
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತಪೌಲರ ಚರ್ಚ್ ಕ್ರಿಸ್‌ಮಸ್ ಅಂಗವಾಗಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದು
ಚಾಮರಾಜನಗರ: ಜಿಲ್ಲೆಯಾದ್ಯಂತ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಕಳೆಗಟ್ಟಿದ್ದು ಚರ್ಚ್‌ಗಳು ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡು ಕಣ್ಮನ ಸೆಳೆಯುತ್ತಿವೆ. ಚರ್ಚ್ ಮೇಲೆ ತೂಗು ಹಾಕಲಾಗಿದ್ದ ನಕ್ಷತ್ರಗಳು ಗಮನ ಸೆಳೆದವು.
ಗೋದಲಿ ನಿರ್ಮಾಣ: ಜಿಲ್ಲೆಯ ಡೀನರಿ ಚರ್ಚ್‌ಗಳಲ್ಲಿ ಒಂದಾಗಿರುವ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತಪೌಲರ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ ತುಂಬಿತ್ತು. ಚರ್ಚ್‌ನ ಅಂಗಳದಲ್ಲಿ ನಿರ್ಮಾಣ ಮಾಡಲಾಗಿರುವ ಗೋದಲಿ ಗಮನ ಸೆಳೆಯುತ್ತಿದೆ.
ಹಬ್ಬದ ಮುನ್ನ ದಿನವಾದ ಬುಧವಾರ ರಾತ್ರಿಯಿಂದಲೇ ಕುಟುಂಬ ಸಮೇತ ಚರ್ಚ್‌ಗಳಿಗೆ ತೆರಳಿದ ಕ್ರಿಶ್ಚಿಯನ್ನರು ಯೇಸು ಕ್ರಿಸ್ತನ ಸ್ಮರಣೆ ಮಾಡಿದರು. ಶ್ರೇಷ್ಠ ಧರ್ಮಗುರು ಸಿ.ಅಂತೋನಪ್ಪ ನೇತೃತ್ವದಲ್ಲಿ ಬಲಿಪೂಜೆ ಸಹಿತ ಧಾರ್ಮಿಕ ವಿಧಿ–ವಿಧಾನಗಳು ನಡೆದವು.
ಜಿಲ್ಲೆಯಾದ್ಯಂತ ಹಲವು ಚರ್ಚ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೇಕ್ ಹಾಗೂ ಸಿಹಿ ಹಂಚಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಕ್ರಿಶ್ಚಿಯನ್ನರ ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗಿತ್ತು. ಮನೆಗಳ ಮುಂದೆಯೂ ನಕ್ಷತ್ರ ದೀಪಗಳನ್ನು ನೇತು ಹಾಕಲಾಗಿತ್ತು.
ಹಬ್ಬಕ್ಕೆ ವಿಶೇಷವಾಗಿ ಒಣ ಹಣ್ಣುಗಳನ್ನು ಬಳಸಿ ಮನೆಗಳಲ್ಲಿ ವಿಶೇಷ ಕೇಕ್ ತಯಾರಿ ಮಾಡಲಾಗಿದೆ. ಮನೆಗಳ ಮುಂದೆ ಅಲಂಕಾರಿಕ ಕ್ರಿಸ್ಮಸ್ ಟ್ರೀಗಳನ್ನು ನಿಲ್ಲಿಸಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ನಕ್ಷತ್ರ ದೀಪಗಳು, ಶುಭ ಸಂಕೇತದ ಗಂಟೆಗಳು, ರಿಬ್ಬನ್, ಸಾಂತಾಕ್ಲಾಸನ ಮುಖವಾಡ, ಕ್ರಿಸ್ಮಸ್ ಟೋಪಿಗಳ ಮಾರಾಟ ಭರ್ಜರಿಯಾಗಿ ನಡೆದಿದೆ.
ಹಬ್ಬದ ಅಂಗವಾಗಿ ಬೇಕರಿಗಳಲ್ಲಿ ಕೇಕ್‌ಗಳ ತಯಾರಿ ಜೋರಾಗಿ ನಡೆದಿದೆ. ಬಂಧು ಬಾಂಧವರಿಗೆ, ನೆರೆಹೊರೆಯವರಿಗೆ ಹಾಗೂ ಸ್ನೇಹಿತರಿಗೆ ಹಂಚಲು ಕೇಕ್‌ಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದಾರೆ. ಹಬ್ಬದ ದಿನ ಮನೆಗಳಲ್ಲಿ ಸಸ್ಯಾಹಾರ ಹಾಗೂ ಮಾಂಸಹಾರ ಖಾದ್ಯಗಳನ್ನು ತಯಾರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.