ADVERTISEMENT

ಅರಣ್ಯ ಇಲಾಖೆ: ಶೇ 59 ಹುದ್ದೆಗಳು ಖಾಲಿ

ಮಾನವ ಪ್ರಾಣಿ ಸಂಘರ್ಷ ತಡೆ, ಅರಣ್ಯ ಸಂಪತ್ತು, ವನ್ಯಜೀವಿಗಳ ರಕ್ಷಣೆಗಿಲ್ಲ ಅಗತ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ

ಬಾಲಚಂದ್ರ ಎಚ್.
Published 23 ಜನವರಿ 2026, 2:35 IST
Last Updated 23 ಜನವರಿ 2026, 2:35 IST
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದ ನೋಟ
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದ ನೋಟ    

ಚಾಮರಾಜನಗರ: ಜಿಲ್ಲೆಯಲ್ಲಿ ಮಾನವ–ಪ್ರಾಣಿ ಸಂಘರ್ಷ ತಡೆಯಲು ಹಾಗೂ ಅರಣ್ಯ ಸಂಪತ್ತು, ವನ್ಯಜೀವಿ ರಕ್ಷಣೆ ಮಾಡಲು ಅರಣ್ಯ ಇಲಾಖೆಯಲ್ಲಿ  ಅಧಿಕಾರಿ ಹಾಗೂ ಸಿಬ್ಬಂದಿಯ ಕೊರತೆ ಕಾಡುತ್ತಿದೆ.

ಚಾಮರಾಜನಗರ ವೃತ್ತ ವ್ಯಾಪ್ತಿಗೊಳಪಡುವ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮಗಳು, ಬಿಳಿಗಿರಿ ರಂಗನಾಥ ಸ್ವಾಮಿ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ಸರ್ಕಾರದಿಂದ 1334 ಹುದ್ದೆಗಳು ಮಂಜೂರಾಗಿವೆ. ಆದರೆ, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವುದು 547 ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾತ್ರ.

ಜಿಲ್ಲೆಯಲ್ಲಿ ತಲಾ ಒಬ್ಬರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು, ನಾಲ್ವರು ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಉಳಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ.

ADVERTISEMENT

13 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ಮಂಜೂರಾಗಿದ್ದರೂ 9 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ, 47 ವಲಯ ಅರಣ್ಯಾಧಿಕಾರಿ ಹುದ್ದೆಗಳ ಪೈಕಿ 27 ಅಧಿಕಾರಿಗಳನ್ನು ಮಾತ್ರ ಭರ್ತಿ ಮಾಡಿದ್ದು 20 ಹುದ್ದೆಗಳು ಖಾಲಿ ಇವೆ. ಹಾಗೆಯೇ 185 ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಿಣಿದಾರ ಹುದ್ದೆಗಳ ಪೈಕಿ 148 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಂಚೂಣಿ ಸಿಬ್ಬಂದಿಗಳ ಕೊರತೆ:

ಅರಣ್ಯದೊಳಗೆ ಕಳ್ಳಬೇಟೆ ತಡೆಯುವುದು, ಅತಿಕ್ರಮ ಪ್ರವೇಶ ತಡೆ, ವನ್ಯಜೀವಿಗಳ ರಕ್ಷಣೆ, ಅಗ್ನಿ ಅವಘಡಗಳು ಸಂಭವಿಸಿದಂಥೆ ಬೆಂಕಿ ರೇಖೆಗಳ ನಿರ್ಮಾಣ, ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ ಸೇರಿದಂತೆ ಮುಂಚೂಣಿಯಲ್ಲಿ ಕೆಲಸ ಮಾಡುವವರು ಗಸ್ತು ಅರಣ್ಯ ಪಾಲಕರು ಹಾಗೂ ಅರಣ್ಯ ವೀಕ್ಷಕರು.

ಜಿಲ್ಲೆಯಲ್ಲಿ ಅರಣ್ಯ ರಕ್ಷಕರು ಹಾಗೂ ವೀಕ್ಷಕರ ಹುದ್ದೆಗಳು ಬಹಳಷ್ಟು ಖಾಲಿ ಉಳಿದಿರುವುದರಿಂದ ಪರಿಣಾಮಕಾರಿಯಾಗಿ ಮಾನವ ಪ್ರಾಣಿ ಸಂಘರ್ಷ ಪ್ರಕರಣಗಳನ್ನು ತಡೆಯುವುದು ಸೇರಿದಂತೆ ಇಲಾಖೆಯ ಕೆಲಸ ಕಾರ್ಯಗಳು ಸುಗಮವಾಗಿ ನಡೆಸಲು ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು.

ಜಿಲ್ಲೆಗೆ 726 ಗಸ್ತು ಅರಣ್ಯ ಪಾಲಕರ ಹುದ್ದೆಗಳು ಮಂಜೂರಾಗಿದ್ದರೂ ಕೇವಲ 297 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು 429 ಹುದ್ದೆಗಳು ಖಾಲಿ ಉಳಿದಿವೆ. ಮಂಜೂರಾದ 357 ಅರಣ್ಯ ವೀಕ್ಷಕರ ಹುದ್ದೆಗಳಿಗೆ ಇದುವರೆಗೂ 60 ಮಂದಿಯನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಲಾಗಿದ್ದು 297 ಹುದ್ದೆಗಳು ಖಾಲಿ ಇವೆ. 

‘ಎಂ.ಎಂ ಹಿಲ್ಸ್‌ನಲ್ಲಿ ಸಿಬ್ಬಂದಿ ಕೊರತೆ’

ಚಿರತೆ ದಾಳಿಯಿಂದ ಭಕ್ತರೊಬ್ಬರು ಮೃತಪಟ್ಟಿರುವ ಮಲೆ ಮಹದೇಶ್ವರ ವನ್ಯಜೀವಿ ವಿಭಾಗಕ್ಕೆ ಮಂಜೂರಾಗಿರುವ 222 ಹುದ್ದೆಗಳ ಪೈಕಿ 105 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಗಳಿದ್ದು ಒಂದು ಖಾಲಿ ಇದೆ. 8 ವಲಯ ಅರಣ್ಯಾಧಿಕಾರಿಗಳ ಹುದ್ದೆಗಳಿದ್ದು ಐವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 129 ಗಸ್ತು ಅರಣ್ಯ ಪಾಲಕ ಹುದ್ದೆಗಳಿದ್ದು 61 ಮಂದಿ 56 ಅರಣ್ಯ ವೀಕ್ಷಕರ ಹುದ್ದೆಗಳಿದ್ದು 12 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ವನ್ಯಜೀವಿ ವಲಯದಲ್ಲಿ 13 ಗಸ್ತು ಅರಣ್ಯ ಪಾಲಕರ ಹುದ್ದೆಗಳು ಹಾಗೂ 6 ಅರಣ್ಯ ವೀಕ್ಷಕರ ಹುದ್ದೆಗಳು ಭರ್ತಿಯಾಗಿಲ್ಲ.  

ಸಭೆಯಲ್ಲಿ ಅಧಿಕಾರಿಗಳ ಅಸಹಾಯಕತೆ

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆಯಿಂದ ಎದುರಾಗುತ್ತಿರುವ ಗಂಭೀರ ಸಮಸ್ಯೆಗಳನ್ನು ಚಾಮರಾಜನಗರ ವೃತ್ತದ ಸಿಸಿಎಫ್‌ ಮಾಲತಿ ಪ್ರಿಯಾ ತೆರೆದಿಟ್ಟರು. ನೇಮಕಾತಿಯಾಗುವವರೆಗೂ ಲಭ್ಯವಿರುವ ಸಿಬ್ಬಂದಿಯನ್ನೇ ಬಳಸಿಕೊಳ್ಳುವಂತೆ ಸಚಿವರು ಸೂಚನೆ ನೀಡಿದಾಗ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.