ADVERTISEMENT

ಚಾಮರಾಜನಗರ: ಡಾ.ಎಂ.ಆರ್.ರವಿ ವರ್ಗಾವಣೆ, ಚಾರುಲತಾ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 15:43 IST
Last Updated 15 ನವೆಂಬರ್ 2021, 15:43 IST
ಡಾ.ಎಂ.ಆರ್.ರವಿ ಅವರು ನೂತನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು
ಡಾ.ಎಂ.ಆರ್.ರವಿ ಅವರು ನೂತನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು   

ಚಾಮರಾಜನಗರ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಐಎಎಸ್‌ ಅಧಿಕಾರಿ ಚಾರುಲತಾ ಸೋಮಲ್‌ ಅವರನ್ನು ಆ ಹುದ್ದೆಗೆ ನಿಯೋಜಿಸಿದೆ. ರವಿ ಅವರಿಗೆ ಹೊಸ ಹುದ್ದೆ, ಸ್ಥಳವನ್ನುತೋರಿಸಿಲ್ಲ.

ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ರವಿ ಅವರಿಗೆ ಹೊಸ ಹುದ್ದೆ, ಸ್ಥಳವನ್ನು ತೋರಿಸಿಲ್ಲ.

ಸೋಮವಾರ ಸಂಜೆ ಆದೇಶ ಹೊರಬೀಳುತ್ತಲೇ,ಚಾರುಲತಾ ಅವರು ಜಿಲ್ಲೆಗೆ ಬಂದು ರಾತ್ರಿ 7.15ರ ಗಂಟೆ ಸುಮಾರಿಗೆ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರ ಹಸ್ತಾಂತರಿಸಿದರು.

ಮೂಲತಃ ಮಹಾರಾಷ್ಟ್ರದವರಾದ ಚಾರುಲತಾ ಅವರು2012ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ. ಈ ಹಿಂದೆ ಕೊಡಗು ಜಿಲ್ಲಾಧಿಕಾರಿಯಾಗಿದ್ದರು. ಅಕ್ಟೋಬರ್‌ 11ರಂದು ಅವರನ್ನು ರಾಯಚೂರು ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ನಂತರ ಅದು ರದ್ದಾಗಿತ್ತು. ಅವರು ಸ್ಥಳ ನಿಯೋಜನೆಯ ನಿರೀಕ್ಷೆಯಲ್ಲಿದ್ದರು.

ADVERTISEMENT

ಡಾ.ಎಂ.ಆರ್.ರವಿ ಅವರು 2020ರ ಜನವರಿ 30ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ‌2021ರ ಫೆಬ್ರುವರಿ 13ರಂದು ಅವರನ್ನುಸಕಾಲ ಯೋಜನೆಯ ಹೆಚ್ಚುವರಿ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ, ನಂತರ ಆದೇಶ ರದ್ದಾಗಿ ಜಿಲ್ಲೆಯಲ್ಲೇ ಮುಂದುವರೆದಿದ್ದರು.

ಮೇ 2ರಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಸಂಭವಿಸಿದ ದುರಂತದ ನಂತರ, ಅದೇ ತಿಂಗಳ 19ರಂದು ರವಿ ಅವರ ವರ್ಗಾವಣೆಯಾಗಿದೆ ಎಂದು ಸುದ್ದಿಯಾಗಿತ್ತು. ಆದರೆ, ಅಧಿಕೃತ ಆದೇಶ ಬಂದಿರಲಿಲ್ಲ. ಅವರು ಜಿಲ್ಲಾಧಿಕಾರಿಯಾಗಿ ಮುಂದುವರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.