ADVERTISEMENT

ಚಾಮರಾಜನಗರ | ನಿರೀಕ್ಷೆಗಳು ಹಲವು; ಈಡೇರಲಿ ಎಲ್ಲವೂ

ಬಾಲಚಂದ್ರ ಎಚ್.
Published 6 ಜನವರಿ 2026, 7:10 IST
Last Updated 6 ಜನವರಿ 2026, 7:10 IST
ಚಾಮರಾಜನಗರ ಜಿಲ್ಲಾಡಳಿತ ಭವನ
ಚಾಮರಾಜನಗರ ಜಿಲ್ಲಾಡಳಿತ ಭವನ   

ಚಾಮರಾಜನಗರ: ಹೊಸ ವರ್ಷ 2026 ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಅಭಿವೃದ್ಧಿಯ ‌ಆಶಾಭಾವ ಮೂಡಿಸಿದೆ. ಪ್ರೊ.ಡಿ.ಎಂ.ನಂಜುಂಡಪ್ಪ ವರದಿಯ ಪ್ರಕಾರ ಅತಿ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗುವುದೇ, ಅಭಿವೃದ್ಧಿಗೆ ಒತ್ತು ಸಿಗಬಹುದೇ, ಜ್ವಲಂತ ಸಮಸ್ಯೆಗಳು ಪರಿಹಾರವಾಗುವುದೇ, ಜನರ ಆಶೋತ್ತರಗಳಿಗೆ ಸ್ಪಂದನ ದೊರೆಯಲಿದೆಯೇ ಎಂಬ ನಿರೀಕ್ಷೆಗಳು ದಟ್ಟವಾಗಿವೆ.

ಹೊಸ ವರ್ಷದ ಆರಂಭದಲ್ಲೇ ‌ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಹಿತ ಸ್ಥಳೀಯ ನಗರಾಡಳಿತ ಸಂಸ್ಥೆಗಳ ಅಧಿಕಾರಿಗಳ ವರ್ಗಾವಣೆಯಾಗಿದ್ದು, ಅವರ ಸ್ಥಾನಗಳಿಗೆ ಹೊಸ ಅಧಿಕಾರಿಗಳು ಬಂದಿದ್ದಾರೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನೂತನ ಅಧಿಕಾರಿಗಳ ಮೇಲೆ ಬೆಟ್ಟದಷ್ಟು ಭರವಸೆಗಳಿವೆ, ಜೊತೆಗೆ ಸವಾಲುಗಳೂ ಇವೆ. 

ಕೆಲವು ವರ್ಷಗಳಿಂದ ಜಿಲ್ಲೆ ಅಭಿವೃದ್ಧಿಯ ಪಥಕ್ಕೆ ಮಗ್ಗುಲು ಬದಲಿಸಿದ್ದರೂ ವೇಗ ಸಾಲದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು ಸ್ಪಂದಿಸಬೇಕಾಗಿದ್ದು ಮುಂದಿರುವ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಜಿಲ್ಲೆಯ ಅಭಿವೃದ್ಧಿಯ ಓಟಕ್ಕೆ ವೇಗ ಕೊಡಬೇಕಾಗಿದೆ.

ADVERTISEMENT

ಮಾನವ–ಪ್ರಾಣಿ ಸಂಘರ್ಷ ನಿವಾರಣೆಯಾಗಲಿ:

ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣದ ಪೈಕಿ ಶೇ 50ಕ್ಕೂ ಹೆಚ್ಚು ಭೂಭಾಗ ಅರಣ್ಯ ಪ್ರದೇಶದಿಂದ ಕೂಡಿದ್ದು, ಮಾನವ–ಪ್ರಾಣಿ ಸಂಘರ್ಷ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಕಾಡು ಬಿಟ್ಟು ನಾಡಿನತ್ತ ನುಗ್ಗುತ್ತಿರುವ ವನ್ಯಜೀವಿಗಳು ರೈತರ ಬೆಳೆಗಳನ್ನು ನಾಶಮಾಡುತ್ತಿದ್ದು, ಜನ ಜಾನುವಾರುಗಳ ಜೀವಕ್ಕೆ ಕಂಟಕವಾಗಿವೆ. ಹಾಗೆಯೇ ಮಾನವನ ಪ್ರತೀಕಾರಕ್ಕೆ ಕಾಡುಪ್ರಾಣಿಗಳು ಸಾವನ್ನಪ್ಪುತ್ತಿವೆ. 

ಮಾನವ ಪ್ರಾಣಿ ಸಂಘರ್ಷ ಮಿತಿಮೀರಿರುವ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಾಡಂಚಿನ ಜನರ ಮಧ್ಯೆ ನಿರ್ಮಾಣವಾಗಿರುವ ಕಂದಕ ದೊಡ್ಡದಾಗಿದ್ದು ದ್ವೇಷ ಹೆಪ್ಪುಗಟ್ಟಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಘರ್ಷದ ವಾತಾವರಣ ತಿಳಿಗೊಳಿಸಿ ಮಾನವ–ಪ್ರಾಣಿ ಸಂಘರ್ಷ ತಗ್ಗಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಹೊಣೆಗಾರಿಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಮೇಲಿದೆ. 

ಹಾಡಿಗಳಿಗೆ ಬೇಕು ಮೂಲಸೌಕರ್ಯ:

ಜಿಲ್ಲೆಯಲ್ಲಿ ಬಿಳಿಗಿರಿ ರಂಗನಾಥಸ್ವಾಮಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿ ಧಾಮಗಳಿದ್ದು ಇವುಗಳಿಗೆ ಹೊಂದಿಕೊಂಡಿರುವ ಹಾಡಿಗಳಲ್ಲಿ ಸಾವಿರಾರು ಆದಿವಾಸಿಗಳು ಬದುಕು ಕಟ್ಟಿಕೊಂಡಿದ್ದಾರೆ. ಇಂದಿಗೂ ಬಹಳಷ್ಟು ಹಾಡಿಗಳಲ್ಲಿ ವಿದ್ಯುತ್, ಕುಡಿಯುವ ನೀರು, ರಸ್ತೆ, ಶಿಕ್ಷಣ, ಆರೋಗ್ಯದಂತಹ ಕನಿಷ್ಠ ಮೂಲಸೌಕರ್ಯಗಳು ಇಲ್ಲ.

ಈಚೆಗೆ ರಾಜ್ಯ ಸರ್ಕಾರ 19 ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸುವ ಕಾಮಗಾರಿ ಆರಂಭಿಸಿದ್ದರೂ ಬಿಗಿಯಾದ ಅರಣ್ಯ ಕಾನೂನುಗಳು ತೊಡಕಾಗಿದ್ದು ನಿರೀಕ್ಷಿತ ವೇಗದಲ್ಲಿ ಕಾಮಗಾರಿಗಳು ಸಾಗುತ್ತಿಲ್ಲ. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಹರಿಗೆ ಹಕ್ಕುಪತ್ರಗಳು ಸಿಕ್ಕಿಲ್ಲ. ವಾಸ ಮಾಡಲು ಮನೆಗಳು ಮಂಜೂರಾಗಿಲ್ಲ, ಹಾಡಿಗಳಲ್ಲಿರುವ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು ತಡೆ ಬಿದ್ದಿಲ್ಲ, ಸಾರಿಗೆ ಸೌಲಭ್ಯಗಳು ತಲುಪಿಲ್ಲ, ಆದಿವಾಸಿಗಳ ಆರೋಗ್ಯ ಕಾಳಜಿ ವಹಿಸಬೇಕಾಗಿದೆ.

ದೂರ ದೃಷ್ಟಿಯ ಯೋಜನೆಗಳು ಬೇಕು:

ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ದೂರದೃಷ್ಟಿಯ ಯೋಜನೆ ರೂಪಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಫಲರಾಗಿರುವ ಪರಿಣಾಮ ಜಿಲ್ಲೆ ಅಭಿವೃದ್ಧಿ ಕಂಡಿಲ್ಲ. ಮುಂದಿನ 25 ವರ್ಷಗಳ ಅಭಿವೃದ್ಧಿ ನೀಲನಕ್ಷೆ ಸಿದ್ಧಪಡಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ. ಈ ಕಾರ್ಯ ಜಿಲ್ಲೆಯ ಶಾಸಕರು, ಸಚಿವರು, ಅಧಿಕಾರಿಗಳು ಇಚ್ಛಾಶಕ್ತಿ ತೋರಿದರೆ ಮಾತ್ರ ಈ ಕಾರ್ಯ ಸಾಧ್ಯವಾಗಲಿದೆ.

ಚಾಮರಾಜನಗರ, ಹನೂರು, ಗುಂಡ್ಲುಪೇಟೆ ತಾಲ್ಲೂಕುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು, ಈಗಾಗಲೇ ಪ್ರಗತಿಯಲ್ಲಿರುವ ಕುಡಿಯುವ ನೀರಿನ ಪೂರೈಕೆ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಬೇಕು. ಕಬಿನಿ ಎರಡನೇ ಹಂತದ ಯೋಜನೆ ಜಾರಿ ಮೂಲಕ ಜಿಲ್ಲೆಯ ಕೃಷಿ ಕ್ಷೇತ್ರವನ್ನು ಬಲಪಡಿಸಬೇಕು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು.

ಬಲಗೊಳ್ಳಲಿ ಕೈಗಾರಿಕಾ ಕ್ಷೇತ್ರ:

ಜಿಲ್ಲೆಯಲ್ಲಿ ಬದನಗುಪ್ಪೆ–ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಗಳಿದ್ದರೂ ನಿರೀಕ್ಷಿತ ಪ್ರಮಾಣದ ಉದ್ದಿಮೆಗಳು ಆರಂಭವಾಗಿಲ್ಲ. ಕೌಶಲ ಕೊರತೆಯ ಕಾರಣಕ್ಕೆ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ, ವಾಣಿಜ್ಯ ಚಟುವಟಿಕೆಗಳು ವೇಗ ಪಡೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ, ಜಿಲ್ಲೆಯ ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ (ಆಹಾರ ಸಂಸ್ಕರಣಾ ಘಟಕಗಳು) ಕೈಗಾರಿಕೆಗಳು ಸ್ಥಾಪನೆಯಾಗಬೇಕು. 

ಪ್ರವಾಸೋದ್ಯಮಕ್ಕೆ ಸಿಗಲಿ ಒತ್ತು:

ಜಿಲ್ಲೆಯ ಪ್ರಾಕೃತಿಕ ಹಾಗೂ ಧಾರ್ಮಿಕವಾಗಿ ಶ್ರೀಮಂತವಾಗಿದ್ದರೂ ಪ್ರವಾಸೋದ್ಯಮ ಕ್ಷೇತ್ರ ತೀರಾ ಹಿಂದುಳಿದಿದೆ. ತಲಾ ಎರಡು ಹುಲಿ ಸಂರಕ್ಷಿತ ಪ್ರದೇಶ, ವನ್ಯಜೀವಿ ಧಾಮಗಳು, ಮಲೆ ಮಹದೇಶ್ವರ ದೇವಸ್ಥಾನ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿದ್ದರೂ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಸಾರಿಗೆ, ವಸತಿ, ಹೋಟೆಲ್‌ ಸೇರಿದಂತೆ ಪ್ರವಾಸಿ ಸ್ನೇಹಿ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕಿದೆ. 

ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮ
ಸಿ.ಮಾದೇಗೌಡ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ
ಸಿ.ಎಂ.ನರಸಿಂಹ ಮೂರ್ತಿ
ಕೆ.ವೆಂಕಟರಾಜು
ಯಾರು ಏನಂತಾರೆ ? ‘ಮೂಲನಿವಾಸಿಗಳ ಸಮಸ್ಯೆಗೆ ಸ್ಪಂದಿಸಿ‘ ನೆಲದ ಮೂಲನಿವಾಸಿಗಳಾದ ಆದಿವಾಸಿಗಳು ಇಂದಿಗೂ ಸಮಾಜದ ಮುಖ್ಯವಾಹಿನಿಗೆ ತೆರೆದುಕೊಂಡಿಲ್ಲ. ಅರಣ್ಯ ಹಕ್ಕು ಕಾಯ್ದೆಯ ಲಾಭ ಎಲ್ಲರಿಗೂ ದೊರೆತಿಲ್ಲ. ಸಮುದಾಯ ಶಿಕ್ಷಣದಿಂದ ವಂಚಿತವಾಗಿದೆ. ಸರ್ಕಾರ ಆಶ್ರಮ ಶಾಲೆಗಳನ್ನು ಮೇಲ್ದರ್ಜೆಗೇರಿಸಿದ್ದರೂ ಕಾಯಂ ಶಿಕ್ಷಕರನ್ನು ನೇಮಕ ಮಾಡಿಲ್ಲ ಹೊಸ ಕೊಠಡಿಗಳ ನಿರ್ಮಾಣ ಮಾಡಿಲ್ಲ. ಹಾಡಿಗಳಿಗೆ ಮೂಲಸೌಲಭ್ಯಗಳು ದೊರೆತಿಲ್ಲ. ಹೊಸ ವರ್ಷ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ ಎಂಬ ನಂಬಿಕೆ ಇದೆ.
ಡಾ.ಸಿ.ಮಾದೇಗೌಡ
ಆದಿವಾಸಿ ಸಮುದಾಯಗಳ ಮುಖಂಡ ‘ವೈದ್ಯಕೀಯ ಕ್ಷೇಮನಿಧಿ ಸ್ಥಾಪಿಸಿ’ ಜನಪದ ಕಲಾವಿದರು ಅನಾರೋಗ್ಯಕ್ಕೆ ತುತ್ತಾಗುಗುತ್ತಿದ್ದು ವೈದ್ಯಕೀಯ ನೆರವು ಸಿಗಬೇಕು ಜಾನಪದ ಕಲಾವಿದರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು
ಪುಟ್ಟಮಲ್ಲೇಗೌಡ
ಜಾನಪದ ಟ್ರಸ್ಟ್‌ ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ್ದರೂ ಇದುವರೆಗೂ ಅನುಷ್ಠಾನಗೊಂಡಿಲ್ಲ ಕಲಾವಿದರಿಗೆ ತರಬೇತಿ ಆರ್ಥಿಕ ನೆರವು ದೊರೆಯಬೇಕು. ಸಿಎಂ. ಕೃಷ್ಣಮೂರ್ತಿ ಜಾನಪದ ಕಲಾವಿದ ‘ಕೃಷಿ ಜಮೀನು ಪೋಡು ಮಾಡಿ’ ಹಿಂದಿನ ಜಿಲ್ಲಾಧಿಕಾರಿ ಶಿಲ್ಪಾನಾಗ್ ಕೈಗೆತ್ತಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಇಂದಿನ ಜಿಲ್ಲಾಧಿಕಾರಿ ಮುಂದುವರಿಸಬೇಕು. ಕೃಷಿ ಜಮೀನು ಪೋಡುಗಳಾಗದೆ ಸರ್ಕಾರದ ಸವಲತ್ತುಗಳು ಸಿಗದೆ ವಂಚಿತವಾಗಿದ್ದು ಪೋಡು ಅಭಿಯಾನ ನಡೆಯಬೇಕು. ಜಿಲ್ಲೆಯಲ್ಲಿ ಹಸಿರೀಕರಣಕ್ಕೆ ಒತ್ತು ನೀಡಬೇಕು ಚಾಮರಾಜೇಶ್ವರ ನಿರ್ಮಾಣವಾಗಿ 200 ವರ್ಷಗಳು ಸಲ್ಲುತ್ತಿದ್ದು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಬೇಕು.
ಕೆ.ವೆಂಕಟರಾಜು ರಂಗಕರ್ಮಿ

ಮೂಲಸೌಕರ್ಯಕ್ಕೆ ಸಿಗಲಿ ಒತ್ತು ಚಾಮರಾಜನಗರ ಗುಂಡ್ಲುಪೇಟೆ ಕೊಳ್ಳೇಗಾಲ ಹನೂರು ತಾಲ್ಲೂಕುಗಳಲ್ಲಿ ವ್ಯವಸ್ಥಿತ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳಂತೆ ಸಕಲ ಸೌಲಭ್ಯಗಳನ್ನು ಒಳಗೊಂಡಿರುವ ಜನವಸತಿ ಬಡಾವಣೆಗಳು ನಿರ್ಮಾಣವಾಗದಿರುವುದು ಸ್ಥಳೀಯ ಆಡಳಿತ ವ್ಯವಸ್ಥೆಯ ಲೋಪವನ್ನು ತೋರಿಸುತ್ತದೆ. ಚಾಮರಾಜನಗರಕ್ಕೆ 10 ದಿನಗಳಿಗೊಮ್ಮೆಯೂ ಕುಡಿಯುವ ನೀರು ಬಿಡುತ್ತಿಲ್ಲ ಬಡಾವಣೆಗಳ ರಸ್ತೆಗಳು ಡಾಂಬಾರ್ ಮುಖ ಕಂಡಿಲ್ಲ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆಗಳು ಅವ್ಯವಸ್ಥೆಯಿಂದ ಕೂಡಿವೆ ಎಂಬ ದೂರುಗಳು ವ್ಯಾಪಕವಾಗಿವೆ. 

ಚಾಮರಾಜನಗರ ಜಿಲ್ಲೆಗೆ ಏನಾಗಬೇಕು  ಕ್ಲಬ್‌ಗಳಲ್ಲಿ ಜೂಜು ಸಹಿತ ಕಾನೂನು ಬಾಹಿರ ಚಟುವಟಿಕೆಗಳಿಗೆ ತಡೆ ಅಗತ್ಯ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ತಡೆ ಅಗತ್ಯ ಗಸ್ತು ವ್ಯವಸ್ಥೆ ಬಲಗೊಳ್ಳಲಿ; ಅಪರಾಧ ಕೃತ್ಯಗಳು ಕಡಿಮೆಯಾಗಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತಾ ಕ್ರಮ ಅನುಷ್ಠಾನಗೊಳ್ಳಲಿ ಆರೋಗ್ಯ ಶಿಕ್ಷಣ ಕ್ಷೇತ್ರ ಬಲಗೊಳ್ಳಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿ ಜಾನಪದ ಕಲೆಗಳ ಉಳಿವಿಗೆ ನೆರವು ಕಲಾವಿದರ ಕಲಾ ಪ್ರದರ್ಶನಕ್ಕೆ ವೇದಿಕೆ ಸಿಗಲಿ ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಯಾಗಲಿ ಸಾವಯವ ಕೃಷಿ ಹಾಗೂ ಮಾರುಕಟ್ಟೆಗೆ ಒತ್ತು ಸಿಗಲಿ ಚಾಮರಾಜನಗರ–ಹೆಜ್ಜಾಲ ರೈಲು ಮಾರ್ಗವಾಗಲಿ ಮಾಲಂಗಿ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳಲಿ  ಮತ್ತೊಂದು ಕಂದಾಯ ಉಪ ವಿಭಾಗ ರಚನೆಯಾಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.