ADVERTISEMENT

ಮಹದೇಶ್ವರ ಬೆಟ್ಟ: ರಾತ್ರಿ ತಂಗಲು, ಮುಡಿಸೇವೆ, ಉತ್ಸವಗಳಿಗೆ ಅನುಮತಿ

ಕೋವಿಡ್‌ ಕಾರಣಕ್ಕೆ ಭಕ್ತರಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವು, ಬೆಳಿಗ್ಗೆ 4ರಿಂದ ರಾತ್ರಿ 10ರವರೆಗೆ ದರ್ಶನಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 8:52 IST
Last Updated 1 ನವೆಂಬರ್ 2020, 8:52 IST
ಮಲೆ ಮಹದೇಶ್ವರಸ್ವಾಮಿ ದೇವಾಲಯದ ನೋಟ
ಮಲೆ ಮಹದೇಶ್ವರಸ್ವಾಮಿ ದೇವಾಲಯದ ನೋಟ   

ಚಾಮರಾಜನಗರ: ಕೋವಿಡ್‌–19 ಹರಡುವಿಕೆ ತಡೆಯುವುದಕ್ಕಾಗಿ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮಲೆ ಮಹದೇಶ್ವರ ಸ್ವಾಮಿಯ ದರ್ಶನ, ರಾತ್ರಿ ತಂಗಲು ಹಾಗೂ ವಿವಿಧ ಸೇವೆಗಳಿಗೆ ಹೇರಲಾಗಿದ್ದ ನಿರ್ಬಂಧವನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.

‌ಮುಡಿಸೇವೆ ಸೇರಿದಂತೆ ವಿವಿಧ ಸೇವೆಗಳು, ವಸತಿ ಗೃಹಗಳಲ್ಲಿ ರಾತ್ರಿ ತಂಗಲು ಹಾಗೂ ವಿವಿಧ ಉತ್ಸವಗಳನ್ನು ನಡೆಸಲು ಅನುಮತಿ ನೀಡಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಭಾನುವಾರ ಆದೇಶ ನೀಡಿದ್ದಾರೆ. ಕೋವಿಡ್‌ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ಷರತ್ತನ್ನು ಅವರು ಒಡ್ಡಿದ್ದಾರೆ.

ನಿರ್ಬಂಧಗಳನ್ನು ತೆರವುಗೊಳಿಸಿರುವುದರಿಂದ ಇನ್ನು ಮುಂದೆ, ದೇವಾಲಯದಲ್ಲಿ ಎಲ್ಲ ಸೇವೆಗಳೂ ಲಾಕ್‌ಡೌನ್‌ಗಿಂತ ಮುಂಚಿನ ರೀತಿಯಲ್ಲಿ ನಡೆಯಲಿವೆ.

ADVERTISEMENT

ಭಕ್ತರಿಗೆ ಮುಕ್ತ ಅವಕಾಶ: 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 65ಕ್ಕಿಂತ ಹೆಚ್ಚು ವಯಸ್ಸಿನವರನ್ನು ಬಿಟ್ಟು ಉಳಿದ ಎಲ್ಲ ವಯೋಮಾನವದವರು ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದೇವರ ದರ್ಶನ ಮಾಡಬಹುದು. ಇದುವರೆಗೂ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಇತ್ತು.

ತಂಗುವ ವ್ಯವಸ್ಥೆ: ಲಾಕ್‌ಡೌನ್‌ ಜಾರಿಯಾಗಿ ದೇವಾಲಯದಲ್ಲಿ ಜೂನ್‌ 8ರಿಂದ ದರ್ಶನಕ್ಕೆ ಅವಕಾಶ ನೀಡಿದ ನಂತರ ಬೆಟ್ಟದಲ್ಲಿ ಭಕ್ತರಿಗೆ ರಾತ್ರಿ ತಂಗಲು ನಿರ್ಬಂಧ ವಿಧಿಸಲಾಗಿತ್ತು. ಭಾನುವಾರದಿಂದ ಅನ್ವಯವಾಗುವಂತೆ ಆ ನಿರ್ಬಂಧವನ್ನೂ ತೆರೆವುಗೊಳಿಸಲಾಗಿದ್ದು, ವಸತಿ ಗೃಹಗಳು, ಕಾಟೇಜು, ಡಾರ್ಮಿಟೆರಿಗಳನ್ನು ಪ್ರಾಧಿಕಾರ ಬಾಡಿಗೆಗೆ ನೀಡಲಿದೆ.

ಹೆಚ್ಚುವರಿ ಶುಲ್ಕ: ‘ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಲಾಗುತ್ತದೆ. ಯಾವುದೇ ಕೊಠಡಿ, ಕಾಟೇಜು ಅಥವಾ ಡಾರ್ಮಿಟರಿ ಖಾಲಿ ಆದಾಗ ಅವುಗಳನ್ನು‌ ತಕ್ಷಣ ಶುದ್ಧೀಕರಿಸಿ, ಎಲ್ಲ ವಸ್ತ್ರಗಳನ್ನು ಬದಲಿಸಲಾಗುವುದು. ಇದಕ್ಕಾಗಿ ₹100ಹೆಚ್ಚುವರಿ ಶುಲ್ಕವನ್ನುಪ್ರತಿ ಕೊಠಡಿಗೆ ವಿಧಿಸಲಾಗುವುದು’ ಎಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‌ರಾತ್ರಿ ವಸತಿ ಗೃಹಗಳು ಹಾಗೂ ಕಾಟೇಜು/ಡಾರ್ಮಿಟರಿ ಬಿಟ್ಟು,ರಂಗಮಂದಿರ, ದೇವಾಲಯದ ಮುಂದೆ ಅಥವಾ ಇನ್ನಾವುದೇ ಜಾಗದಲ್ಲಿ ರಾತ್ರಿ ಭಕ್ತಾದಿಗಳು ತಂಗುವಂತಿಲ್ಲ ಎಂದು ಅವರು ಹೇಳಿದ್ದಾರೆ.

‘ಭಾನುವಾರದಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳಿಂದ ಮುಡಿ ಸೇವೆ ಆರಂಭವಾಗಿದೆ.ದಾಸೋಹದಲ್ಲಿ ಹಾಲಿ‌ ಇರುವ ತಿಂಡಿ ಪ್ರಸಾದ ಸೇವೆ ಮಾತ್ರ ಇರಲಿದೆ. ಊಟದ ವ್ಯವಸ್ಥೆ ಇರುವುದಿಲ್ಲ’ ಎಂದು ಅವರು ಮಾಹಿತಿ ನೀಡಿದ್ದಾರೆ.

ನಿಯಮ ಪಾಲನೆ ಕಡ್ಡಾಯ: ‘ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಕೋವಿಡ್‌–19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್‌ಗಳನ್ನು ತಮ್ಮ ಬಳಿ‌ ಯಾವಾಗಲೂ ಇಟ್ಟುಕೊಂಡು ಆಗಾಗ ಉಪಯೋಗಿಸಬೇಕು ಹಾಗೂ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವುದು ಕಡ್ಡಾಯ’ ಎಂದು ಜಯವಿಭವಸ್ವಾಮಿ ಹೇಳಿದ್ದಾರೆ.

ಆನ್‌ಲೈನ್‌ ಬುಕ್ಕಿಂಗ್‌ಗೆ ಅವಕಾಶ
ಆನ್‌ಲೈನ್ ಮೂಲಕ ಎಲ್ಲ ಸೇವೆಗಳನ್ನು ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಭಕ್ತರು mmhillstemple.comಗೆ ಲಾಗಿನ್ ಆಗಿ ಸೇವೆಗಳನ್ನು ಕಾಯ್ದಿರಿಸಬಹುದು.

ಶೀಘ್ರ ಸಹಾಯವಾಣಿ: ‘ಮೂರು ದಿನಗಳಲ್ಲಿ ವಿಶೇಷ ಸಹಾಯವಾಣಿಯನ್ನು ಆರಂಭಿಸಲಾಗುವುದು. 24x7 ಕಾಲ ಈ ಸೇವೆ ಲಭ್ಯವಾಗಲಿದೆ. ಅಲ್ಲಿಯವರೆಗೆ ವೆಬ್‌ಸೈಟ್‌ನಲ್ಲಿ ಇರುವ ಮೆಸೆಂಜರ್ ಮೂಲಕ ಯಾವುದೇ ವಿಷಯ ಕೇಳಬಹುದಾಗಿದೆ. ಉತ್ತರಿಸಲಾಗುವುದು. 08225-272121 ಸಂಖ್ಯೆಗೂ ಕರೆ ಮಾಡಬಹುದು’ ಎಂದು ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.