಂಬಿಸುವ ಯೋಜನೆ ಸೇರಿದಂತೆ ₹ 3647 ಕೋಟಿ ವೆಚ್ಚದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು. ಏ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಲೆ ಮಹದೇಶ್ವರನ ದೇಗುಲದಲ್ಲಿ ಮಾದಪ್ಪನ ದರ್ಶನ ಪಡೆದು ಬೆಳ್ಳಿ ದಂಡುಕೋಲು ಸೇವೆಯಲ್ಲಿ ಭಾಗವಹಿಸಿ ಬೆಳ್ಳಿತೇರಿಗೆ ಪೂಜೆ ಸಲ್ಲಿಸಿದರು.

ದಲಿತ ಮಹಿಳೆಯ ಕಣ್ಣೀರು.. ಚಾಮರಾಜನಗರ ತಾಲ್ಲೂಕಿನ ಹೊಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಅಡುಗೆ ಸಹಾಯಕಿ ಬಿಸಿಯೂಟ ತಯಾರಿಸಿದರೆಂಬ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿರಲಿಲ್ಲ. ಇದರಿಂದ ಮನನೊಂದ ಅಡುಗೆ ಸಹಾಯಕಿ ಜೂನ್‌ 24ರಂದು ಕಣ್ಣೀರು ಹಾಕಿದ್ದರು. 

ಸಾಧನೆ–ಪ್ರಶಸ್ತಿಗಳ ಸಾಲು ಜಿಲ್ಲೆಯ ಯುವ ಸಾಹಿತಿ ಕೆ.ದಿಲೀಪ್ ಕುಮಾರ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಯುವ ಪುರಸ್ಕಾರ ದೊರೆಯಿತು. ಅವರ ‘ಪಚ್ಚೆಯ ಜಗಲಿ’ ವಿಮರ್ಶಾ ಸಂಕಲನಕ್ಕೆ ಪ್ರಶಸ್ತಿ ಒಲಿದು ಬಂತು.‌ ಜನಪದ ಗಾಯಕ ದೊಡ್ಡ ಗವಿಬಸಪ್ಪ ಅವರನ್ನು 2024–25ನೇ ಸಾಲಿನ ಜಾನಪದ ಶ್ರೀ ಪ್ರಶಸ್ತಿ ಹಾಗೂ ಪ್ರೊ.ಎಸ್‌.ಮಲ್ಲಣ್ಣ ಅವರು ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಆಯ್ಕೆಯಾದರು. ಗೃಹಲಕ್ಷ್ಮಿ ನೋಂದಣಿಯಲ್ಲಿ ಚಾಮರಾಜನಗರ ಜಿಲ್ಲೆಗೆ ಮೊದಲ ಸ್ಥಾನ ಪಡೆಯಿತು. ಯೋಜನೆಯು ಜಿಲ್ಲೆಯಲ್ಲಿ ಶೇ 99.97ರಷ್ಟು ಪ್ರಗತಿ ಕಂಡಿತು. ಮಕ್ಕಳ ವಾಕ್ ಹಾಗೂ ಶ್ರವಣ ಸಮಸ್ಯೆ ಗುರುತಿಸಿ ಚಿಕಿತ್ಸೆ ನೀಡುವ ರಾಜ್ಯದ ಮೊದಲ ಪ್ರಯಾಸ್ ಯೋಜನೆಗೆ ಚಾಮರಾಜನಗರದ ಕರಿನಂಜನಪುರ ಅಂಗನವಾಡಿ ಕೇಂದ್ರದಲ್ಲಿ ಚಾಲನೆ ನೀಡಲಾಯಿತು. ಜಿಲ್ಲಾಡಳಿತ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮೈಸೂರು ಮಧ್ಯೆ ಒಡಬಂಡಿಕೆಗೆ ಸಹಿ ಹಾಕಲಾಯಿತು. 2024–25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇ 73.97 ಫಲಿತಾಂಶ ದಾಖಲಿಸುವ ಮೂಲಕ ರಾಜ್ಯಕ್ಕೆ 13ನೇ ಸ್ಥಾನ ಪಡೆದುಕೊಂಡಿತು. ಆದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ 27ನೇ ಸ್ಥಾನಕ್ಕೆ ಕುಸಿಯಿತು. ಚಾಮರಾಜನಗರದ ಡಾ.ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ 14 ರಿಂದ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾವಳಿ ನಡೆಯಿತು. ಹಾಸನ ಜಿಲ್ಲೆ ಎಲ್ಲ ವಿಭಾಗಗಳಲ್ಲಿ ಚಾಂಪಿಯನ್‌ ಆಯಿತು.‌‌ ರಾಜ್ಯಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪವೂ ಜಿಲ್ಲೆಯಲ್ಲಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವು ಸಚಿವರು ಭಾಗವಹಿಸಿದ್ದರು. ಕೊಳ್ಳೇಗಾಲ ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮೊದಲ ಬಾರಿಗೆ ಫೆ.1 ಹಾಗೂ 2ರಂದು ಹಾಗೂ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಫೆ.25 ಹಾಗೂ 26ರಂದು ‘ಪಕ್ಷಿ ಗಣತಿ’ ಕಾರ್ಯಕ್ರಮ ನಡೆಯಿತು. 

ನೀರುಗಂಟಿ ಆತ್ಮಹತ್ಯೆ; ಅಂಬೇಡ್ಕರ್‌ ವಿಗ್ರಹ ಭಗ್ನ ಬಾಕಿ ವೇತನ ಸಿಗದೆ ಮನನೊಂದು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿಡಿಒ ಕಿರುಕುಳಕ್ಕೆ ಬೇಸತ್ತು ಚಾಮರಾಜನಗರ ತಾಲ್ಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿಯ ನೀರಗಂಟಿ ಚಿಕ್ಕೂಸನಾಯಕ ಅ.18ರಂದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಚಾಮರಾಜನಗರ ತಾಲ್ಲೂಕಿನ ಜ್ಯೋತಿ ಗೌಡನಪುರದಲ್ಲಿ ಕಿಡಿಗೇಡಿಗಳು ಅ.23ರಂದು ಅಂಬೇಡ್ಕರ್ ಭಾವಚಿತ್ರ ಫ್ಲೆಕ್ಸ್‌ ಹರಿದು ಬುದ್ಧ ಹಾಗೂ ಅಂಬೇಡ್ಕರ್ ವಿಗ್ರಹಗಳನ್ನು ಭಗ್ನಗೊಳಿಸಿ ವಿಕೃತಿ ಮೆರೆದಿದ್ದರು. ಈ ಘಟನೆ ಖಂಡಿಸಿ ಜಿಲ್ಲೆಯಾದ್ಯಂತ ಸರಣಿ ಪ್ರತಿಭಟನೆಗಳು ನಡೆದವು. ಘಟನೆ ಸಂಬಂಧ ಮಂಜುನಾಥ್ ಎಂಬಾತನನ್ನು ಬಂಧಿಸಲಾಯಿತು.

ಆಕ್ಸಿಜನ್‌ ದುರಂತ ಸಂತ್ರಸ್ತರಿಗೆ ಉದ್ಯೋಗ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಮೃತಪಟ್ಟವರ ಅವಲಂಬಿತರಿಗೆ ಉದ್ಯೋಗ ನೀಡಲು ಸರ್ಕಾರ ಡಿ.7ರಂದು ತೀರ್ಮಾನಿಸಿತು. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 2021ರ ಮೇ 2ರಂದು ಆಕ್ಸಿಜನ್‌ ಕೊರತೆಯಿಂದ 31 ಮಂದಿ ಮೃತಪಟ್ಟಿದ್ದರು. ಬಳಿಕ ಮೃತರ ಕುಟುಂಬಸ್ಥರು ಸರ್ಕಾರಿ ಉದ್ಯೋಗ ಹಾಗೂ ಪರಿಹಾರಕ್ಕಾಗಿ ನಿರಂತರ ಹೋರಾಟ ನಡೆಸಿದ್ದರು.

ಬೋನಿನೊಳಗೆ ಕೂಡಿಹಾಕಿದರು.. ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ ಸೆರೆ ಹಿಡಿಯಲು ವಿಫಲರಾಗಿದ್ದಾರೆ ಎಂದು ಸಿಟ್ಟಿಗೆದ್ದ ರೈತರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೇ ಬೋನಿನೊಳಗೆ ಕೂಡಿ ಹಾಕಿ ದಿಗ್ಬಂಧನ ವಿಧಿಸಿದ್ದರು.  ಗುಂಡ್ಲುಪೇಟೆ ತಾಲೂಕಿನ ನಾಲ್ಕನೇ ಹಂತದ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಾಲ್ಲೂಕು ಕಚೇರಿ ಎದುರು 36 ದಿನ ಪ್ರತಿಭಟನೆ ನಡೆಸಲಾಯಿತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಯುತ್ನಿಸಿದ ಘಟನೆ ಖಂಡಿಸಿ ಶನಿವಾರ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಕರೆ ನೀಡಲಾಗಿದ್ದ ಚಾಮರಾಜನಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಆಯ್ಕೆಯಾದವರು–ಅನರ್ಹಗೊಂಡವರು ಸಂತೇಮರಹಳ್ಳಿಯಲ್ಲಿರುವ ಚಾಮರಾಜನಗರ ಹಾಲು ಒಕ್ಕೂಟದ (ಚಾಮೂಲ್) ನೂತನ ಅಧ್ಯಕ್ಷರಾಗಿ ನಂಜುಂಡಸ್ವಾಮಿ ಅವಿರೋಧ ಆಯ್ಕೆಯಾದರು.  ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದ ಹಾಗೂ ಚುನಾವಣೆಗೆ ಗೈರಾಗಿದ್ದ ನಗರಸಭೆಯ ನಾಲ್ವರು ಸದಸ್ಯರಾದ ಎಸ್‌.ನೀಲಮ್ಮ ಚಂದ್ರಕಲಾ ಬಿ.ಎಸ್‌ ಆರ್.ಪಿ.ನಂಜುಡಸ್ವಾಮಿ ಹಾಗೂ ಭಾಗ್ಯಾ ಅವರ ಸದಸ್ಯತ್ವವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅನರ್ಹಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.