ADVERTISEMENT

ಚಾಮರಾಜನಗರ: ವೈದ್ಯರ ವಸತಿಗೃಹಕ್ಕೆ ನುಗ್ಗಿದ ಚಿರತೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 20:06 IST
Last Updated 7 ಜನವರಿ 2021, 20:06 IST
   

ಚಾಮರಾಜನಗರ: ಸಮೀಪದ ಎಡಬೆಟ್ಟದಲ್ಲಿರುವ, ಚಾಮರಾಜನಗರ ವೈದ್ಯಕೀ‌ಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿರುವ ವೈದ್ಯರ ವಸತಿಗೃಹ ಸಂಕೀರ್ಣಕ್ಕೆ ಬುಧವಾರ ರಾತ್ರಿ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿದೆ.

ಕಟ್ಟಡದ ಮೊದಲ ಮಹಡಿಯ ಮೊಗಸಾಲೆಯಲ್ಲಿ ಚಿರತೆ ಓಡಾಡಿದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ತುಣುಕು ವೈರಲ್‌ ಆಗಿದೆ. ಮೊದಲ ಮಹಡಿಯಲ್ಲಿರುವ ಮನೆಯ ಬಾಗಿಲು ತೆರೆದಿತ್ತು. ಚಿರತೆಯು ಒಳಕ್ಕೆ ಹೋಗಲು ಯತ್ನಿಸಿ, ನಂತರ ಹೊರಗಡೆ ಹೋಗುವ ದೃಶ್ಯ ವಿಡಿಯೊದಲ್ಲಿದೆ. ಮನೆಯೊಳಗಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ವಸತಿಗೃಹದ ಕಟ್ಟಡದಲ್ಲಿ ಮೂರು ಮಹಡಿಗಳಿದ್ದು, ಸಂಸ್ಥೆಯ ಡೀನ್‌ ಸೇರಿದಂತೆ ಇನ್ನೂ ಕೆಲವು ವೈದ್ಯರು ಇದೇ ಕಟ್ಟಡದಲ್ಲಿ ವಾಸಿಸುತ್ತಾರೆ.

ADVERTISEMENT

ಕಟ್ಟಡದ ನೆಲಮಹಡಿಯಲ್ಲಿ ವಾಹನಗಳ ಪಾರ್ಕಿಂಗ್‌ ಜಾಗ ಇದೆ. ಮೇಲಿನ ಮಹಡಿಗಳಿಗೆ ಮೂರು ಕಡೆಗಳಲ್ಲಿ (ಎಡ, ಬಲ ಮತ್ತು ಮಧ್ಯ) ಮೆಟ್ಟಿಲುಗಳಿವೆ. ಮೂರು ಕಡೆಗಳಲ್ಲೂ ಬಾಗಿಲು ಇವೆ. ಗುರುವಾರ ರಾತ್ರಿ 9.30ರ ಸುಮಾರಿಗೆ ಮೊದಲ ಮಹಡಿಗೆ ಬಂದಿರುವ ಚಿರತೆ ಜಗುಲಿಯಲ್ಲಿ ಓಡಾಡಿದೆ. ಆ ಮಹಡಿಯಲ್ಲಿರುವ ಮನೆಯ ಬಾಗಿಲು ಕೂಡ ತೆರೆದಿತ್ತು. ಮನೆಯ ಒಳಗೆ ನುಗ್ಗಲು ಯತ್ನಿಸಿದಾಗ ಮನೆಯಲ್ಲಿದ್ದವರು ಕಿರುಚಾಡಿದ್ದಾರೆ. ತಕ್ಷಣ ಚಿರತೆ ಅಲ್ಲಿಂದ ಹೊರಗೆ ಹೋಗಿದೆ.

ಅದೇ ಕಟ್ಟಡದಲ್ಲಿರುವ ವೈದ್ಯರೊಬ್ಬರು ನಾಯಿಯನ್ನು ಸಾಕಿದ್ದರು. ಅದನ್ನು ಹಿಡಿಯುವುದಕ್ಕಾಗಿ ಚಿರತೆ ಬಂದಿರುವ ಸಾಧ್ಯತೆ ಇದೆ. ಮೂರು ಮೆಟ್ಟಿಲುಗಳ ಪೈಕಿ ಯಾವುದಾದರೂ ಒಂದು ಕಡೆ ಬಾಗಿಲು ತೆರೆದಿದ್ದರಬಹುದು. ಆ ದಾರಿಯಲ್ಲಿ ಚಿರತೆ ಮೊದಲ ಮಹಡಿಗೆ ಬಂದಿರಬಹುದು ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ಕೇಂದ್ರದಿಂದ ನಾಲ್ಕು ಕಿ.ಮೀ ದೂರದಲ್ಲಿ ಬೆಟ್ಟ ಗುಡ್ಡಗಳಿರುವ ಪ್ರದೇಶದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಕಾಲೇಜು, ವೈದ್ಯರ ವಸತಿ ಗೃಹಗಳು ಹಾಗೂ ವಿದ್ಯಾರ್ಥಿನಿಲಯಗಳು ಸಂಸ್ಥೆಯ ಆವರಣದಲ್ಲೇ ಇವೆ.

ಈ ಪ್ರದೇಶದಲ್ಲಿ ಚಿರತೆಗಳು ಓಡಾಡುತ್ತಿರುತ್ತವೆ. ಆದರೆ, ಕಾಲೇಜು, ವಸತಿಗೃಹಗಳು, ಹಾಸ್ಟೆಲ್‌ಗಳಿಗೆ ಇದುವರೆಗೆ ಬಂದ ನಿದರ್ಶನಗಳು ವರದಿಯಾಗಿರಲಿಲ್ಲ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಡೀನ್‌ ಡಾ.ಸಂಜೀವ್‌, ‘ರಾತ್ರಿ 9.30ರ ಸುಮಾರಿಗೆ ಚಿರತೆ ಬಂದಿದೆ. ಯಾರಿಗೂ ತೊಂದರೆ ಮಾಡಿಲ್ಲ. ಈ ಪ್ರದೇಶದಲ್ಲಿ ಚಿರತೆಗಳ ಓಡಾಟ ಸಾಮಾನ್ಯ. ಆದರೆ, ಮೊದಲ ಮಹಡಿಗೆ ಹೇಗೆ ಬಂತು ಎಂಬುದು ಅಚ್ಚರಿ ಮೂಡಿಸಿದೆ. ನಾಯಿಯನ್ನು ಹಿಡಿಯುವುದಕ್ಕೆ ಬಂದಿರುವ ಸಾಧ್ಯತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.