
ಚಾಮರಾಜನಗರ: ವಿದ್ಯಾರ್ಥಿಗಳಿಗೆ ಬೌದ್ಧಿಕ, ಶಾರೀರಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣವೂ ಅತ್ಯವಶ್ಯ ಎಂದು ಮರಿಯಾಲ ಮುರುಘ ರಾಜೇಂದ್ರ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಶ್ರೀಗುರು ವಿದ್ಯಾವಿಕಾಸ ಕೇಂದ್ರ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಸಂಸ್ಕಾರದ ಕೊರತೆಯಿಂದ ಮಕ್ಕಳು ದಾರಿ ತಪ್ಪುತ್ತಿದ್ದು ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ವಿದ್ಯೆ ವಿನಯವನ್ನು ಕಲಿಸಿದರೆ ವಿನಯ ಬದುಕಿನ ಮಾರ್ಗ ತಿಳಿಸುತ್ತದೆ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಸೋಮಶೇಖರ ಸ್ವಾಮಿ ಮಾತನಾಡಿ, ಗ್ರಾಮೀಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಎಸ್‌ಜಿವಿಕೆ ಸಂಸ್ಥೆ ಬದ್ಧವಾಗಿದ್ದು ಶಿಕ್ಷಣದ ಜೊತೆಗೆ ಮಕ್ಕಳಿಗೆ ಕರಾಟೆ ತರಬೇತಿ ನೀಡಲಾಗುತ್ತಿದ್ದು, ಮುಂದಿನ ವರ್ಷದಿಂದ ಯೋಗ ಶಿಕ್ಷಣ ನೀಡಲಾಗುವುದು ಎಂದರು.
ಮುಖಂಡ ಜಿ.ರವಿಶಂಕರ್ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಜ್ಞಾನದ ಜೊತೆಗೆ ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು, ಮೊಬೈಲ್ ಗೀಳು ಕಡಿಮೆ ಮಾಡಿ ಸ್ಪಷ್ಟವಾದ ಗುರಿಯತ್ತ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಸಾಲು ಮರದ ಸಿ.ಎಂ.ವೆಂಕಟೇಶ್ ಹಾಗೂ ಪತ್ರಕರ್ತ ಕೆ.ಎಸ್.ಬನಶಂಕರ ಆರಾಧ್ಯ ಅವರಿಗೆ ಬಸವ ಭಾನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಶಿವರಾತ್ರಿ ರಾಜೇಂದ್ರ ಸ್ವಾಮಿ, ನಿವೃತ್ತ ಪ್ರಾಂಶುಪಾಲೆ ಸುನಂದಾ ಭೂಪಾಳಿ, ಕಲಾವಿದ ಉಮ್ಮತ್ತೂರು ಬಸವರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಜಮ್ಮ, ಮಹದೇವ ಸ್ವಾಮಿ, ಯಮುನಾ, ಶಿವಕುಮಾರ್, ಮುಖ್ಯ ಶಿಕ್ಷಕ ಶಾಂತಮೂರ್ತಿ ವೇದಿಕೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.