ADVERTISEMENT

‘ಕೊಳ್ಳೇಗಾಲ ರೇಷ್ಮೆ ಸೀರೆ’ಗೆ ಬ್ರ್ಯಾಂಡ್‌ ರೂಪ

ಚಾಮರಾಜನಗರ: ರೇಷ್ಮೆ ಉದ್ಯಮ ಪುನಶ್ಚೇತನಕ್ಕೆ ಜಿಲ್ಲಾಡಳಿತ ಯೋಜನೆ, ಸ್ಮಾರ್ಟ್‌ ಕೈಮಗ್ಗ ಮಳಿಗೆ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 20:00 IST
Last Updated 10 ಅಕ್ಟೋಬರ್ 2020, 20:00 IST
ವಿವಿಧ ವಿನ್ಯಾಸದ ಕೈಮಗ್ಗದ ರೇಷ್ಮೆ ಸೀರೆಗಳು
ವಿವಿಧ ವಿನ್ಯಾಸದ ಕೈಮಗ್ಗದ ರೇಷ್ಮೆ ಸೀರೆಗಳು   

ಚಾಮರಾಜನಗರ: ಜಿಲ್ಲೆಯ ಕೈಮಗ್ಗ ರೇಷ್ಮೆ ಉದ್ಯಮಕ್ಕೆ ಆಧುನಿಕ ಸ್ಪರ್ಶ ನೀಡಿ, ನೇಕಾರರ ಜೀವನ ಸುಧಾರಣೆಗಾಗಿ ಜಿಲ್ಲಾಡಳಿತ ವಿನೂತನ ಯೋಜನೆ ರೂಪಿಸಿದೆ.

ಜಿಲ್ಲೆಯಲ್ಲಿರುವ ಕೈಮಗ್ಗ ಸಹಕಾರ ಸಂಘಗಳನ್ನು ಬಳಸಿಕೊಂಡು,ಕೊಳ್ಳೇಗಾಲ ರೇಷ್ಮೆ ಸೀರೆ’ ಎಂಬ ಬ್ರ್ಯಾಂಡ್‌ ರೂಪಿಸಿ ಅವುಗಳ ಮಾರಾಟಕ್ಕಾಗಿ ಸ್ಮಾರ್ಟ್‌ ಕೈಮಗ್ಗ ಮಳಿಗೆಯೊಂದನ್ನು (ಸ್ಮಾರ್ಟ್‌ ಹ್ಯಾಂಡ್‌ಲೂಮ್‌ ಔಟ್‌ಲೆಟ್‌) ಸ್ಥಾಪಿಸಲು ಯೋಜನಾ ವರದಿಯೊಂದನ್ನು ಸಿದ್ಧಪಡಿಸಿದೆ.ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರ ಪರಿಕಲ್ಪನೆಯಲ್ಲಿ ಈ ಯೋಜನೆ ರೂಪುಗೊಂಡಿದ್ದು, ಶೀಘ್ರದಲ್ಲಿ ಅನುಷ್ಠಾನಕ್ಕೆ‌ ಬರಲಿದೆ.

ಕೈಮಗ್ಗ ಮತ್ತು ಜವಳಿ ಇಲಾಖೆಯು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿರುವ ಯೋಜನಾ ವರದಿಯ ಪ್ರಕಾರ, ಯೋಜನೆ ಅನುಷ್ಠಾನಕ್ಕೆ ಅಂದಾಜು ₹20 ಲಕ್ಷ ವೆಚ್ಚವಾಗಲಿದೆ. ನೇಕಾರಿಕೆ ಹಾಗೂ ಅದರ ಉಪಕಸುಬುಗಳು ಸೇರಿದಂತೆ 300ರಿಂದ 400 ಉದ್ಯೋಗಗಳನ್ನು ಸೃಷ್ಟಿಸಬಹುದು.

ADVERTISEMENT

ಜಿಲ್ಲೆಯಲ್ಲಿ ಒಂಬತ್ತು ಕೈಮಗ್ಗ ಸಹಕಾರ ಸಂಘಗಳಿವೆ. 400 ಮಂದಿ ನೇಕಾರರು ನೇಯ್ಗೆಯ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೊಳ್ಳೇಗಾಲ ಭಾಗದಲ್ಲಿ ಕೈಮಗ್ಗ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಯೋಜನೆಗಾಗಿ ಕೊಳ್ಳೇಗಾಲವನ್ನು ಜಿಲ್ಲಾಡಳಿತ ಆಯ್ಕೆ ಮಾಡಿದೆ.

ಉದ್ದೇಶ: ಕೊಳ್ಳೇಗಾಲ ಈ ಹಿಂದೆ ಕೈಮಗ್ಗದ ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿತ್ತು. ಆದರೆ, ಆಧುನಿಕತೆ ತೆರೆದುಕೊಳ್ಳಲು ಸಾಧ್ಯವಾಗದೇ ಈಗ ತೆರೆಮರೆಗೆ ಸರಿಯುತ್ತಿದೆ. ಹಲವು ನೇಕಾರರು ಈ ಕ್ಷೇತ್ರದಿಂದ ವಿಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಕೈಮಗ್ಗ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜ‌ನ ನೀಡಿ, ನೇಕಾರರು ಹೆಚ್ಚು ರೇಷ್ಮೆ ಸೀರೆಗಳನ್ನು ಹೆಚ್ಚು ಉತ್ಪಾದಿಸುವಂತೆ ಮಾಡುವುದು, ಮಧ್ಯವರ್ತಿಗಳ ಹಾವಳಿ ಇಲ್ಲದೇ ಸ್ಮಾರ್ಟ್‌ ಮಳಿಗೆ ಮೂಲಕ ಉತ್ಪಾದಕರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಯೋಜನೆಯ ಒಟ್ಟು ತಿರುಳು.ಜಿಲ್ಲೆಯ ಎಲ್ಲ ಕೈಮಗ್ಗ ಸಹಕಾರ ಸಂಘಗಳು ಉತ್ಪಾದಿಸುವ ರೇಷ್ಮೆ ಸೀರೆಗಳು ಈ ಸ್ಮಾರ್ಟ್‌ ಮಳಿಗೆಯಲ್ಲಿ ಸಿಗಲಿದೆ.

ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ 3,060 ಸೀರೆಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದ್ದು, ವಾರ್ಷಿಕವಾಗಿ ₹1.58 ಕೋಟಿ ವಹಿವಾಟು ನಡೆಯುವ ನಿರೀಕ್ಷೆ ಜಿಲ್ಲಾಡಳಿತಕ್ಕಿದೆ.

‘ಒಂಬತ್ತು ಕೈಮಗ್ಗ ಸಹಕಾರ ಸಂಘಗಳನ್ನು ಕ್ಲಸ್ಟರ್‌ನಂತೆ ಮಾಡಿ, ಸಂಘಗಳು ತಯಾರಿಸುವ ರೇಷ್ಮೆ ಸೀರೆಗಳನ್ನು ‘ಕೊಳ್ಳೇಗಾಲ ರೇಷ್ಮೆ ಸೀರೆ’ ಎಂಬ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟ ಮಾಡುವುದು ಯೋಜನೆಯ ಉದ್ದೇಶ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಹೇಳಿದರು.

‘ಜಿಲ್ಲೆಯಲ್ಲಿ 779 ರೀಲರ್‌ಗಳ ಕುಟುಂಬಗಳು ರೇಷ್ಮೆ ಕೈಮಗ್ಗವನ್ನು ನಂಬಿಕೊಂಡಿವೆ. ಅವರ ಜೀವನಮಟ್ಟ ಸುಧಾರಣೆ ಆಗಿಲ್ಲ. ಅವರಿಗೆ ಆರ್ಥಿಕ ಭದ್ರತೆ, ಸುರಕ್ಷತೆ ಇಲ್ಲ. ಅವರಿಗೆ ಬ್ಯಾಂಕಿಂಗ್‌ ಬೆಂಬಲ ಹಾಗೂ ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆಯ ಬೆಂಬಲ ಕೊಟ್ಟು ಅವರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಯೋಜನೆಯಾಗಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.