ADVERTISEMENT

ಚಾಮರಾಜನಗರ: 35,000 ಅಂಗನವಾಡಿ ಮಕ್ಕಳ ತಪಾಸಣೆ

ಮಕ್ಕಳ ವಾಕ್ ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಯೋಜನೆ ಅನುಷ್ಠಾನ: ಅಂಗನವಾಡಿ ಕಾರ್ಯರ್ತೆಯರಿಗೆ ತರಬೇತಿ ಆರಂಭ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:03 IST
Last Updated 8 ಸೆಪ್ಟೆಂಬರ್ 2025, 6:03 IST
ಮಕ್ಕಳ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆಗೆ ಪೂರಕವಾಗಿ ಅನುಷ್ಠಾನಗೊಳಿಸಿರುವ ಪ್ರಯಾಸ್‌ ಯೋಜನೆಯ ಭಾಗವಾಗಿ ಮೈಸೂರಿನ ಎಐಐಎಸ್‌ಎಚ್ ಸಭಾಂಗಣದಲ್ಲಿ ಈಚೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಕ್ರಮ ನಡೆಯಿತು
ಮಕ್ಕಳ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆಗೆ ಪೂರಕವಾಗಿ ಅನುಷ್ಠಾನಗೊಳಿಸಿರುವ ಪ್ರಯಾಸ್‌ ಯೋಜನೆಯ ಭಾಗವಾಗಿ ಮೈಸೂರಿನ ಎಐಐಎಸ್‌ಎಚ್ ಸಭಾಂಗಣದಲ್ಲಿ ಈಚೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಕ್ರಮ ನಡೆಯಿತು   

ಚಾಮರಾಜನಗರ/ಮೈಸೂರು: ಮಕ್ಕಳಲ್ಲಿ ಕಾಣಿಸಿಕೊಳ್ಳುವ ವಾಕ್-ಶ್ರವಣ ಸಮಸ್ಯೆಗಳನ್ನು ಮೂಲದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಮೊದಲ ವಿನೂತನ ಪ್ರಯಾಸ್ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಕಾರ್ಯಕ್ರಮದ ಭಾಗವಾಗಿ ತರಬೇತಿ ಮೂಲಕ ಅಂಗನವಾಡಿ ಕಾರ್ಯಕರ್ತೆಯರನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಹೇಳಿದರು.

ಮೈಸೂರಿನಲ್ಲಿ ಈಚೆಗೆ ಎಐಐಎಸ್‌ಎಚ್ ಸಭಾಂಗಣದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿ, ಜಿಲ್ಲೆಯಲ್ಲಿ 6 ತಿಂಗಳಿನಿಂದ 6 ವರ್ಷವರೆಗಿನ ಮಕ್ಕಳಲ್ಲಿ ಸರಿಯಾಗಿ ಮಾತು ಬಾರದ, ಕಿವಿ ಕೇಳದ ಸಮಸ್ಯೆಗಳು ಕಂಡುಬಂದಲ್ಲಿ ಆರಂಭದಲ್ಲೇ ವಾಕ್ ಮತ್ತು ಶ್ರವಣ ತಜ್ಞರಿಂದ ತಪಾಸಣೆ ನಡೆಸಿ ಗುರುತಿಸಿ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ.

ಮಹತ್ವದ ಯೋಜನೆ ಯಶಸ್ಸಿನ ಹಿಂದೆ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹಳ ಮುಖ್ಯವಾಗಿದೆ. ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಯಲ್ಲಿ ಜಿಲ್ಲೆಯ 1,344 ಅಂಗನವಾಡಿ ಕಾರ್ಯಕರ್ತೆಯರಿಗೆ ಐದು ದಿನಗಳ ತರಬೇತಿ ನೀಡಲಾಗುತ್ತಿದೆ ಎಂದರು.

ADVERTISEMENT

ಜಿಲ್ಲೆಯ ಅಂಗನವಾಡಿಗಳಲ್ಲಿ 35,000 ಮಕ್ಕಳು ಇದ್ದು ವಾಕ್ ಹಾಗೂ ಶ್ರವಣ ಸಮಸ್ಯೆ ಇವೆಯೇ ಎಂದು ಅಂಗನವಾಡಿ ಕಾರ್ಯಕರ್ತೆಯರು ಗುರುತಿಸಲಿದ್ದಾರೆ. ಬಳಿಕ ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ತಜ್ಞರು ತಪಾಸಣೆಗೆ ಒಳಪಡಿಸಿ ಅಗತ್ಯ ಚಿಕಿತ್ಸೆ ನೀಡಲಿದ್ದಾರೆ. ಅಗತ್ಯವಿರುವ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಸಿಎಸ್‌ಆರ್ ನಿಧಿ ಬಳಕೆ ಮಾಡಿಕೊಂಡು ಉಪಕರಣಗಳನ್ನು ಉಚಿತವಾಗಿ ನೀಡಲಾಗುವುದು. ಯೋಜನೆಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದ್ದಾರೆ ಎಂದರು.

ಪ್ರಯಾಸ್ ಯೋಜನೆ ಯಶಸ್ವಿಗೆ ಅಂಗನವಾಡಿ ಕಾರ್ಯಕರ್ತೆಯರ ಶ್ರಮಿಸಬೇಕು, ತಾಯಿಯಂತೆ ಮಕ್ಕಳನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಂಡು ಮಕ್ಕಳ ವಾಕ್ ಮತ್ತು ಶ್ರವಣ ಸಮಸ್ಯೆ ಗುರುತಿಸಬೇಕು. ತರಬೇತಿ ಅನುಭವವನ್ನು ಕಾರ್ಯಕ್ಷೇತ್ರದ ಅಂಗನವಾಡಿಗಳಲ್ಲಿ ಅನುಷ್ಠಾನಗೊಳಿಸಿದರೆ ಮಕ್ಕಳ ಭವಿಷ್ಯ ಉತ್ತಮವಾಗುತ್ತದೆ. ಪ್ರತಿ ಅಂಗನವಾಡಿ ಕಾರ್ಯಕರ್ತೆಯರು ಉತ್ಸಾಹದಿಂದ ಕಾರ್ಯಕ್ರಮದ ಯಶಸ್ಸಿಗೆ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಆರಂಭದಲ್ಲಿಯೇ ಮಕ್ಕಳಲ್ಲಿ ಸಮಸ್ಯೆ ಗುರುತಿಸಿ ಚಿಕಿತ್ಸೆ ನೀಡಿದರೆ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಯಾಗಲಿದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪ್ರಯಾಸ್ ಯೋಜನೆ ಹೆಚ್ಚು ಮಹತ್ವದ್ದಾಗಿದ್ದು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್ ಮಾತನಾಡಿ ಜಿಲ್ಲಾಡಳಿತದ ವಿಶೇಷ ಕಳಕಳಿಯ ಫಲವಾಗಿ ಪ್ರಯಾಸ್ ಯೋಜನೆ ರೂಪುಗೊಂಡು ಅನುಷ್ಠಾನವಾಗುತ್ತಿದೆ. ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ದೃಷ್ಟಿಯಿಂದ ಯೋಜನೆ ಯಶಸ್ಸು ಸಾಧಿಸಬೇಕು ಎಂದು  ಆರೈಸಿದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪುಷ್ಪಾವತಿ ಮಾತನಾಡಿ ‘ವಾಕ್ ಮತ್ತು ಶ್ರವಣ ಸಮಸ್ಯೆಯಿಂದ ಬಳಲುತ್ತಿರುವವರು ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದು ಬದುಕು ರೂಪಿಸಿಕೊಂಡಿದ್ದಾರೆ. ಉನ್ನತ ಶಿಕ್ಷಣದ ಜೊತೆಗೆ ಉದ್ಯೋಗ ಪಡೆದು ಯಶಸ್ಸು ಕಂಡಿದ್ದಾರೆ. ಮಕ್ಕಳಲ್ಲಿ ಆರಂಭಿಕ ಹಂತದಲ್ಲಿಯೇ ಸಮಸ್ಯೆ ಗುರುತಿಸಿ ಚಿಕಿತ್ಸೆ ನೀಡುವುದು ಅತ್ಯಗತ್ಯವಾಗಿದ್ದು ಪೋಷಕರು ನಿರ್ಲಕ್ಷ್ಯ ವಹಿಸಬಾರದು ಎಂದರು.

ಆಡಿಯಾಲಾಜಿ ವಿಭಾಗದ ಪ್ರೊ.ಡಾ.ಎಂ.ಸಂದೀಪ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಸುರೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.