
ಚಾಮರಾಜನಗರ: ಕ್ರೀಡಾ ದಿನಾಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮರಾಜನಗರ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಚಾಮರಾಜನಗರದಿಂದ ಕೊಳ್ಳೇಗಾಲದವರೆಗೆ 30 ಕಿ.ಮೀ ಸ್ಕೇಟಿಂಗ್ ಮ್ಯಾರಥಾನ್ ನಡೆಯಿತು.
ನಗರದ ಚಾಮರಾಜೇಶ್ವರ ಉದ್ಯಾನದ ಮುಂಭಾಗ ಆರಂಭವಾದ ಸ್ಕೇಟಿಂಗ್ ಮ್ಯಾರಥಾನ್‌ಗೆ ಉದ್ಯಮಿ ಶ್ರೀನಿಧಿ ಕುದರ್, ಕ್ರೀಡಾಪಟು ವಿ.ಶ್ರೀನಿವಾಸ ಪ್ರಸಾದ್ ಹಸಿರು ನಿಶಾನೆ ತೋರಿದರು.
ಉದ್ಯಮಿ ಶ್ರೀನಿಧಿ ಕುದರ್ ಮಾತನಾಡಿ, ಚಾಮರಾಜನಗರದಿಂದ ಕೊಳ್ಳೇಗಾಲದವರೆಗೆ ಸ್ಕೇಟಿಂಗ್ ಮ್ಯಾರಥಾನ್ ಆಯೋಜಿಸುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ. ಸ್ಕೇಟಿಂಗ್ ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು, ಆತ್ಮವಿಶ್ವಾಸ, ಏಕಾಗ್ರತ ಹೆಚ್ಚಿಸಿಕೊಳ್ಳಬಹುದು ಎಂದರು.
ಕ್ರೀಡಾಪಟು ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ಯುವ ಜನಾಂಗವನ್ನು ದುಶ್ಚಟಗಳಿಂದ ದೂರವಿರಿಸಲು ಸ್ಕೇಟಿಂಗ್ ಮೂಲಕ ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್ ಕಾರ್ಯ ಮಾದರಿ ಎಂದರು.
ಈ ಸಂದರ್ಭ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಪುರ್ಖಾನ್ ಪಾಷ, ಕರಾಟೆ ಗ್ಯಾಂಡ್ ಮಾಸ್ಟರ್ ನಾಗರಾಜ ಜಟ್ಟಿ, ಅಧ್ಯಕ್ಷ ರೆಹಾನ್, ಅಜೀಂ, ನಿತಿ, ಹಸಿರುಪಡೆಯ ಸತೀಶ್, ಪಿಡಿಒ ರಮೇಶ್ ಹಾಗೂ ಸ್ಕೇಟಿಂಗ್ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.