ADVERTISEMENT

ಚಾಮರಾಜನಗರ: ಎಚ್ಚೆತ್ತ ನಗರಸಭೆ, ಟ್ಯಾಂಕ್‌ ಕೆಡಹುವ ಪ್ರಕ್ರಿಯೆ ಶುರು

ಸೋಮವಾರಪೇಟೆಯಲ್ಲೂ ಇದೆ ಶಿಥಿಲಗೊಂಡ ಓವರ್‌ಹೆಡ್‌ ಟ್ಯಾಂಕ್‌, ಭಗೀರಥನಗರದಲ್ಲಿ ತಪ್ಪಿದ್ದ ಅನಾಹುತ

ಸೂರ್ಯನಾರಾಯಣ ವಿ
Published 12 ಜೂನ್ 2020, 12:14 IST
Last Updated 12 ಜೂನ್ 2020, 12:14 IST
ಶಿಥಿಲಗೊಂಡಿರುವ ಓವರ್‌ಹೆಡ್‌ ಟ್ಯಾಂಕ್‌ ತೆರವು ಕಾರ್ಯ ಆರಂಭವಾಗಿದೆ
ಶಿಥಿಲಗೊಂಡಿರುವ ಓವರ್‌ಹೆಡ್‌ ಟ್ಯಾಂಕ್‌ ತೆರವು ಕಾರ್ಯ ಆರಂಭವಾಗಿದೆ   

ಚಾಮರಾಜನಗರ: ನಗರದ ತಹಶೀಲ್ದಾರ್‌ ಕಚೇರಿ ಹಿಂಭಾಗದ ಭಗೀರಥನಗರದಲ್ಲಿ ಶಿಥಿಲಗೊಂಡಿದ್ದ ಓವರ್‌ ಹೆಡ್‌ ಟ್ಯಾಂಕ್‌ ಕುಸಿದು ಭಾರಿ ಅನಾಹುತ ತಪ್ಪಿದ ನಂತರ ಎಚ್ಚೆತ್ತುಕೊಂಡಿರುವ ನಗರಸಭೆ, ಸೋಮವಾರಪೇಟೆಯಲ್ಲಿರುವ ಶಿಥಿಲಾವಸ್ಥೆ ತಲುಪಿರುವ ಓವರ್‌ ಹೆಡ್‌ ಟ್ಯಾಂಕ್‌ ಅನ್ನು ಕೆಡಹುವುದಕ್ಕೆ ಮುಂದಾಗಿದೆ. ‌

ಸೋಮವಾರಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ (ನಗರಸಭೆ 1ನೇ ವಾರ್ಡ್‌ ಹಾಗೂ 2ನೇ ವಾರ್ಡ್) ಮನೆಗೆ ನೀರು ಪೂರೈಸುತ್ತಿದ್ದ 50 ಸಾವಿರ ಲೀಟರ್‌ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ ಅನ್ನು 1985ರಲ್ಲಿ ನಿರ್ಮಿಸಲಾಗಿತ್ತು.ಆಂಜನೇಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಟ್ಯಾಂಕ್,‌ ಶಿಥಿಲಾವಸ್ಥೆ ತಲುಪಿ ವರ್ಷಗಳೇ ಉರುಳಿವೆ. ಟ್ಯಾಂಕ್‌ನ ಪಿಲ್ಲರ್‌ಗಳಿಂದ ಸಿಮೆಂಟ್‌ ಕಳಚಿ ಬೀಳುತ್ತಿತ್ತು.

ಟ್ಯಾಂಕ್‌ನ ಸುತ್ತಮುತ್ತ ಹಲವು ಮನೆಗಳಿದ್ದು, ನಿವಾಸಿಗಳು ಜೀವ ಭಯದಲ್ಲೇ ವಾಸಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಟ್ಯಾಂಕ್‌ ತೆರವುಗೊಳಿಸುವಂತೆ ಸ್ಥಳೀಯ ಮುಖಂಡರು, ನಿವಾಸಿಗಳು ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಿದ್ದರು. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿರಲಿಲ್ಲ.

ADVERTISEMENT

‌‘ಕೆಲವು ವರ್ಷಗಳಿಂದ ಸ್ವಲ್ಪ ಸ್ವಲ್ಪನೇ ಪಿಲ್ಲರ್‌ಗಳಿಂದ ಸಿಮೆಂಟ್‌ ಕಳಚಿ ಬೀಳುತ್ತಿದೆ. ಓವರ್‌ ಹೆಡ್‌ ಟ್ಯಾಂಕ್‌ ಬಿದ್ದರೆ ಕನಿಷ್ಠ 10 ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಅದರ ಪಕ್ಕದಲ್ಲೇ ನಮ್ಮ ಮನೆ ಇದೆ. ಭಾರಿ ಪ್ರಮಾಣದಲ್ಲಿ ನೀರು ತುಂಬಿರುವ ಟ್ಯಾಂಕ್‌ ಎಲ್ಲಿ ಕುಸಿಯುತ್ತದೆಯೋ ಎಂಬ ಆತಂಕದಲ್ಲೇ ಇದ್ದೆವು’ ಎಂದು ಸ್ಥಳೀಯ ನಿವಾಸಿ ಪದ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.‌

‘ಅಪಾಯಕಾರಿ ಟ್ಯಾಂಕ್‌ ತೆರವುಗೊಳಿಸುವಂತೆ ನಗರಸಭೆಗೆ ಮೂರು ಬಾರಿ ಅರ್ಜಿ ಹಾಕಿದ್ದೆವು. ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಈಗ ದಿಢೀರನೆ ಎರಡು ದಿನಗಳಿಂದ ಕೆಡಹುವ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ನಮಗಿದ್ದ ಭಯ ದೂರವಾಗಿದೆ’ ಎಂದು ಅವರು ಹೇಳಿದರು.

‘ಈ ಟ್ಯಾಂಕ್‌ ಸೋಮವಾರಪೇಟೆಯ ಬಹುಪಾಲು ಕುಟುಂಬಗಳಿಗೆ ನೀರು ಪೂರೈಸುತ್ತಿದೆ. ಶಿಥಿಲವಾಗಿದ್ದರಿಂದ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕೇಳಿಕೊಂಡಿದ್ದೆವು. ಆದರೆ, ಅವರು ಕಿವಿಗೆ ಹಾಕಿಕೊಂಡಿರಲಿಲ್ಲ. ಶಿಥಿಲವಾಗಿದ್ದರೂ ನಗರಸಭೆ ಇದರಲ್ಲಿ ನೀರು ತುಂಬಿಸಿ, ಅದರಿಂದಲೇ ಮನೆ ಮನೆಗಳಿಗೆ ಸರಬರಾಜು ಮಾಡುತ್ತಿತ್ತು’ ಎಂದು ಹೆಳವರ ಬೀದಿಯ ಮುಖಂಡ ಮುತ್ತ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‌

‘ಭಗೀರಥನಗರದಲ್ಲಿ ಓವರ್‌ ಹೆಡ್‌ ಕುಸಿದ ನಂತರ ಎಚ್ಚೆತ್ತುಕೊಂಡಿರುವ ನಗರಸಭೆಯ ಅಧಿಕಾರಿಗಳು ಈಗ, ಇದನ್ನೂ ತೆರವುಗೊಳಿಸಲು ಮುಂದಾಗಿದ್ದಾರೆ. ಯಾವಾಗಲೋ ಆಗಬೇಕಿದ್ದ ಕಾರ್ಯ ಈಗ ನಡೆಯುತ್ತಿದೆ. ಇನ್ನಾದರೂ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡಬಹುದು’ ಎಂದು ಅವರು ಹೇಳಿದರು.

‌ನಿರ್ಲಕ್ಷ್ಯ: ಭಗೀರಥನಗರದಲ್ಲಿ ಶಿಥಿಲಗೊಂಡಿದ್ದ ಟ್ಯಾಂಕ್‌ ತೆರವುಗೊಳಿಸಬೇಕು ಎಂದು ಸ್ಥಳೀಯರು ಏಳೆಂಟು ವರ್ಷಗಳಿಂದ ನಗರಸಭೆಗೆ ಮನವಿ ಮಾಡಿದ್ದರು. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರು ಕೂಡ ಸ್ಥಳಕ್ಕೆ ಭೇಟಿ ಕೊಟ್ಟು, ತಕ್ಷಣ ತೆರವುಗೊಳಿಸಬೇಕು ಎಂದು ಸೂಚಿಸಿದ್ದರು. ಹಾಗಿದ್ದರೂ ಅಧಿಕಾರಿಗಳು ಕೆಡವಲು ಕ್ರಮ ಕೈಗೊಂಡಿರಲಿಲ್ಲ. ‌

ಕಳೆದ ಶನಿವಾರದ ತಡರಾತ್ರಿ ಪೂರ್ಣ ಭರ್ತಿಯಾಗಿದ್ದ ಟ್ಯಾಂಕ್‌ ಕುಸಿದು ಬಿದ್ದಿತ್ತು. ಒಂದು ವೇಳೆ ಪಕ್ಕದಲ್ಲಿದ್ದ ಮನೆಗಳ ಮೇಲೆ ಟ್ಯಾಂಕ್‌ ಬಿದ್ದಿದ್ದರೆ, ಸಾವು ನೋವು ಸಂಭವಿಸುತ್ತಿತ್ತು. ಅಧಿಕಾರಿಗಳ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಸ್ಥಳೀಯರು, ನಿರ್ಲಕ್ಷ್ಯದಿಂದಾಗಿ ಈ ರೀತಿಯಾಗಿದೆ ಎಂದು ಆರೋಪಿಸಿದ್ದರು.

ಬೇರೆ ಟ್ಯಾಂಕ್‌ನಿಂದ ನೀರು ಪೂರೈಕೆ‌

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಎಂ.ರಾಜಣ್ಣ ಅವರು, ‘ಭಗೀರಥನಗರದ ಟ್ಯಾಂಕ್‌ ರೀತಿಯಲ್ಲೇ ಇದು ಕೂಡ ಶಿಥಿಲಗೊಂಡಿತ್ತು. ದೂರುಗಳೂ ಬಂದಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಕೆಡವಲಾಗುತ್ತಿದೆ’ ಎಂದು ಹೇಳಿದರು. ‌

‘ಕರ್ನಾಟಕ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ತೆರವುಗೊಳಿಸಲು ಅನುಮತಿ ಪಡೆಯಲಾಗಿದೆ. ಕೆಲಸ ಆರಂಭವಾಗಿ ಎರಡು ದಿನಗಳಾಗಿವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ತೆರವುಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಅವರು ಹೇಳಿದರು.‌

‘ಈ ಟ್ಯಾಂಕ್‌ ಮೂಲಕ 1 ಮತ್ತು 2ನೇ ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತಿತ್ತು. ಇನ್ನೀಗ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿಯಿರುವ ಓವರ್‌ ಹೆಡ್‌ ಟ್ಯಾಂಕ್‌ನಿಂದ ಮನೆಗಳಿಗೆ ನೀರು ಸರಬರಾಜು ಮಾಡಲಾಗುವುದು’ ಎಂದು ರಾಜಣ್ಣ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.