ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಕಣ್ಮನ ಸೆಳೆಯುವ ಗಿರಿ–ಶಿಖರಗಳು, ಅಪೂರ್ವ ಜೀವವೈವಿಧ್ಯ ತಾಣಗಳು, ಹುಲಿ ಸಂರಕ್ಷಿತ ಪ್ರದೇಶ, ಅಣೆಕಟ್ಟೆ, ಜಲಪಾತ ಸೇರಿದಂತೆ ಪ್ರಾಕೃತಿಕ ಸೊಬಗನ್ನೇ ಹೊದ್ದು ನಿಂತಿರುವ ಪ್ರೇಕ್ಷಣೀಯ ಸ್ಥಳಗಳು ಜಿಲ್ಲೆಯಲ್ಲಿದ್ದರೂ ಪ್ರಚಾರದ ಕೊರತೆ ಕಾಡುತ್ತಿದೆ. ದಕ್ಷಿಣ ಕರ್ನಾಟಕದ ಕೊನೆಯ ಜಿಲ್ಲೆಯಾಗಿರುವ ಚಾಮರಾಜನಗರ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವೂ ಸೊರಗಿದೆ.
ಜಿಲ್ಲೆಯ ಶೇ 51ರಷ್ಟು ಅರಣ್ಯ ಹಾಗೂ ರಾಜ್ಯದಲ್ಲೇ ಅತಿ ಹೆಚ್ಚು (ಬಂಡೀಪುರ, ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ, ಮಂಟೇಸ್ವಾಮಿ ಜನಪದ ಮಹಾಕಾವ್ಯಗಳು ಜನಿಸಿದ ಶ್ರೀಮಂತ ನೆಲದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಬಡವಾಗಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕಾ ಕ್ಷೇತ್ರಗಳು ಕಡೆಗಣನೆಗೆ ಒಳಪಟ್ಟಿರುವಂತೆ ಪ್ರವಾಸೋದ್ಯಮ ಕ್ಷೇತ್ರಕ್ಕೂ ದಿಕ್ಕು–ದಿಸೆ ಇಲ್ಲದಂತಾಗಿದೆ.
ಮಾಹಿತಿ ಕೊರತೆ: ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಪ್ರವಾಸಿಗರಿಗೆ ಪ್ರೇಕ್ಷಣಿಯ ಸ್ಥಳಗಳ ಮಾಹಿತಿ ನೀಡುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಬಸ್, ರೈಲು ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲೂ ಪ್ರವಾಸಿ ತಾಣಗಳ ಮಾಹಿತಿ ಸಿಗುತ್ತಿಲ್ಲ. ಯಾವ ಮಾರ್ಗವಾಗಿ ಹೋಗಬೇಕು ಎಂಬ ಕನಿಷ್ಠ ಮಾಹಿತಿಯೂ ದೊರೆಯದಿರುವುದು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಜಿಲ್ಲೆಯು ನೆರೆಯ ತಮಿಳುನಾಡು ಹಾಗೂ ಕೇರಳ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದ್ದು, ಪ್ರತಿನಿತ್ಯ ಉಭಯ ರಾಜ್ಯಗಳಿಂದ ಸಾವಿರಾರು ಮಂದಿ ಭೇಟಿ ಇಲ್ಲಿಗೆ ನೀಡುತ್ತಾರೆ. ಹೀಗೆ ಬಂದವರು ಜಿಲ್ಲೆಯ ಪ್ರವಾಸಿತಾಣಗಳಿಗೆ ಭೇಟಿ ನೀಡುವಂತೆ ಪ್ರೇರೇಪಿಸುವ ಕೆಲಸ ನಡೆಯುತ್ತಿಲ್ಲ. ಹೆದ್ದಾರಿಗಳಲ್ಲಿ ಸಾಗುವಾಗಲೂ ಜಾಹೀರಾತು ಫಲಕಗಳು ಕಾಣುವುದಿಲ್ಲ.
ಪ್ರವಾಸಿತಾಣಗಳಿಗೆ ಬರುವವರು ಮಾರ್ಗಮಧ್ಯೆ ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿ ಸ್ಥಳೀಯರನ್ನು ಕೇಳಿ ಗಮ್ಯಸ್ಥಾನ ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್ ಕೇವಲ ನಾಲ್ಕು ಸ್ಥಳಗಳ ಬಗ್ಗೆ ಮಾಹಿತಿಗೆ ಸೀಮಿತವಾಗಿದೆ.
‘ಚೆಲುವ ಚಾಮರಾಜನಗರ’ ಅಭಿಯಾನಕ್ಕೆ ಬ್ರೇಕ್: ಪ್ರವಾಸಿಗರನ್ನು ಸೆಳೆಯಲು ಹಿಂದಿನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ‘ಚೆಲುವ ಚಾಮರಾಜನಗರ’ ಅಭಿಯಾನ ಆರಂಭಿಸಿದ್ದರು. ಪ್ರವಾಸಿತಾಣಗಳ ಪರಿಚಯಿಸುವ ವಿಡಿಯೋ ಹಾಗೂ ಕೈಪಿಡಿ ಹೊರತರಲಾಗಿತ್ತು. ನಟ ದಿ.ಪುನೀತ್ ರಾಜಕುಮಾರ್ ಅಭಿಯಾನದ ರಾಯಭಾರಿಯಾಗಿದ್ದರು. ಕೋವಿಡ್‌ನಿಂದಾಗಿ ಅಭಿಯಾನ ಚೆಲುವು ಕಳೆದುಕೊಂಡಿತು. ಲಕ್ಷಾಂತರ ರೂಪಾಯಿ ವ್ಯಯಿಸಿ ನಗರದ ಸುಲ್ತಾನ್ ಷರೀಫ್ ವೃತ್ತದಲ್ಲಿ ನಿರ್ಮಿಸಿರುವ ‘ಚೆಲುವ ಚಾಮರಾಜನಗರ’ ಫಲಕ ನಿರ್ವಹಣೆ ಇಲ್ಲದೆ ಕಳಾಹೀನ ಸ್ಥಿತಿಯಲ್ಲಿದೆ.
ಕೊಳ್ಳೇಗಾಲದಲ್ಲೂ ಭಿನ್ನವಾಗಿಲ್ಲ: ಕೊಳ್ಳೇಗಾಲ ತಾಲ್ಲೂಕಿನಲ್ಲಿ ಭರಚುಕ್ಕಿ ಜಲಪಾತ, ವೆಸ್ಲಿ ಸೇತುವೆ, ಮಧ್ಯ ರಂಗನಾಥ ಸ್ವಾಮಿ ದೇವಸ್ಥಾನ, ಶಿವನ ಸಮುದ್ರ, ಗುಂಡಾಲ್ ಜಲಾಶಯ, ಧನಗೆರೆ ಕಟ್ಟೆ, ಸೇರಿದಂತೆ ಹಲವು ಪ್ರವಾಸಿ ಸ್ಥಳಗಳಿದ್ದರೂ ಮಾಹಿತಿ ನೀಡುವ ಫಲಕಗಳು ಇಲ್ಲ. ತಾಲ್ಲೂಕಿಗೆ ಬರುವ ಪ್ರವಾಸಿಗರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ತೆರಳಬೇಕಿದೆ. ಪ್ರಚಾರದಕೊರತೆಯಿಂದ ಭರಚುಕ್ಕಿ ಜಲಪಾತ ಹೊರತಾಗಿ ಇತರೆ ಸ್ಥಳಗಳಿಗೆ ತೆರಳಲು ಪ್ರವಾಸಿಗರು ಆಸಕ್ತಿ ತೋರುತ್ತಿಲ್ಲ.
ಅರಣ್ಯ ಪ್ರಮುಖ ಆಕರ್ಷಣೆ: ಗುಂಡ್ಲುಪೇಟೆ ತಾಲ್ಲೂಕು ದಕ್ಷಿಣ ಕರ್ನಾಟಕದ ಕೊನೆಯ ತಾಲ್ಲೂಕಾಗಿದ್ದು ಕೇರಳ ಹಾಗೂ ತಮಿಳು ನಾಡಿನೊಂದಿಗೆ ಬೆಸೆದುಕೊಂಡಿದ್ದು ಅರಣ್ಯ ಗಡಿ ಹಂಚಿಕೊಂಡಿದೆ. ಬಂಡೀಪುರ ಹುಲಿ, ಆನೆ, ಚಿರತೆಗಳ ಆವಾಸಸ್ಥಾನವಾಗಿದೆ. ಧಾರ್ಮಿಕ ಕ್ಷೇತ್ರವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ರಮಣೀಯತೆಗೆ ಹೆಸರುವಾಸಿಯಾಗಿದೆ.
ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ಒಳಗೆ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ದಕ್ಷಿಣ ತಿರುಪತಿ ಎಂದೇ ಖ್ಯಾತಿ ಪಡೆದ ಹುಲುಗಿನ ಮುರುಡಿ (ವೆಂಕಟರಮಣಸ್ವಾಮಿ ಬೆಟ್ಟ) ಹಾಗೂ ಕಬ್ಳಳ್ಳಿ ಗ್ರಾಮದಲ್ಲಿ ರಾಜ್ಯದ ಮೊದಲ ಮಹಿಳಾ ಸ್ಪೀಕರ್ ಕೆ.ಎಸ್.ನಾಗರತ್ನಮ್ಮ ಸಮಾಧಿ ಇದ್ದರೂ ಬಹಳಷ್ಟು ಮಂದಿಗೆ ತಿಳಿದಿಲ್ಲ.
ವನ್ಯಧಾಮ, ಸಫಾರಿ: ಹನೂರು ತಾಲೂಕಿನಲ್ಲಿ ಒಟ್ಟು ಭೂಭಾಗದ ಶೇ 65ರಷ್ಟು ಅರಣ್ಯ ಇದ್ದು ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳಿವೆ. ಇವುಗಳ ಪೈಕಿ ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ. ಪಾಳ್ಯ ಹಾಗೂ ಹನೂರು ವನ್ಯಜೀವಿ ವಲಯ ಮತ್ತು ಕಾವೇರಿ ವನ್ಯಧಾಮದ ಗೋಪಿನಾಥ ವನ್ಯಜೀವಿ ವಲಯಗಳಲ್ಲಿ ಸಫಾರಿ ವ್ಯವಸ್ಥೆ ಇದೆ.
ಹೊಗೆನಕಲ್ ಜಲಪಾತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರೂ ಗುಂಡಾಲ್, ಹುಬ್ಬೇಗುಣಸೆ, ಉಡುತೊರೆ ಜಲಾಶಯ ಮತ್ತು ಟಿಬೆಟಿಯನ್ ಕ್ಯಾಂಪ್‌ಗೆ ಮತ್ತಷ್ಟು ಪ್ರಚಾರ ಸಿಗಬೇಕಿದೆ. ಮಳೆ ಆಶ್ರಿತ ತಾಲ್ಲೂಕಾಗಿರುವ ಹನೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣವಿದ್ದು ಬಳಸಿಕೊಳ್ಳಬೇಕಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಹೋಟೆಲ್ ಉದ್ಯಮಕ್ಕೂ ಚೇತರಿಕೆ ಸಿಗಲಿದೆ ಎಂಬುದು ಸ್ಥಳೀಯರ ಒತ್ತಾಯ.
ತಾಣಗಳಿಗೆ ಗ್ರಹಣ: ಯಳಂದೂರು ತಾಲ್ಲೂಕಿನ ಚಾರಿತ್ರಿಕ ಐತಿಹಾಸಿಕ ಪರಿಸರ ತಾಣಗಳು ಇನ್ನೂ ಪ್ರವಾಸಿಗರ ಕಣ್ಣೋಟಕ್ಕೆ ಬಿದ್ದಿಲ್ಲ. ಬೆಟ್ಟಗುಡ್ಡಗಳ ಸುತ್ತಮುತ್ತಲ ಅಣೆಕಟ್ಟೆ, ದೇವಾಲಯಗಳ ವೀಕ್ಷಣೆಗೆ ಸರಿಯಾದ ವ್ಯವಸ್ಥೆಇಲ್ಲ. ಚಾರಣ, ಪ್ರಾಗೈತಿಹಾಸಿಕ ತಾಣಗಳ ತಿಳಿಸುವ ಫಲಕಗಳು ಇಲ್ಲ. ಬಹಳಷ್ಟು ಸ್ಥಳಗಳು ಎಲ್ಲರಿಗೂ ತೆರೆದುಕೊಂಡಿಲ್ಲ.
ಪಟ್ಟಣದ ಗೌರೀಶ್ವರ ಬಳೆಯ ಮಂಟಪ ಸಂಕೀರ್ಣ, ಜಾಗೀರ್‌ದಾರ್ ಬಂಗಲೆ, ಹಿರಿಯೂರು, ಅಗರ ಮಾಂಬಳ್ಳಿ ಗ್ರಾಮಗಳ ಚೋಳಕಾಲದ ದೇವಾಲಯಗಳು, ಕೃಷ್ಣಯ್ಯನ ಕಟ್ಟೆ ಮತ್ತು ಆಮೆಕೆರೆ ಡ್ಯಾಂ ಮನಮೋಹಕ ನೋಟದ ಬಗ್ಗೆ ವಿವರಿಸುವ ಮಾಹಿತಿ ಇಲ್ಲ. ಸೋಲಿಗರು ಮತ್ತು ಸ್ಥಳೀಯ ಜನಪದ ಕಲಾವಿದರ ಹಾಡು–ಹಸೆ ತಿಳಿಸುವ, ಬಿಳಿಗಿರಿ ಕಾಡಿನ ವೈವಿದ್ಯತೆಯನ್ನು ತಿಳಿಸುವ ಕೆಲಸವೂ ನಡೆಯುತ್ತಿಲ್ಲ.
ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳು:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯದಾಮ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಮಲೆ ಮಹದೇಶ್ವರ ದೇವಸ್ಥಾನ, ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ, ದೊಡ್ಡ ಸಂಪಿಗೆ ಮರ, ಕ್ಯಾತದೇವರ ಗುಡಿ (ಕೆ.ಗುಡಿ), ಹೋಗೆನಕಲ್ ಫಾಲ್ಸ್, ಭರಚುಕ್ಕಿ ಜಲಪಾತ, ಗುಂಡಾಲ್ ಜಲಾಶಯ, ಸುವರ್ಣಾವತಿ ಚಿಕ್ಕಹೊಳೆ ಜಲಾಶಯ, ರಾಮಲಿಂಗೇಶ್ವರ ದೇವಸ್ಥಾನ, ಚಾಮರಾಜೇಶ್ವರ ದೇವಸ್ಥಾನ, ಹೊಳೆ ಆಲೂರಿನ ಅರಕೇಶ್ವರ ದೇವಸ್ಥಾನ, ಗೌರಿಶಂಕರ ದೇವಸ್ಥಾನ
ಯಾರು ಏನಂತಾರೆ...?:
ಉದ್ಯೋಗ ಸೃಷ್ಟಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾದರೆ ಉದ್ಯೋಗ ಸೃಷ್ಟಿಯಾಗುತ್ತವೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾದ್ಯವಾಗಲಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯನ್ನು ಬಲಗೊಳಿಸಬೇಕಿದೆ.ಚೇತನ್ ಸತ್ತೇಗಾಲ
ಜಿಲ್ಲೆಯಲ್ಲಿ ಪ್ರಸಿದ್ಧ ಸ್ಥಳಗಳಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದ ಕಾರಣ ಬಂದವರು ನಿರಾಶೆಯಿಂದ ಹಿಂದಿರುಗಬೇಕಾಗಿದೆ. ಸಾರಿಗೆ ವಸತಿ ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳು ದೊರೆಯಬೇಕು.ಪ್ರಭುಸ್ವಾಮಿ ಎನ್.ದೊಡ್ಡಿoದುವಾಡಿ
ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಯಳಂದೂರು ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ವಿಸ್ತರಣೆಕ್ಕೆ ಬಹಳಷ್ಟು ಅವಕಾಶಗಳು ಇವೆ. ಚಿಕ್ಕತಿರುಪತಿ ಹೊಯ್ಸಳ ಕಲೆ ಮತ್ತು ವಾಸ್ತುಶಿಲ್ಪ ಬಿಂಬಿಸುವ ದೇಗುಲಗಳು ವಾರಾಹಸ್ವಾಮಿ ದೇಗುಲ ಜೈನರ ಕುರುಹು ವಸ್ತು ಸಂಗ್ರಹಾಲಯಗಳಿದ್ದು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯ ಮಾಡಿಕೊಡುವ ಕೆಲಸ ಮಾಡಬೇಕು.ಸಂತೋಷ್. ಸುವರ್ಣ ತಿರುಮಲ ಟ್ರಸ್ಟ್ ಸದಸ್ಯ
ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರಚಾರ ಮಾಡುವ ಕಾರ್ಯ ಸಂಬಂಧಪಟ್ಟ ಇಲಾಖೆಯಿಂದ ನಡೆಯುತ್ತಿಲ್ಲ. ಬಂಡೀಪುರ ಹಾಗೂ ಗೋಪಾಲಸ್ವಾಮಿ ಬೆಟ್ಟ ಹೊರತಾಗಿ ಇತರೆ ಸ್ಥಳಗಳು ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿವೆ.ಅಬ್ದುಲ್ ಮಲಿಕ್ ಕರ್ನಾಟಕ ಕಾವಲು ಪಡೆ ತಾಲ್ಲೂಕು ಅಧ್ಯಕ್ಷ
‘ಶೀಘ್ರ ಚೇತರಿಕೆ’ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆ ಜಾರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಒಪ್ಪಿಗೆ ದೊರೆತು ಅನುದಾನ ಬಿಡುಗಡೆಯಾದರೆ ಪ್ರವಾಸೋದ್ಯಮ ಚಟುವಟಿಕೆಗಳಿಗೆ ವೇಗ ನೀಡಲಾಗುವುದು.ತಮಣ ಗೌಡ ಪಾಟೀಲ್ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ
ಆಯಕಟ್ಟಿನ ಸ್ಥಳಗಳಲ್ಲಿ ಫಲಕ ಬೇಕು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಎಲ್ಲ ಬಸ್ ಹಾಗೂ ರೈಲು ನಿಲ್ದಾಣ ಹೋಟೆಲ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರವಾಸಿತಾಣಗಳ ಮಾಹಿತಿ ಪ್ರದರ್ಶನ ಮಾಡಬೇಕು ನಿರ್ಧಿಷ್ಟ ಸ್ಥಳದಿಂದ ಇರುವ ಅಂತರ ಸಾರಿಗೆ ಹೋಟೆಲ್ ವಸತಿ ಸೌಲಭ್ಯ ಮಾಹಿತಿ ನೀಡಿದರೆ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗಲಿದೆ.ಭುವನೇಶ್ ಚಾಮರಾಜನಗರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.