ADVERTISEMENT

ಚಾಮರಾಜನಗರ: ಜಿಲ್ಲಾ ದಸರಾಗೆ ವರ್ಣರಂಜಿತ ಚಾಲನೆ

ಮಹದೇವ್ ಹೆಗ್ಗವಾಡಿಪುರ
Published 8 ಅಕ್ಟೋಬರ್ 2021, 7:25 IST
Last Updated 8 ಅಕ್ಟೋಬರ್ 2021, 7:25 IST
ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ಡೋಲು ಬಾರಿಸುವ ಮೂಲಕ ಜಿಲ್ಲಾ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು. ಜಿ.ಪಂ. ಸಿಇಒ ಹರ್ಷಲ್‌ ಭೊಯರ್‌ ನಾರಾಯಣ ರಾವ್‌, ಶಾಸಕರಾದ ಸಿ.ಎಸ್‌.ನಿರಂಜನಕುಮಾರ್‌, ಆರ್‌.ನರೇಂದ್ರ, ಎನ್‌.ಮಹೇಶ್‌, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ರಾಮಚಂದ್ರ, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ನಗರಸಭೆ ಅಧ್ಯಕ್ಷೆ ಆಶಾ, ಉಪಾಧ್ಯಕ್ಷೆ ಸುಧಾ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಇದ್ದಾರೆ
ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ಡೋಲು ಬಾರಿಸುವ ಮೂಲಕ ಜಿಲ್ಲಾ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು. ಜಿ.ಪಂ. ಸಿಇಒ ಹರ್ಷಲ್‌ ಭೊಯರ್‌ ನಾರಾಯಣ ರಾವ್‌, ಶಾಸಕರಾದ ಸಿ.ಎಸ್‌.ನಿರಂಜನಕುಮಾರ್‌, ಆರ್‌.ನರೇಂದ್ರ, ಎನ್‌.ಮಹೇಶ್‌, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ರಾಮಚಂದ್ರ, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ನಗರಸಭೆ ಅಧ್ಯಕ್ಷೆ ಆಶಾ, ಉಪಾಧ್ಯಕ್ಷೆ ಸುಧಾ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಇದ್ದಾರೆ   

ಚಾಮರಾಜನಗರ: ಮೈಸೂರು ದಸರಾದ ಅಂಗವಾಗಿ ಜಿಲ್ಲೆಯಲ್ಲಿ ನಾಲ್ಕು ದಿನದ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು.

ಕೋವಿಡ್‌ ಕಾರಣಕ್ಕೆ ಸರಳವಾಗಿ ಹಮ್ಮಿಕೊಳ್ಳಲಾಗಿರುವ ಈ ಬಾರಿಯ ದಸರಾ ಮಹೋತ್ಸವಕ್ಕೆ ಗುರುವಾರ ಬೆಳಿಗ್ಗೆ ಚಾಮರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರೆ; ಸಂಜೆ ದೇವಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.

ಡೋಲು ಬಾರಿಸುವ ಮೂಲಕ ನಾಲ್ಕು ದಿನದ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ‘ಎಂಟು ವರ್ಷಗಳಿಂದ ಜಿಲ್ಲೆಯಲ್ಲೂ ದಸರಾ ಮಹೋತ್ಸವ ಆಯೋಜಿಸಲಾಗುತ್ತಿದೆ. ಮೈಸೂರಿನಂತೆಯೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಕೋವಿಡ್‌ ಕಾರಣದಿಂದ ಸರಳವಾಗಿ ನಡೆಯುವ ಈ ಕಾರ್ಯಕ್ರಮಗಳಲ್ಲಿ ಈ ಸಲ ಸ್ಥಳೀಯ ಕಲಾವಿದರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಇವರ ಕಲೆ ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಜಿಲ್ಲೆಯ ಜನರು ಸಹಕಾರ ನೀಡಬೇಕು’ ಎಂದು ತಿಳಿಸಿದರು.

ADVERTISEMENT

ಹನೂರು ಶಾಸಕ ಆರ್.ನರೇಂದ್ರ ಮಾತನಾಡಿ, ‘ಚಾಮರಾಜನಗರ ಜಿಲ್ಲೆಯು ಹಿಂದೆ ಮೈಸೂರಿನ ಒಂದು ಭಾಗವಾಗಿರುವುದರಿಂದ ಇಲ್ಲಿಯೂ ದಸರಾ ಕಾರ್ಯಕ್ರಮ ಆಚರಿಸಬೇಕು ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವರಾಗಿದ್ದ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಪ್ರಯತ್ನದ ಫಲವಾಗಿ ಇಂದು ಜಿಲ್ಲೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿವೆ. ತಾಲ್ಲೂಕು ಮಟ್ಟದಲ್ಲಿ ನಡೆಯುತ್ತಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೋವಿಡ್‌ ಕಾರಣಕ್ಕೆ ಜಿಲ್ಲಾ ಕೇಂದ್ರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ’ ಎಂದರು.

ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಮಾತನಾಡಿ, ‘ದಸರಾ ಕಾರ್ಯಕ್ರಮಗಳನ್ನು ಸರಳವಾಗಿ ಆಯೋಜಿಸಲಾಗಿದ್ದರೂ; ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರ ವಿಜೃಂಭಣೆಯಿಂದ ನಡೆಯುತ್ತಿವೆ. ಜಿಲ್ಲೆಯ ಕಲಾ ಪ್ರತಿಭೆಗಳ ಪ್ರದರ್ಶನಕ್ಕೆ ಇದು ಉತ್ತಮ ವೇದಿಕೆಯಾಗಿದೆ’ ಎಂದು ತಿಳಿಸಿದರು.

ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ, ಉಪಾಧ್ಯಕ್ಷೆ ಬಿ.ಸುಧಾ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಚುಡಾ ಅಧ್ಯಕ್ಷ ಶಾಂತಮೂರ್ತಿ, ಜಿಲ್ಲಾಧಿಕಾರಿ ಡಾ.ಎಂ.ಸಿ.ರವಿ, ಜಿಲ್ಲಾ ಪಂಚಾಯಿತಿ ಕಾರ್ಯನಿವಾಹಕ ಅಧಿಕಾರಿ ಹರ್ಷಲ್ ಭೊಯರ್‌ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಹಾಜರಿದ್ದರು.

ಚಾಮರಾಜೇಶ್ವರನಿಗೆ ವಿಶೇಷ ಪೂಜೆ: ಗುರುವಾರ ಬೆಳಿಗ್ಗೆ 10.15ಕ್ಕೆ ಚಾಮರಾಜೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರಾ ಸಂಭ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ, ಉಪಾಧ್ಯಕ್ಷೆ ಸುಧಾ, ಜಿಲ್ಲಾ‌ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿ ದೇವಿ ಚಾಮರಾಜೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಚಾಮರಾಜೇಶ್ವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಗಣ್ಯರು, ಸಾಂಕೇತಿಕವಾಗಿ ದೀಪ ಬೆಳಗಿದರು.

ದೇವಾಲಯದ ಆವರಣದಲ್ಲಿರುವ ಚಾಮುಂಡೇಶ್ವರಿ ದೇವಿ ಹಾಗೂ ಕೆಂಪನಂಜಾಂಬ ದೇಗುಲಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಾಲಯದ ಮುಂಭಾಗದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು.

ದೇವಾಲಯದ ಆವರಣದಲ್ಲಿ ವಿವಿಧ ಕಲಾವಿದರು ಬಿಡಿಸಿರುವ ಚಿತ್ರಗಳ ಪ್ರದರ್ಶನವನ್ನೂ ಗಣ್ಯರು ಉದ್ಘಾಟಿಸಿದರು.

ಬಳಿಕ ಜನನ ಮಂಟಪದವರೆಗೂ ಮೆರವಣಿಗೆಯಲ್ಲಿ ತೆರಳಿ ಮೈಸೂರು ರಾಜ ವಂಶಸ್ಥರಾದ ಚಾಮರಾಜೇಂದ್ರ ಒಡೆಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಗಮನ ಸೆಳೆದ ಕಲಾ ತಂಡಗಳು: ಇದಕ್ಕೂ ಮೊದಲು, ಚಾಮರಾಜೇಶ್ವರ ಉದ್ಯಾನದ ಬಳಿಯಿಂದ ಶಾಸಕರು ಹಾಗೂ ಇತರ ಗಣ್ಯರನ್ನು ಮಂಗಳವಾದ್ಯಗಳೊಂದಿಗೆ ಕಲಾ ತಂಡಗಳ ಮೆರವಣಿಗೆಯ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಕಂಸಾಳೆ, ಡೋಲು, ವೀರಗಾಸೆ, ಗೊರವರ ಕುಣಿತ, ಬೀಸು ಕಂಸಾಳೆ, ಬ್ಯಾಂಡ್ ಸೆಟ್, ಹುಲಿ ವೇಷ, ಗೊಂಬೆ ಕುಣಿತ ಕಲಾ ತಂಡಗಳು‌ ಮೆರವಣಿಗೆಗೆ‌ ಮೆರುಗು ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.