ಕೊಳ್ಳೇಗಾಲ: ತಾಲ್ಲೂಕಿನ ಕುಂತೂರು ಗ್ರಾಮದ ಜಮೀನೊಂದರಲ್ಲಿ ಗದ್ದೆಗೆ ಇಳಿದು ತಮ್ಮ ಇಬ್ಬರು ಮಕ್ಕಳ ಜೊತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕವಿತಾ ಅವರು ಭತ್ತದ ಸಸಿ ನಾಟಿ ಮಾಡಿದರು.
ಇಬ್ಬರು ಮಕ್ಕಳ ಜೊತೆ ಕೊಳ್ಳೇಗಾಲಕ್ಕೆ ಬಂದಿದ್ದ ಸಂದರ್ಭ ಭತ್ತ ನಾಟಿ ಮಾಡುವ ಮೂಲಕ ರೈತರ ಮನ ಗೆದ್ದಿದ್ದಾರೆ. ಕೃಷಿಯತ್ತ ವಿಮುಖರಾಗುತ್ತಿರುವ ಹೊತ್ತಲ್ಲಿ ಕವಿತಾ ಅವರು ಕೃಷಿ ಪ್ರೇಮ ತೋರಿದ್ದು ತಮ್ಮ ಮಕ್ಕಳಿಗೂ ಭತ್ತದ ನಾಟಿ ಮಾಡುವುದನ್ನು ಹೇಳಿಕೊಟ್ಟು ಗಮನ ಸೆಳೆದರು.
‘ನಾವು ರೈತರ ಮಕ್ಕಳು. ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದೆವು. ಬಾಲ್ಯ ಜೀವನದಲ್ಲಿ ವ್ಯವಸಾಯವನ್ನೇ ಮಾಡುತ್ತಿದ್ದೆವು. ನಮ್ಮ ಭಾಗದಲ್ಲಿ ಹೆಚ್ಚಾಗಿ ಅಡಿಕೆ ಹಾಗೂ ತೆಂಗನ್ನು ಬೆಳೆಯುತ್ತೇವೆ. ಆದರೆ, ಭತ್ತದ ನಾಟಿ ಮಾಡಿದ್ದ ಅನುಭವವಿಲ್ಲ. ಮಕ್ಕಳ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಕೃಷಿ ಚಟುವಟಿಕೆಯಲ್ಲಿ ತೊಡಗಿದೆ’ ಎಂದು ಕವಿತಾ ಅವರು ‘ಪ್ರಜಾವಾಣಿ’ ಜತೆಗೆ ಅನಿಸಿಕೆ ಹಂಚಿಕೊಂಡರು.
ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರೂ ಕವಿತಾ ಅವರು ಚುರುಕಿನಿಂದ ಭತ್ ನಾಟಿ ಮಾಡಿದ ಬಗೆಯನ್ನು ಕಂಡು ಮಹಿಳಾ ಕಾರ್ಮಿಕರು ಅಚ್ಚರಿಪಟ್ಟರು. ಖಾಕಿ ಧರಿಸುವ ಅಧಿಕಾರಿ, ಗದ್ದೆಯಲ್ಲಿ ಸಾಮಾನ್ಯ ರೈತ ಮಹಿಳೆಯಂತೆ ಕಾಣಿಸಿಕೊಂಡಿದ್ದನ್ನು ನೋಡಿ ಗ್ರಾಮಸ್ಥರು ಸಂತಸ ಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.