ಚಾಮರಾಜನಗರ: ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿದ್ದು ಹೆದ್ದಾರಿ ಬದಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಗಾಳಿಪುರ ಬಡಾವಣೆ ಬಳಿಯ ಹೆದ್ದಾರಿಯಲ್ಲಿ ಈಚೆಗೆ ಸಂಭವಿಸಿದ ಅಪಘಾತ ಸ್ಥಳಕ್ಕೆ ಭೇಟಿನೀಡಿ ಮಾತನಾಡಿದ ಅವರು, ಸೋಮವಾರಪೇಟೆ-ಹರದನಹಳ್ಳಿಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿವೆ. ಹರದನಹಳ್ಳಿ ಕಡೆಯಿಂದ ಚಾಮರಾಜನಗರದ ಒಳಗೆ ಬರಲು ಪ್ರತ್ಯೇಕ ಸರ್ವೀಸ್ ರಸ್ತೆ ನಿರ್ಮಾಣವಾಗಬೇಕು. ಗಾಳಿಪುರ ಬಡಾವಣೆಯಿಂದ ಕರಿವರದರಾಜಬೆಟ್ಟಕ್ಕೆ ಹೋಗಲು ಅಂಡರ್‌ಪಾಸ್ ನಿರ್ಮಾಣವಾಗಬೇಕು ಎಂದು ನಿರ್ದೇಶನ ನೀಡಿದರು.
ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಸಂದರ್ಭ ಅಗತ್ಯ ಇರುವೆಡೆ ಸರ್ವೀಸ್ ರಸ್ತೆ ನಿರ್ಮಾಣ ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಕಳಪೆಯಾಗಿದ್ದು, ಕೊಳ್ಳೇಗಾಲ ತಾಲ್ಲೂಕಿನ ಉತ್ತುಂಬಳ್ಳಿ ಸಮೀಪದಲ್ಲಿ ಸೇತುವೆ ಕುಸಿದಿರುವುದು ಇದಕ್ಕೆ ನಿದರ್ಶನ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಹೆದ್ದಾರಿ ನಿರ್ಮಾಣ ಮಾಡುವಾಗ ಡಿಪಿಆರ್‌ನಲ್ಲಿರುವಂತೆ ರಸ್ತೆ ನಿರ್ಮಾಣ ಮಾಡಲಾಗಿದೆ. ಹೊಸದಾಗಿ ಡಿಪಿಆರ್ ಮಾಡಿದರೆ ಅಂಡರ್‌ಪಾಸ್ ನಿರ್ಮಾಣ ಮಾಡಲಾಗುವುದು’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದರು.
ಚೂಡ ಅಧ್ಯಕ್ಷ ಮಹಮ್ಮದ್ ಅಸ್ಗರ್, ಮಾಜಿ ಅಧ್ಯಕ್ಷ ಸೈಯದ್ ರಫಿ, ನಗರಸಭಾ ಸದಸ್ಯ ಸ್ವಾಮಿ, ಸೈಯದ್ ಮುಸಾಯಿಬ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.