ADVERTISEMENT

ಕಾರ್ತಿಕ ಮಾಸ: ಹೂವುಗಳಿಗೆ ಹೆಚ್ಚಿದ ಬೇಡಿಕೆ

ಈರುಳ್ಳಿ, ಆಲೂಗಡ್ಡೆ ₹10 ತುಟ್ಟಿ, ದಾಳಿಂಬೆಯ ಬೆಲೆ ಗಗನಕ್ಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 16:34 IST
Last Updated 23 ನವೆಂಬರ್ 2020, 16:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಒಂದೆರಡು ತರಕಾರಿ, ಹಣ್ಣುಗಳ ಬೆಲೆ ಹೆಚ್ಚಾಗಿದೆ.ಕಾರ್ತಿಕ ಮಾಸದಲ್ಲಿ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ ಹಾಗೂ ಶುಭ ಸಮಾರಂಭಗಳು ಹೆಚ್ಚಾಗಿರುವುದರಿಂದ ಹೂವುಗಳಿಗೆ ಭಾರಿ ಬೇಡಿಕೆ ಕಂಡು ಬಂದಿದ್ದು, ಬೆಲೆಯೂ ದುಬಾರಿ ಇದೆ.

ತರಕಾರಿಗಳ ಪೈಕಿ, ಹಾಪ್‌ ಕಾಮ್ಸ್‌ನಲ್ಲಿ ಈರುಳ್ಳಿ ಹಾಗೂ ಆಲೂಗಡ್ಡೆಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

‘ಕಳೆದ ವಾರದವರೆಗೆ ಕೆಜಿ ಆಲೂಗಡ್ಡೆಗೆ ₹50 ಇತ್ತು. ಈ ವಾರ ₹60ಕ್ಕೆ ಏರಿದೆ. ಅದೇ ರೀತಿ ₹60 ಇದ್ದ ಈರುಳ್ಳಿ ಬೆಲೆ ₹70 ಆಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಟೊಮೆಟೊ (₹10), ಕ್ಯಾರೆಟ್‌ (₹40), ಬೀನ್ಸ್‌ (₹20) ಬೆಲೆ ಯಥಾಸ್ಥಿತಿ ಮುಂದುವರಿದಿದೆ. ತೊಂಡೆಕಾಯಿ (₹30) ಬೆಲೆಯಲ್ಲಿ ₹10 ಇಳಿಕೆಯಾಗಿದೆ.

ಹಣ್ಣುಗಳ ಪೈಕಿ ದಾಳಿಂಬೆ ಧಾರಣೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದ ವಾರದವರೆಗೂ ಕೆಜಿಗೆ ₹100–₹120ರವರೆಗೆ ಇದ್ದ ದರ, ಈ ವಾರ ₹160–₹180ಕ್ಕೆ ಏರಿದೆ. ಮಾರುಕಟ್ಟೆಗೆ ದಾಳಿಂಬೆ ಹೆಚ್ಚು ಆವಕವಾಗುತ್ತಿಲ್ಲ ಎಂದು ಹೇಳುತ್ತಾರೆ ವ್ಯಾಪಾರಿಗಳು. ಉಳಿದ ಹಣ್ಣುಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ನಗರದ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೂವುಗಳಿಗೆ ಭಾರಿ ಬೇಡಿಕೆ ಕಂಡು ಬಂದಿದ್ದು, ಗ್ರಾಹಕರು ಹೆಚ್ಚು ಬೆಲೆ ಕೊಟ್ಟು ಖರೀದಿಸಬೇಕಾಗಿದೆ.

ಕನಕಾಂಬರ ಕೆಜಿಗೆ ₹1,000, ಕಾಕಡ–₹400, ಗುಣಮಟ್ಟದ ಚೆಂಡು ಹೂವಿಗೆ ₹40, ಸುಗಂಧರಾಜಕ್ಕೆ ₹100, ಬಟನ್‌ ಗುಲಾಬಿ ಕೆಜಿಗೆ ₹320 ಇದೆ.

‘ಕಾರ್ತಿ‌ಕ ಮಾಸದ ಕಾರಣದಿಂದ ಹೂವುಗಳಿಗೆ ಬೇಡಿಕೆ ಇದ್ದು, ಬೆಲೆಯೂ ಹೆಚ್ಚಾಗಿದೆ. ಈ ತಿಂಗಳು ಪೂರ್ತಿ ಇದೇ ಬೆಲೆ ಇರಲಿದೆ’ ಎಂದು ಬಿಡಿಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಂಸಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.