ADVERTISEMENT

ಕೊತ್ತಲವಾಡಿ: ಬಾಲಕಿ ದತ್ತು ಪಡೆದ ಚಿಕ್ಕಮ್ಮ

ಕೋವಿಡ್‌ನಿಂದ ತಂದೆ– ತಾಯಿ ಕಳೆದುಕೊಂಡ ಐದು ವರ್ಷದ ಬಾಲಕಿ

​ಪ್ರಜಾವಾಣಿ ವಾರ್ತೆ
Published 16 ಮೇ 2021, 3:00 IST
Last Updated 16 ಮೇ 2021, 3:00 IST

ಚಾಮರಾಜನಗರ: ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಕೋವಿಡ್‌ನಿಂದ ಮೃತಪಟ್ಟ ಗುರುಪ್ರಸಾದ್ ಹಾಗೂ ರಶ್ಮಿ ದಂಪತಿಯ 5 ವರ್ಷದ ಪುತ್ರಿಯನ್ನು, ರಶ್ಮಿ ಅವರ ತಂಗಿ ರಮ್ಯಾ ದತ್ತು ತೆಗೆದುಕೊಂಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಮ್ಯಾ ಅವರ ಪತಿ ಮಹದೇವಸ್ವಾಮಿ (ಗುರು), ‘ಸರಕು ಸಾಗಣೆ ಆಟೊ ಚಾಲಕನಾಗಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ಮೃತಪಡುವುದಕ್ಕೆ ಕೆಲವು ನಿಮಿಷಗಳ ಮುಂಚೆ, ರಶ್ಮಿ ಅವರು ನನ್ನ ಪತ್ನಿ ಬಳಿ ತನ್ನ ಮಗುವನ್ನು ನೋಡಿಕೊಳ್ಳುವಂತೆ ಹೇಳಿದ್ದರು. ನನ್ನ ಪತ್ನಿ ಸದ್ಯ ಗರ್ಭಿಣಿಯಾಗಿದ್ದಾರೆ. ಈಗ ನಾವು ಮಗುವನ್ನು ನೋಡಿಕೊಳ್ಳಲು ನಿರ್ಧರಿಸಿದೆವು’ ಎಂದು ಹೇಳಿದರು.

‘ಗುರುಪ್ರಸಾದ್ ಅವರೂ ಸರಕು ಸಾಗಣೆ ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರೂ ನಮ್ಮ ಹಾಗೇ ಬಡವರೇ. ಬಡತನ ಇದ್ದರೂ ಮಗು ಸಾಕುವುದು ಕಷ್ಟವಾಗುವುದಿಲ್ಲ ಎಂದು ತಿಳಿದು ದತ್ತು ತೆಗೆದುಕೊಂಡೆವು’ ಎಂದು ಅವರು
ತಿಳಿಸಿದರು.

ADVERTISEMENT

ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗೋವಿಂದರಾಜು ಪ್ರತಿಕ್ರಿಯಿಸಿ, ‘ಮಗು ಅನಾಥ ಎಂದು ಮಕ್ಕಳ ಕಲ್ಯಾಣ ಸಮಿತಿಯು ತನ್ನ ವಶಕ್ಕೆ ಪಡೆಯಲು ಗ್ರಾಮಕ್ಕೆ ಧಾವಿಸಿತು. ಈ ವೇಳೆ ಮಗುವಿನ ಚಿಕ್ಕಮ್ಮ ರಮ್ಯಾ, ಮಗುವನ್ನು ತಮಗೆ ನೀಡಲು ನಿರಾಕರಿಸಿ, ತಾವೇ ಸಾಕುವುದಾಗಿ ಹೇಳಿದರು. ಬಾಲ ನ್ಯಾಯ ಕಾಯಿದೆ 2015ರ ಪ್ರಕಾರ ರಕ್ತಸಂಬಂಧಿಗಳು ಮಗುವನ್ನು ದತ್ತು ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ, ಅಧಿಕೃತವಾಗಿ ಅವರಿಗೆ ಮಗುವನ್ನು ದತ್ತು ನೀಡಲಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.