ADVERTISEMENT

ಚಾಮರಾಜನಗರ: ಬಂಡೀಪುರ ಸೇರಿದಂತೆ ಪ್ರವಾಸಿ ತಾಣಗಳಿಗೆ ಜನರ ಲಗ್ಗೆ

ರಜೆ ಪರಿಣಾಮ: ಬಂಡೀಪುರ ಮಹದೇಶ್ವರ ಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟಗಳಲ್ಲೂ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 13:34 IST
Last Updated 27 ಡಿಸೆಂಬರ್ 2020, 13:34 IST
ಬಂಡೀಪುರ ಸಫಾರಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಪ್ರವಾಸಿಗರು
ಬಂಡೀಪುರ ಸಫಾರಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಪ್ರವಾಸಿಗರು   

ಚಾಮರಾಜನಗರ/ಗುಂಡ್ಲುಪೇಟೆ: ಕ್ರಿಸ್‌ಮಸ್‌, ವಾರಾಂತ್ಯದ ರಜೆಯ ಕಾರಣದಿಂದ ಜಿಲ್ಲೆಯಲ್ಲಿ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಮೂರು ದಿನಗಳಿಂದ ಪ್ರವಾಸಿಗರ ದಂಡೇ ಹರಿದು ಬಂದಿದೆ.

ಬಂಡೀಪುರ, ಕೆ.ಗುಡಿ, ಮಹದೇಶ್ವರಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನಬೆಟ್ಟ ಸೇರಿದಂತೆ ಪ್ರಸಿದ್ಧ ತಾಣಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟಿದ್ದಾರೆ.

ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರದಿಂದೀಚೆಗೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಬಿಳಿಗಿರಿರಂಗನಬೆಟ್ಟದಲ್ಲಿ ಎರಡು ದಿನಗಳಿಂದ ಭಾರಿ ಪ್ರಮಾಣದಲ್ಲಿ ಜನರು ಬರುತ್ತಿದೆ.ಶನಿವಾರ 15 ಸಾವಿರದಷ್ಟು ಜನರು ಬಂದಿದ್ದರು ಎಂದು ದೇವಾಲಯದ ಅರ್ಚಕರು ಮಾಹಿತಿ ನೀಡಿದರು.

ADVERTISEMENT

ಗುಂಡ್ಲುಪೇಟೆ ವರದಿ: ಕ್ರಿಸ್‌ಮಸ್‌ ಹಬ್ಬದ ದಿನ, ಎರಡನೇ ಶನಿವಾರ ಹಾಗೂ ಭಾನುವಾರ ಸೇರಿ ಸತತವಾಗಿ ಮೂರು ದಿನಗಳ ರಜೆ ಇದ್ದುದರಿಂದ ಬಂಡೀಪುರಕ್ಕೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದು, ಸಫಾರಿ ಮತ್ತು ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಜನಜಂಗುಳಿ ಉಂಟಾಗಿತ್ತು.

ಹಲವರಿಗೆ ಸಫಾರಿಗೆ ಟಿಕೆಟ್ ಸಿಗದೆ ನಿರಾಸೆಯಿಂದ ವಾಪಸ್‌ ಆದರು. ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರಿಂದ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ಬೆಟ್ಟಕ್ಕೆ ಹಾಕಿದ್ದ ಬಸ್‌ಗಳು ಸಾಕಾಗಲಿಲ್ಲ.

ಕೋವಿಡ್‌ ಹಾವಳಿ ಆರಂಭವಾದ ನಂತರ ಬಂಡೀಪುರ ಹಾಗೂ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಇಷ್ಟು ಪ್ರವಾಸಿಗರು ಇದೇ ಮೊದಲು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಎರಡು ದಿನಗಳಲ್ಲಿ ಸಫಾರಿಗೆ ಎರಡು ಸಾವಿರಕ್ಕೂ ಹೆಚ್ಚಿನ ಜನರು ಬಂದಿದ್ದಾರೆ. ಶನಿವಾರ ಮತ್ತು ಭಾನುವಾರ ಅನೇಕರಿಗೆ ಸಫಾರಿಗೆ ಟಿಕೆಟ್ ದೊರಕಲಿಲ್ಲ. ಟಿಕೆಟ್‌ಗಾಗಿ ಬೆಳಿಗ್ಗೆ ಮತ್ತು ಸಂಜೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಸಫಾರಿ ಟಿಕೆಟ್‌ ಸಿಗದವರು ಬಂಡೀಪುರದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ರಾಜ್ಯದ ಗಡಿವರೆಗೂ ತಮ್ಮ ವಾಹನಗಳಲ್ಲಿ ಹೋಗಿ ಹಿಂದಿರುಗಿದರು’ಎಂದು ಅರಣ್ಯ ಇಲಾಖೆ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗೋಪಾಲಸ್ವಾಮಿ ಬೆಟ್ಟಕ್ಕೂ ಹೆಚ್ಚು ಜನ ಬಂದಿದ್ದಾರೆ. ಕೆಎಸ್‌ಆರ್‌ಟಿಸಿಯು 10 ಹೆಚ್ಚುವರಿ ಬಸ್‌ಗಳನ್ನು ಹಾಕಿತ್ತು. ಎರಡು ದಿನಗಳಿಂದ ನಾಲ್ಕು ಸಾವಿರಕ್ಕೂ ಹೆಚ್ಚಿನ ಜನರು ಗೋಪಾಲಸ್ವಾಮಿಯ ದರ್ಶನ ಪಡೆದಿದ್ದಾರೆ. ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಭಕ್ತರು ದೇವಸ್ಥಾನಕ್ಕೆ ಬಂದಿದ್ದಾರೆ ಎಂದು ಎಂದು ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್‌ ಅವರು ಮಾಹಿತಿ ನೀಡಿದರು.

ರೆಸಾರ್ಟ್‌, ಹೋಂ ಸ್ಟೇಗಳು ಭರ್ತಿ

ಈ ಮಧ್ಯೆ, ಹೊಸ ವರ್ಷಾಚರಣೆಯೂ ಸಮೀಪದಲ್ಲಿರುವುದರಿಂದ ಬಂಡೀಪುರ ಹಾಗೂ ಬಿಳಿಗಿರಿ ರಂಗನಬೆಟ್ಟದ ವ್ಯಾಪ್ತಿಯಲ್ಲಿರುವ ಬಹುತೇಕ ರೆಸಾರ್ಟ್‌ಗಳು ಹಾಗೂ ಹೋಂ ಸ್ಟೇಗಳು ವಾರದಿಂದೀಚೆಗೆ ಪ್ರತಿ ದಿನ ಭರ್ತಿಯಾಗುತ್ತಿವೆ.

ಬೆಂಗಳೂರು, ತಮಿಳುನಾಡು ಸೇರಿದಂತೆ ದೂರದ ಊರುಗಳಿಂದ ಕುಟುಂಬ ಸಮೇತರಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಜಿಲ್ಲೆಯಾದ್ಯಂತ ಶೀತ ವಾತಾವರಣವಿದ್ದು, ಬೆಳಿಗ್ಗೆ ಮಂಜು ಮುಸುಕಿರುತ್ತದೆ. ಪ್ರವಾಸಿಗರು ಇದನ್ನು ಇಷ್ಟಪಡುತ್ತಿದ್ದು, ಭಾರಿ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಕೆ.ಗುಡಿಯಲ್ಲಿರುವ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ನ (ಜೆಎಲ್‌ಆರ್‌) ಕಾಟೇಜ್‌ಗಳು ಜನವರಿ 7ರವರೆಗೂ ಬುಕ್‌ ಆಗಿವೆ ಎಂದು ಹೇಳುತ್ತಾರೆ ಅಲ್ಲಿನ ಸಿಬ್ಬಂದಿ.

ಕೋವಿಡ್‌ ಆರಂಭಗೊಂಡ ನಂತರ ವಹಿವಾಟು ಸಂಪೂರ್ಣವಾಗಿ ಕುಸಿದಿತ್ತು, ಎರಡು ತಿಂಗಳುಗಳಿಂದ ಚೇತರಿಕೆ ಕಂಡಿದೆ. ಡಿಸೆಂಬರ್‌ನಲ್ಲಿ ಉತ್ತಮ ವಹಿವಾಟು ನಡೆದಿದೆ ಎಂದು ಜೆಎಲ್‌ಆರ್‌ನ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.