ADVERTISEMENT

ಚಾಮರಾಜನಗರ ಆಕ್ಸಿಜನ್ ದುರಂತ| 32 ಮಂದಿಗೂ ಉದ್ಯೋಗ ಕೊಡಿ: ಮುಖಂಡರ ಸಭೆಯಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 2:28 IST
Last Updated 15 ಸೆಪ್ಟೆಂಬರ್ 2025, 2:28 IST
ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಆಕ್ಸಿಜನ್ ದುರಂತದದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು, ಪ್ರಗತಿಪರ, ರೈತಪರ, ಕನ್ನಡಪರ ಸಂಘಟನೆಗಳ ಮುಖಂಡರು ಭಾನುವಾರ ಸಭೆ ನಡೆಸಿದರು
ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಆಕ್ಸಿಜನ್ ದುರಂತದದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು, ಪ್ರಗತಿಪರ, ರೈತಪರ, ಕನ್ನಡಪರ ಸಂಘಟನೆಗಳ ಮುಖಂಡರು ಭಾನುವಾರ ಸಭೆ ನಡೆಸಿದರು   

ಚಾಮರಾಜನಗರ: ಐದು ವರ್ಷಗಳ ಹಿಂದೆ ಆಮ್ಲಜನಕ ಕೊರತೆಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ 32 ಮಂದಿಗೂ ಸರ್ಕಾರಿ ಉದ್ಯೋಗ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಧಾರವನ್ನು ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪ್ರಗತಿಪರ, ರೈತಪರ, ಕನ್ನಡಪರ ಹೋರಾಟಗಾರರ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಪೈಕಿ 21 ಮಂದಿಯ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು ಅಧಿಕೃತ ಆದೇಶ ಹೊರಬಿದ್ದಿಲ್ಲ. ಸರ್ಕಾರಿ ಉದ್ಯೋಗ ನೀಡುವ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸಿ ಶೀಘ್ರ ಸಂತ್ರಸ್ತರಿಗೆ ಉದ್ಯೋಗಗಳನ್ನು ನೀಡಬೇಕು ಎಂದು ಒತ್ತಾಯಿಸಲಾಯಿತು.

ದುರಂತದಲ್ಲಿ ಮೃತಪಟ್ಟ 32 ಮಂದಿಗೂ ಸರ್ಕಾರಿ ಉದ್ಯೋಗ ದೊರೆಯಬೇಕು. ದುರ್ಘಟನೆ ಸಂಬಂಧ ನಿವೃತ್ತ ನ್ಯಾಯಮೂರ್ತಿ ಕುನ್ಹಾ ನೇತೃತ್ವದ ತನಿಖಾ ಆಯೋಗ ಶೀಘ್ರ ವರದಿ ಸಲ್ಲಿಸಬೇಕು. ದುರಂತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಣಯ ಮಾಡಲಾಯಿತು.

ADVERTISEMENT

ಸುಧೀರ್ಘ ಹೋರಾಟಕ್ಕೆ ಬೆಂಬಲ ನೀಡಿದ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಅಭಿನಂದಿಸಲು ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ವೆಂಕಟರಾಜು, ಸಂಘಸೇನಾ, ಅಬ್ರಾರ್ ಅಹಮದ್‌, ಮಹೇಶ್‌, ಪಣ್ಯದಹುಂಡಿ ರಾಜು, ಮುರುಗೇಶ್‌, ಸಿದ್ದರಾಜು, ರವಿಚಂದ್ರ ಪ್ರಸಾದ್ ಕಹಳೆ, ನಾಗಶೇಖರ್ ಹಾಗೂ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.