ADVERTISEMENT

ಬಂಡೀಪುರ: ರಾತ್ರಿ ಸಂಚಾರ ನಿಷೇಧ ತೆರವುಗೊಳಿಸದಂತೆ ಮನವಿ -ವಾಟಾಳ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 16:23 IST
Last Updated 3 ಅಕ್ಟೋಬರ್ 2019, 16:23 IST
ವಾಟಾಳ್‌ ನಾಗರಾಜ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಬಾಗಿಲಲ್ಲಿ ಮಲಗಿಕೊಂಡು ಪ್ರತಿಭಟನೆ ನಡೆಸಿದರು
ವಾಟಾಳ್‌ ನಾಗರಾಜ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಬಾಗಿಲಲ್ಲಿ ಮಲಗಿಕೊಂಡು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ‘ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಬಾರದು’ ಎಂದುಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿಮಲಗಿಕೊಂಡು ಪ್ರತಿಭಟನೆ ನಡೆಸಿದರು. ಬಳಿಕ ಕಾರ್ಯಕರ್ತರೊಂದಿಗೆ ಕಚೇರಿ ಸಮೀಪದಲ್ಲೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಟೈರ್‌ಗೆಬೆಂಕಿ ಹಚ್ಚಿ ಕೇರಳ ಸರ್ಕಾರ, ವಯನಾಡು ಹಾಗೂ ಸಂಸದ ರಾಹುಲ್‌ ಗಾಂಧಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕೇರಳ ರಾಜ್ಯದಲ್ಲಿ ಎಲ್ಲ ಪಕ್ಷದವರು ಒಂದಾಗಿ ಬಂಡೀಪುರ ರಾತ್ರಿ ಸಂಚಾರ ತೆರವುಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿಮಾತ್ರ ರಾಜಕೀಯಪಕ್ಷದ ಮುಖಂಡರು ಮೌನವಾಗಿದ್ದಾರೆ’ ಎಂದು ದೂರಿದರು.

ADVERTISEMENT

‘ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವಿದೆ. ಕೇರಳ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾತ್ರಿ ಸಂಚಾರ ನಿಷೇಧವನ್ನು ತೆರವುಗೊಳಿಸಲು ಸಂಚು ನಡೆಸುತ್ತಿದೆ’ ಎಂದು ಆರೋಪಿಸಿದರು.

‘ಕೇರಳದವರ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ನೀಡುತ್ತಿರುವ ರಾಹುಲ್ ಗಾಂಧಿ ಅವರೇ ನೀವು ನಿಷೇಧ ತೆರವುಗೊಳಿಸಿದರೆ ನಾನು ಇನ್ನು ಮುಂದೆರಾಜಕೀಯ ಮಾಡುವುದಿಲ್ಲ ಎಂದು ಸವಾಲು ಹಾಕಿದರು. ಬಂಡೀಪುರ ಅರಣ್ಯದಲ್ಲಿ ಹುಲಿ, ಆನೆ, ಚಿರತೆ ಹೆಚ್ಚಿವೆ.ಇವುಗಳನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ’ ಎಂದರು.

‘ರಾಹುಲ್‌ ಗಾಂಧಿ ಅವರೇ ಈ ವಿಚಾರದಿಂದ ದೂರವಿರಿ, ಇದೊಂದು ಮರದ ಮಾಫಿಯಾ. ನೀವು ಬೆಂಬಲ ನೀಡಿದರೆ ಕಾಂಗ್ರೆಸ್ ಪಕ್ಷ ಮರದ ಮಾಫಿಯಾಕ್ಕೆ ಬೆಂಬಲ ನೀಡಿದಂತೆ ಆಗುತ್ತದೆ. ಕೇರಳ ರಾಜ್ಯದವರು ಸರ್ಕಾರದ ಮೇಲೆ ಒತ್ತಡ ಹೇರಿ ನಮ್ಮ ಅರಣ್ಯ ನಾಶ ಮಾಡುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ’ ಎಂದರು.

‘ಕೇರಳದ ಮರದ ಮಾಫಿಯಾ ವಿರುದ್ಧ ಅ. 20ರಂದು ಚಾಮರಾಜನಗರ ಜಿಲ್ಲಾ ಸಂಪೂರ್ಣ ಬಂದ್ ಮಾಡಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಅ.15ರಂದು ಕೇರಳ, ಕರ್ನಾಟಕ ಗಡಿ ಬಂದ್ ಮಾಡಲಾಗುವುದು’ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ದಳಪತಿ ವೀರತಪ್ಪ, ನಾಗೇಶ್, ಶ್ರೀನಿವಾಸಗೌಡ, ವರದನಾಯಕ, ವರದರಾಜು, ಶಿವಲಿಂಗಮೂರ್ತಿ, ಗು.ಪುರುಷೋತ್ತಮ, ರೇವಣ್ಣಸ್ವಾಮಿ, ಬಾಬು, ಸ್ವಾಮಿ. ಶಿವು, ಚಾ.ರಾ. ಕುಮಾರ್, ರವಿಚಂದ್ರಪ್ರಸಾದ್, ಜಿಯಾವುಲ್ಲಾ, ಪಾರ್ಥಸಾರಥಿ, ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.