ADVERTISEMENT

ಪುನೀತ್ ಆದರ್ಶ: ನೇತ್ರದಾನ ಅಭಿಯಾನಕ್ಕೆ ಚಾಮರಾಜನಗರ ಜಿಲ್ಲಾಡಳಿತ ನಿರ್ಧಾರ

46 ಸಾವಿರ ಜನರನ್ನು ನೋಂದಾಯಿಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 15:33 IST
Last Updated 10 ನವೆಂಬರ್ 2021, 15:33 IST
ಜಿಲ್ಲೆಯಲ್ಲಿ ನೇತ್ರದಾನ ಅಭಿಯಾನ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನೇತೃತ್ವದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಯಿತು
ಜಿಲ್ಲೆಯಲ್ಲಿ ನೇತ್ರದಾನ ಅಭಿಯಾನ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನೇತೃತ್ವದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಯಿತು   

ಚಾಮರಾಜನಗರ: ಈಚೆಗೆ ನಿಧನರಾದ ನಟ ಪುನೀತ್‌ ರಾಜ್‌ಕುಮಾರ್‌ ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದನ್ನು ಆದರ್ಶವಾಗಿಟ್ಟುಕೊಂಡು, ಜಿಲ್ಲೆಯಲ್ಲಿ ಅವರ ಗೌರವಾರ್ಥ ನೇತ್ರದಾನ ಅಭಿಯಾನ ಕೈಗೊಳ್ಳುವ ತೀರ್ಮಾನವನ್ನು ಜಿಲ್ಲಾಡಳಿತ ಕೈಗೊಂಡಿದೆ.

ನವೆಂಬರ್ ಅಂತ್ಯದೊಳಗೆ 10 ಸಾವಿರ ಜನರನ್ನು ನೇತ್ರದಾನಕ್ಕಾಗಿ ನೋಂದಾಯಿಸುವ ಕಾರ್ಯದ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ. ಪುನೀತ್ ರಾಜ್‌ಕುಮಾರ್ 46ನೇ ವಯಸ್ಸಿನಲ್ಲಿ ನಿಧನರಾಗಿರುವುದರಿಂದ, 46 ಸಾವಿರ ಜನರನ್ನು ನೇತ್ರದಾನಕ್ಕಾಗಿ ನೋಂದಾಯಿಸಲು ತೀರ್ಮಾನಿಸಿದೆ.

ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳನ್ನು ನೇತ್ರದಾನಕ್ಕೆ ಪ್ರೇರೇಪಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿಯೇ ರೆಡ್‌ಕ್ರಾಸ್, ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಎಲ್ಲೆಡೆ ನೇತ್ರದಾನ ನೋಂದಣಿ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಶಿಬಿರಗಳ ಯಶಸ್ಸಿಗೆ ಜಿಲ್ಲೆಯ ಸ್ವಯಂ ಸೇವಾ ಸಂಸ್ಥೆಗಳು, ನೆಹರು ಯುವ ಕೇಂದ್ರ ಇನ್ನಿತರ ಸಂಘ ಸಂಸ್ಥೆಗಳ ಸಹಕಾರವನ್ನು ಪಡೆಯಲಿದೆ.

ADVERTISEMENT

ಜಿಲ್ಲೆಯಲ್ಲಿ ನಿರ್ಮಿಸಲಾಗುವ ಕಣ್ಣಿನ ಆಸ್ಪತ್ರೆಗೆ ಪುನೀತ್ ರಾಜ್‌ಕುಮಾರ್ ಹೆಸರನ್ನೇ ಇಡುವ ಮೂಲಕ ಗೌರವ ಸಲ್ಲಿಸಲೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

‘ಜಿಲ್ಲೆಯ ಪ್ರವಾಸೋದ್ಯಮ ರಾಯಭಾರಿಯಾಗಿದ್ದ ಹಾಗೂ ಜಿಲ್ಲೆಯವರೇ ಆಗಿದ್ದ ಪುನೀತ್ ರಾಜ್‌ಕುಮಾರ್ ಗೌರವಾರ್ಥ ಜಿಲ್ಲೆಯ ವತಿಯಿಂದ ಗೌರವಪೂರ್ವಕ ಸ್ಮರಣೀಯ ಕಾರ್ಯ ಹಮ್ಮಿಕೊಳ್ಳಬೇಕಿದೆ. ವ್ಯಕ್ತಿ ಮರಣ ಹೊಂದಿದ ನಂತರ ಕಣ್ಣುಗಳು ಮಣ್ಣಾಗಬಾರದು. ಆ ಕಣ್ಣುಗಳು ಜೀವಂತವಿದ್ದು, ದೃಷ್ಟಿದೋಷವುಳ್ಳವರಿಗೆ ದಾರಿದೀಪವಾಗಬೇಕು. ಪುನೀತ್ ರಾಜ್‌ಕುಮಾರ್ ನೇತ್ರದಾನ ಆದರ್ಶ ಎಲ್ಲರಲ್ಲಿಯೂ ಬರಬೇಕು. ಇದಕ್ಕಾಗಿ ಜಿಲ್ಲೆಯಾದ್ಯಂತ ನೇತ್ರದಾನ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡು ಜನರನ್ನು ಜಾಗೃತಗೊಳಿಸಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ನೇತ್ರದಾನ ಅಭಿಯಾನ ಹಮ್ಮಿಕೊಳ್ಳುವ ಉದ್ದೇಶದಿಂದ ಎಲ್ಲ ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಅಂಗವಿಕಲರ ಇಲಾಖೆಯ ವರದಿಯನ್ವಯ ಜಿಲ್ಲೆಯಲ್ಲಿ ದೃಷ್ಟಿದೋಷ ಹೊಂದಿರುವ 3,500 ಜನರಿದ್ದಾರೆ. ಇವರ ನಿಖರ ಸಂಖ್ಯೆಯನ್ನು ತಿಳಿಯಲು ಸಮೀಕ್ಷೆ ನಡೆಸುವ ಅಗತ್ಯವಿದೆ. ಇದಕ್ಕಾಗಿ ವ್ಯವಸ್ಥಿತವಾದ ಗುರಿ ನಿಗದಿಪಡಿಸಿಕೊಳ್ಳಬೇಕು. ಜಿಲ್ಲಾಡಳಿತ ಭವನದಲ್ಲಿಯೂ ಒಂದು ದಿನದ ಶಿಬಿರ ಆಯೋಜಿಸಲಾಗುವುದು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಸಂಜೀವ್, ಜಿಲ್ಲಾಸ್ಪತ್ರೆಯ ನೋಡೆಲ್ ಅಧಿಕಾರಿ ಡಾ.ಮಹೇಶ್, ಜಿಲ್ಲಾ ಸರ್ವೇಲೆನ್ಸ್ ಘಟಕದ ಅಧಿಕಾರಿ ಡಾ.ನಾಗರಾಜು ಇದ್ದರು.

‘ಕಣ್ಣಿನ ಆಸ್ಪತ್ರೆಗೆ ಪುನೀತ್‌ ಹೆಸರು’

‘ಜಿಲ್ಲೆಯಲ್ಲಿ ಕಣ್ಣಿನ ಆಸ್ಪತ್ರೆಯ ಅವಶ್ಯವಿದ್ದು, ಈಗಾಗಲೇ ಜಾಗ ಗುರುತಿಸಿ, ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಾಗ ಲಭ್ಯವಿಲ್ಲದಿದ್ದರೆ ಸರ್ಕಾರದಿಂದಲೇ ಸ್ಥಳ ನೀಡಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಿರುವ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ನಿಧಿ ಕೇಂದ್ರ (ಐ ಬ್ಯಾಂಕ್‌) ಸ್ಥಾಪಿಸಲಾಗುವುದು. ಜಿಲ್ಲೆಯಲ್ಲಿ ನಿರ್ಮಾಣ ಮಾಡುವ ಕಣ್ಣಿನ ಆಸ್ಪತ್ರೆಗೆ ಪುನೀತ್ ರಾಜ್‌ಕುಮಾರ್ ಹೆಸರಿಡುವ ಮೂಲಕ ಜಿಲ್ಲಾಡಳಿತ ಗೌರವ ಸಲ್ಲಿಸಲಿದೆ’ ಎಂದು ಡಾ.ಎಂ.ಆರ್.ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.