ADVERTISEMENT

ಚಾಮರಾಜನಗರ | ಲೋಕ್ ಅದಾಲತ್‍: ಲಕ್ಷ ಪ್ರಕರಣ ಇತ್ಯರ್ಥ-ನ್ಯಾ.ಜಿ. ಪ್ರಭಾವತಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 2:40 IST
Last Updated 19 ಸೆಪ್ಟೆಂಬರ್ 2025, 2:40 IST
ಜಿ.ಪ್ರಭಾವತಿ
ಜಿ.ಪ್ರಭಾವತಿ   

ಚಾಮರಾಜನಗರ: ಸೆ.13ರಂದು ಜಿಲ್ಲೆಯಾದ್ಯಂತ ನಡೆದ ಲೋಕ್ ಅದಾಲತ್‍ನಲ್ಲಿ 1,04,649 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶೆ ಜಿ.ಪ್ರಭಾವತಿ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ವಾಜ್ಯಪೂರ್ವ ಪರಿಹಾರ ಕೇಂದ್ರದಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಲೋಕ್ ಅದಾಲತ್‍ನಲ್ಲಿ 1,01,431 ಪ್ರಕರಣಗಳು ಇತ್ಯರ್ಥಗೊಂಡಿದ್ದವು. ಈ ಬಾರಿಯ ಅದಾಲತ್‍ನಲ್ಲಿ 2,672 ನ್ಯಾಯಾಲಯದಲ್ಲಿದ್ದ ಪ್ರಕರಣಗಳು, 1,01,977 ವ್ಯಾಜ್ಯಪೂರ್ವ ಸೇರಿ 1,04,649 ಪ್ರಕರಣಗಳು ಇತ್ಯರ್ಥವಾಗಿವೆ. ಕಳೆದ ಬಾರಿಗೆ ಹೋಲಿಸಿದರೆ ಹೆಚ್ಚುವರಿ 3,218 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದರು.

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ‘ಸರ್ವರಿಗೂ ನ್ಯಾಯ’ ಪರಿಕಲ್ಪನೆಯಡಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುತ್ತಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಸಿವಿಲ್, ರಾಜಿಯೋಗ್ಯ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಇತರೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಲು ಮೆಗಾ ಲೋಕ್ ಅದಾಲತ್ ಮಾಡಲಾಗುತ್ತಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ADVERTISEMENT

ಈ ಬಾರಿಯ ಅದಾಲತ್‍ನಲ್ಲಿ ಚಾಮರಾಜನಗರ ತಾಲ್ಲೂಕಿನ 440, ಯಳಂದೂರು 308, ಕೊಳ್ಳೇಗಾಲ 1,405 ಹಾಗೂ ಗುಂಡ್ಲುಪೇಟೆಯ 519 ಸೇರಿದಂತೆ 2,672 ನ್ಯಾಯಾಲಯದ ಪ್ರಕರಣಗಳು ವಿಲೇವಾರಿಯಾಗಿವೆ.

ಚಾಮರಾಜನಗರದ 56,268, ಯಳಂದೂರಿನ 2,849, ಕೊಳ್ಳೆಗಾಲ 17,931 ಹಾಗೂ ಗುಂಡ್ಲುಪೇಟೆಯ 24,929 ಸೇರಿದಂತೆ 1,01,977 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಚೆಕ್‌ ಅಮಾನ್ಯ, ಎಂ.ಇ.ಸಿ ಹಾಗೂ ವಿಮಾ ಪರಿಹಾರವಾಗಿ ₹ 12,72,69,860 ನೀಡಲಾಗಿದೆ.

ವಿವಾಹ ವಿಚ್ಛೇದನ, ಪತಿ ಅಥವಾ ಪತ್ನಿಯಿಂದ ಜೀವನಾಂಶ ಕೋರಿಕೆ ಹಾಗೂ ವಿಚ್ಛೇದನಾ ಪ್ರಕರಣ ದಾಖಲಾಗುವ ಮುನ್ನ ದೂರುಗಳು ಸೇರಿದಂತೆ 8 ಪ್ರಕರಣಗಳನ್ನು ಇತ್ಯರ್ಥಪಡಿಸಿ ಪತಿ-ಪತ್ನಿಯರನ್ನು ಒಂದುಗೂಡಿಸಿರುವುದು ಅದಾಲತ್‌ನ ವಿಶೇಷ ಎಂದು ಹೇಳಿದರು.

ಕಕ್ಷಿದಾರರು ನ್ಯಾಯಾಧೀಶರು, ವಕೀಲರು, ಸಂಧಾನಕಾರರ ಸಹಕಾರದಿಂದ 10ರಿಂದ 15 ವರ್ಷಗಳಿಂದ ಬಾಕಿ ಇದ್ದ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ. ಪ್ರಕರಣ ದಾಖಲಾಗುವ ಮುನ್ನವೇ ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥವಾಗಿರುವುದು ಉತ್ತಮ ಬೆಳವಣಿಗೆಯಾಗಿದ್ದು ಸಾರ್ವಜನಿಕರ ಸಮಯ, ಹಣ, ಉಳಿತಾಯವಾಗಿದೆ. ನ್ಯಾಯಾಲಯದ ಮೇಲಿನ ಪ್ರಕರಣಗಳ ಹೊರೆಯೂ ತಗ್ಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್, ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಿ.ಡಿ.ಪ್ರಕಾಶ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ರಂಗಸ್ವಾಮಿ ಹಾಜರಿದ್ದರು.

ಮಧ್ಯಸ್ಥಿಕೆ ಶಿಬಿರ
ರಾಜಿ ಯೋಗ್ಯ ಪ್ರಕರಣಗಳ ಇತ್ಯರ್ಥಕ್ಕಾಗಿ ಜನಸಾಮಾನ್ಯರು ಲೋಕ್ ಅದಾಲತ್‍ ಆಯೋಜಿಸುವವರೆಗೂ ಕಾಯುವ ಅವಶ್ಯವಿಲ್ಲ. ನ್ಯಾಯಾಲಯದಲ್ಲಿ ‘ಮಧ್ಯಸ್ಥಿಕೆ ಶಿಬಿರ’ ನಿರಂತರವಾಗಿ ಕಾರ್ಯ ನಿರ್ವಹಿಸಲಿದ್ದು ಸದುಪಯೋಗಪಡಿಸಿಕೊಳ್ಳಬಹುದು ಎಂದು ನ್ಯಾಯಾಧೀಶೆ ಪ್ರಭಾವತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.