ಚಾಮರಾಜನಗರ: ಜಿಲ್ಲೆಯ ಪೊಲೀಸರು ಬೊಜ್ಜಿನ ಸಮಸ್ಯೆ ನಿವಾರಣೆ ಹಾಗೂ ಮಾನಸಿಕ–ದೈಹಿಕ ಆರೋಗ್ಯ ಕ್ಷಮತೆಯತ್ತ ಹೆಜ್ಜೆ ಇಟ್ಟಿದ್ದು, ಇದಕ್ಕೆ ‘ಕರಿವರದರಾಜ ಬೆಟ್ಟಕ್ಕೆ ಚಾರಣ’ ಕಾರ್ಯಕ್ರಮ ನೆರವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಅವರ ನೇತೃತ್ವದಲ್ಲಿ ನಡೆದಿರುವ ನಿತ್ಯ ಚಾರಣದಿಂದ, ನಗರದ ಮಹಿಳಾ ಠಾಣೆ, ನಗರ, ಗ್ರಾಮಾಂತರ, ಪೂರ್ವ, ಪಟ್ಟಣ, ಸೆನ್, ಡಿಸಿಆರ್‌ಬಿ, ಡಿಎಆರ್‌ನ 34 ಅಧಿಕಾರಿಗಳು ಹಾಗೂ ಸಿಬ್ಬಂದಿಯ ದೇಹ ತೂಕ ಇಳಿದಿದೆ. ಆರಂಭದಲ್ಲಿ ಏದುಸಿರು ಬಿಡುತ್ತಿದ್ದವರು ಈಗ ಸಲೀಸಾಗಿ ಬೆಟ್ಟ ಹತ್ತಿ ಇಳಿಯುತ್ತಿದ್ದಾರೆ. ಎರಡು ತಿಂಗಳಿನಿಂದ ನಿರಂತರವಾಗಿ ಚಾರಣ ನಡೆಯುತ್ತಿದೆ.
ತುರ್ತು ಸಿಬ್ಬಂದಿಯನ್ನು ಹೊರತುಪಡಿಸಿ, ಪ್ರತಿದಿನ ತಲಾ ಒಂದು ಠಾಣೆಯ 20–25 ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸುತ್ತಿದ್ದಾರೆ. ಪ್ರತಿ ಠಾಣೆಗೆ ವಾರಕ್ಕೊಮ್ಮೆ ಪಾಳಿ ಬರುವುದರಿಂದ ಕರ್ತವ್ಯಕ್ಕೆ ತೊಂದರೆ ಇಲ್ಲ. ಬೆಳಿಗ್ಗೆ 6ಕ್ಕೆ ಚಾಮರಾಜನಗರದಿಂದ 6 ಕಿಮೀ ದೂರದಲ್ಲಿರುವ ಬೆಟ್ಟಕ್ಕೆ ಎಲ್ಲರೂ ವಾಹನಗಳಲ್ಲಿ ತೆರಳಿ ಒಂದೆಡೆ ಸೇರುತ್ತಾರೆ. ಬೆಳಿಗ್ಗೆ 6.30ರಿಂದ 9.15ರವರೆಗೂ ಚಾರಣ ನಡೆಯುತ್ತದೆ. ಅದು ಸುಮಾರು 6 ಕಿ.ಮೀ ನಡಿಗೆ.
ಬೆಟ್ಟ ಹತ್ತಿದ ಬಳಿಕ 15 ನಿಮಿಷ ಯೋಗ–ಧ್ಯಾನದ ಅಭ್ಯಾಸವೂ ನಡೆಯುತ್ತದೆ. ಕೆಳಗಿಳಿದ ಬಳಿಕ ನೀರು, ಆರೋಗ್ಯಕರ ಪೇಯ ಸೇವಿಸಿ ಕೆಲಸಕ್ಕೆ ಹಾಜರಾಗುತ್ತಾರೆ.
ಚಾರಣದಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ. ಮಂಡಿನೋವು ಸಹಿತ ಇತರೆ ಅನಾರೋಗ್ಯ ಸಮಸ್ಯೆ ಇದ್ದವರಿಗೆ, ಬೆಟ್ಟ ಹತ್ತಲು ಕಷ್ಟವಾಗುವವರಿಗೆ ವಿನಾಯಿತಿಯನ್ನೂ ನೀಡಲಾಗಿದೆ. ಕೆಲವರು ಬೆಟ್ಟದ ಕೆಳಗೆಯೇ ವಾಕಿಂಗ್ ಮಾಡುತ್ತಾರೆ.
‘ಸಿಬ್ಬಂದಿಯ ಪೈಕಿ ಕೆಲವರು ಕನಿಷ್ಠ 2 ಕೆ.ಜಿಯಿಂದ 10 ಕೆ.ಜಿಯವರೆಗೂ ತೂಕ ಇಳಿಸಿಕೊಂಡಿದ್ದಾರೆ. ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಗಳು ನಿಯಂತ್ರಣಕ್ಕೆ ಬಂದಿವೆ’ ಎಂದು ಬಿ.ಟಿ.ಕವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕುಟುಂಬ ನಿರ್ವಹಣೆ ಹಾಗೂ ಸದಾ ಒತ್ತಡದ ಕೆಲಸದ ನಡುವೆ ಆರೋಗ್ಯದ ಕಡೆ ಗಮನ ಕೊಡದೆ ಬೊಜ್ಜು, ಮಧುಮೇಹ, ರಕ್ತದೊತ್ತಡದಂಥ ಅನಾರೋಗ್ಯ ಸಮಸ್ಯೆಗಳನ್ನು ಹಲವು ಸಿಬ್ಬಂದಿ ಎದುರಿಸುತ್ತಿದ್ದಾರೆ. ಕೆಲಸದಲ್ಲೂ ನಿರುತ್ಸಾಹ ಕಾಣುತ್ತಿದ್ದುದರಿಂದ ಚಾರಣವನ್ನು ಆಯೋಜಿಸಲಾಯಿತು. ಉತ್ತಮ ಸ್ಪಂದನೆ ವ್ಯಕ್ತವಾಗಿದೆ’ ಎಂದು ಹೇಳಿದರು.
ಪ್ರಾಯೋಗಿಕವಾಗಿ ಜಿಲ್ಲಾ ಕೇಂದ್ರದ ಠಾಣೆಗಳಲ್ಲಿ ಅನುಷ್ಠಾನಕ್ಕೆ ತಂದಿರುವ ಚಾರಣ ಕಾರ್ಯಕ್ರಮವನ್ನು ಎಲ್ಲ ಠಾಣೆಗಳಿಗೂ ವಿಸ್ತರಿಸುವ ಉದ್ದೇಶವಿದೆಬಿ.ಟಿ.ಕವಿತಾ ಎಸ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.