ADVERTISEMENT

ಚಾಮರಾಜನಗರ|ಕರ್ತವ್ಯ ನಿರ್ಲಕ್ಷ್ಯ ಆರೋಪ:ನಗರಸಭೆ ಪೌರಾಯುಕ್ತ ಕರ್ತವ್ಯದಿಂದ ಬಿಡುಗಡೆ

ಮಾತೃ ಇಲಾಖೆಗೆ ತೆರಳಲು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಆದೇಶ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:12 IST
Last Updated 2 ಸೆಪ್ಟೆಂಬರ್ 2025, 2:12 IST
ಎನ್‌.ಎ.ರಾಮದಾಸ್
ಎನ್‌.ಎ.ರಾಮದಾಸ್   

ಚಾಮರಾಜನಗರ: ಕರ್ತವ್ಯ ನಿರ್ಲಕ್ಷ್ಯ, ಅಭಿವೃದ್ಧಿ ಕಾರ್ಯಗಳ ನಿರ್ವಹಣೆಯಲ್ಲಿ ವಿಫಲರಾದ ಆರೋಪದ ಮೇಲೆ ಎಸ್‌.ವಿ.ರಾಮದಾಸ್ ಅವರನ್ನು ನಗರಸಭೆ ಪೌರಾಯುಕ್ತ ಹುದ್ದೆಯಿಂದ ಬಿಡುಗೊಡಿಸಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಆದೇಶ ನೀಡಿದ್ದಾರೆ.

ಪೌರಾಯುಕ್ತರ ಜವಾಬ್ದಾರಿಯುತ ಹುದ್ದೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಪೌರಾಯುಕ್ತರ ಹುದ್ದೆಯಿಂದ ಬಿಡುಗಡೆಗೊಳಿಸಿ ಸ್ಥಳ ನಿಯುಕ್ತಿಗಾಗಿ ಮಾತೃ ಇಲಾಖೆಯಾದ ತೋಟಗಾರಿಕಾ ಇಲಾಖೆಯ ಸಕ್ಷಮ ಪ್ರಾಧಿಕಾರದಲ್ಲಿ ವರದಿ ಕೊಳ್ಳುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ.

ಏನೆಲ್ಲ ಆರೋಪಗಳಿವೆ:

ADVERTISEMENT

ವಾರ್ಡ್‌ಗಳಲ್ಲಿ ಜನರ ಸಮಸ್ಯೆ ಪರಿಹರಿಸುವಲ್ಲಿ ವಿಫಲ, ನ್ಯಾಯಾಲಯದಲ್ಲಿರುವ ಜನನ ಮಂಟಪ ಸ್ಥಳದ ಪ್ರಕರಣದಲ್ಲಿ ನಿಯಮಾನುಸಾರ ಕ್ರಮ ವಹಿಸದಿರುವುದು, 68 ಸಫಾರಿ ಕರ್ಮಚಾರಿಗಳಿಗೆ ಮನೆ ನಿರ್ಮಾಣ ಮಾಡಲು ಸೂಕ್ತ ಜಾಗ ಗುರುತಿಸದಿರುವುದು, 36 ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಜಾಗ ಗುರುತಿಸಿ ಪ್ರಸ್ತಾವ ಸಲ್ಲಿಸದಿರುವುದು.

ಪೌರಕಾರ್ಮಿಕರಿಗೆ ಗುರುತಿನ ಚೀಟಿ, ವೇತನ ಪ್ರಮಾಣಪತ್ರ, ಇಎಸ್‌ಐ ಕಾರ್ಡ್ ವಿತರಿಸದಿರುವುದು, ನಿಯಮಿತವಗಿ ವೈದ್ಯಕೀಯ ತಪಾಸಣೆ ಮಾಡಿಸದಿರುವುದು, ನ್ಯಾಯಾಲಯ ರಸ್ತೆಗೆ ಸಮರ್ಪಕ ಭೂಪರಿಹಾರ ನೀಡದಿರುವುದು, ಕಾಮಗಾರಿ ಪೂರ್ಣಗೊಳಿಸದಿರುವುದು, ಸ್ವಚ್ಛ ಗೃಹ ಕಲಿಕಾ ಕೇಂದ್ರ ಸ್ಥಾಪನೆ, ಎಸ್‌ಟಿಪಿ ಘಟಕದಲ್ಲಿ ಮೋಟಾರ್ ದುರಸ್ತಿ ಮಾಡಿಸದಿರುವುದು, ಆಶ್ರಯ ಮನೆ ಯೋಜನೆಯಡಿ ಬಾಕಿ ಇರುವ 363 ನಿವೇಶನಗಳ ಹಂಚಿಕೆಗೆ ಫಲಾನುಭವಿಗಳ ಆಯ್ಕೆ, ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆಗೆ ಕ್ರಮ ವಹಿಸದಿರುವುದು.

ರಥದ ಬೀದಿ ಕಾಂಪ್ಲೆಕ್ಸ್‌, ಸಂತೇಮರಹಳ್ಳಿ ವೃತ್ತದಲ್ಲಿರುವ ಕಾಂಪ್ಲೆಕ್ಸ್ ಹಸ್ತಾಂತರ ಪ್ರಕ್ರಿಯೆ ಹಾಗೂ ಬಾಡಿಗೆ ನೀಡಿ ಸಂಪನ್ಮೂಲ ಕ್ರೋಡಿಕರಣಕ್ಕೆ ಕ್ರಮ ವಹಿಸದಿರುವುದು, 15ನೇ ಹಣಕಾಸು ಆಯೋಗದಿಂದ ಕಾಮಗಾರಿ ಪೂರ್ಣಗೊಳಿಸದಿರುವುದು, ಎಸ್‌ಸಿಎಸ್‌ಪಿ, ಟಿಎಸ್‌‍ಪಿ ಕಾಮಗಾರಿ ಪೂರ್ಣಗೊಳಿಸದಿರುವುದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಖಾಸಗಿ ಬೋರ್‌ವೆಲ್ ಮಾಲೀಕರ ಜೊತೆ ಒಪ್ಪಂದ ಮಾಡಿಕೊಳ್ಳದಿರುವುದು, ಜಿಲ್ಲಾ ಕೇಂದ್ರಕ್ಕೆ ಹೆಚ್ಚುವರಿ ಇಂದಿರಾ ಕ್ಯಾಂಟೀನ್ ತೆರೆಯಲು ಜಾಗ ಗುರುತಿಸಿ ಪ್ರಸ್ತಾವ ಸಲ್ಲಿಸದಿರುವ ಆರೋಪ ಇದೆ. 

ಬಿ ಖಾತೆ ಕಳಪೆ ಸಾಧನೆ:

ಸಮುದಾಯದ ಶೌಚಾಲಯಗಳ ದುರಸ್ತಿ ಮಾಡಿಸಿ ನಿರ್ವಹಣೆ ಮಾಡದಿರುವುದು ಮಲಿನ ನೀರು ಸಂಸ್ಕರಣಾ ಘಟಕದಿಂದ ಕೊಳಚೆ ನೀರು ಜಲಮೂಲಗಳಿಗೆ ಹರಿಯದಂಥೆ ತಡೆಯುವಲ್ಲಿ ವಿಫಲ ತೆರಿಗೆ ವಸೂಲಾತಿಗೆ ಆಸಕ್ತಿ ತೋರದಿರುವುದು ಈ ಸ್ವತ್ತು ಹಾಗೂ ಸಕಾಲ ತಂತ್ರಾಂಶದಲ್ಲಿ ಖಾತೆ ಹಕ್ಕು ಬದಲಾವಣೆಗೆ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇ ಮಾಡದಿರುವುದು. ನಗರಸಭೆ ವ್ಯಾಪ್ತಿಯಲ್ಲಿ ಒಳಪಡುವ 4787 ಅನಧಿಕೃತ ಆಸ್ತಿಗಳ ಪೈಕಿ 860 ಆಸ್ತಿಗಳಿಗೆ ಮಾತ್ರ ‘ಬಿ’ ಖಾತೆ ನೀಡಿ ಶೇ 17.97ರಷ್ಟು ಗುರಿ ಸಾಧನೆ ಮಾಡಿ ಸಾರ್ವಜನಿಕರಿಗೆ ಅನಾನುಕೂಲ ಮಾಡಿರುವುದು ಲ್ಯಾಪ್‌ಟಾಪ್ ಹೊಲಿಗೆ ಯಂತ್ರಗಳ ವಿತರಣೆಯಲ್ಲಿ ನಿರ್ಲಕ್ಷ್ಯ ಸೇರಿದಂತೆ ಹಲವು ಆರೋಪಗಳು ಎಸ್‌.ಎ.ರಾಮದಾಸ್ ಅವರ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.