ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ ಸದ್ಯಕ್ಕೆ ತೆರೆಯಲ್ಲ ಚಿತ್ರಮಂದಿರ

ದೊಡ್ಡ ಬಜೆಟ್‌ನ ಚಿತ್ರಗಳಿಲ್ಲ, ಮುನ್ನೆಚ್ಚರಿಕೆ ಪಾಲಿಸುವುದು ಸುಲಭವಲ್ಲ, ದುಬಾರಿಯಾಲಿದೆ ನಿರ್ವಹಣೆ

ಸೂರ್ಯನಾರಾಯಣ ವಿ
Published 14 ಅಕ್ಟೋಬರ್ 2020, 17:59 IST
Last Updated 14 ಅಕ್ಟೋಬರ್ 2020, 17:59 IST
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಬಸವೇಶ್ವರ ಚಿತ್ರಮಂದಿರ
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಬಸವೇಶ್ವರ ಚಿತ್ರಮಂದಿರ   

ಚಾಮರಾಜನಗರ: ಐದನೇ ಹಂತದ ಅನ್‌ಲಾಕ್‌ನ ನಿಯಮದಂತೆ ಗುರುವಾರದಿಂದ (ಅ.15) ಮಲ್ಪಿಪ್ಲೆಕ್ಟ್‌, ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಇದ್ದರೂ, ಜಿಲ್ಲೆಯಲ್ಲಿ ಚಿತ್ರಮಂದಿರಗಳ ಮಾಲೀಕರು ಚಿತ್ರ ಪ್ರದರ್ಶನ ಮಾಡದಿರಲು ನಿರ್ಧರಿಸಿದ್ದಾರೆ.

ಗಡಿ ಜಿಲ್ಲೆಯಲ್ಲಿ ಮಲ್ಟಿಪ್ಲೆಕ್ಸ್‌ಗಳು ಇಲ್ಲ. ಒಂದು ಪರದೆಯ 11 ಚಿತ್ರ ಮಂದಿರಗಳಿವೆ (ಚಾಮರಾಜನಗರದಲ್ಲಿ ಐದು, ಕೊಳ್ಳೇಗಾಲದಲ್ಲಿ 3, ಗುಂಡ್ಲುಪೇಟೆಯಲ್ಲಿ 2, ಯಳಂದೂರು–1). ಲಾಕ್‌ಡೌನ್‌ ಆರಂಭವಾಗುವುದಕ್ಕೂ 10 ದಿನಗಳ ಮೊದಲೇ ಅಂದರೆ ಮಾರ್ಚ್‌ 14ರಿಂದಲೇ ಚಿತ್ರಮಂದಿರಗಳು ರಾಜ್ಯದಾದ್ಯಂತ ಮುಚ್ಚಿದ್ದವು. ಜಿಲ್ಲೆಯಲ್ಲೂ ಅಂದಿನಿಂದಯಾವಚಿತ್ರಮಂದಿರಗಳೂ ತೆರೆದಿಲ್ಲ.

ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದರೂ, ಮಾಲೀಕರು ಚಿತ್ರ ಪ್ರದರ್ಶನಕ್ಕೆ ಮುಂದಾಗಿಲ್ಲ. ಇನ್ನೂ ಕೆಲವು ವಾರಗಳ ಕಾಲ ತೆರೆಯುವುದು ಅನುಮಾನ.

ADVERTISEMENT

ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾ ಮಂಡಳವು ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದು, ಅವು ಈಡೇರುವವರೆಗೂ ಚಿತ್ರಮಂದಿರ ಪ್ರದರ್ಶನ ಆರಂಭಿಸದೇ ಇರಲು ಮಾಲೀಕರು ನಿರ್ಧರಿಸಿದ್ದಾರೆ.

‘ಬೇಡಿಕೆಗಳನ್ನು ಈಡೇರಿಸುವವರಗೆ ಚಿತ್ರ ಪ್ರದರ್ಶನ ಮಾಡುವುದಿಲ್ಲ ಎಂದು ಮಹಾ ಮಂಡಳ ಈಗಾಗಲೇ ರಾಜ್ಯಮಟ್ಟದಲ್ಲಿ ನಿರ್ಧಾರ ಕೈಗೊಂಡಿದೆ. ಹಾಗಾಗಿ, 15ರಿಂದ ಜಿಲ್ಲೆಯಲ್ಲಿ ಚಿತ್ರ ಪ್ರದರ್ಶನ ನಡೆಯುವುದಿಲ್ಲ’ ಎಂದು ಚಲನಚಿತ್ರ ಪ್ರದರ್ಶಕರ ಮಹಾ ಮಂಡಳದ ಜಿಲ್ಲಾ ಪ್ರತಿನಿಧಿ ಹಾಗೂ ಸಿಂಹ ಮೂವಿ ಪ್ಯಾರಡೈಸ್‌ನ ಮಾಲೀಕ ಜಯಸಿಂಹ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇತರ ಕಾರಣಗಳು: ಇದು ಮಾತ್ರವಲ್ಲದೇ ಚಿತ್ರ ಮಂದಿರಗಳನ್ನು ತೆರೆಯಲು ಮಾಲೀಕರು ಹಿಂದೇಟು ಹಾಕಲು ಇನ್ನೂ ಹಲವು ಕಾರಣಗಳಿವೆ.

ಸದ್ಯ, ಪ್ರಸಿದ್ಧ ನಟರು ನಟಿಸಿರುವ ದೊಡ್ಡ ಬಜೆಟ್‌ನ ಚಿತ್ರಗಳು ಬಿಡುಗಡೆಯಾಗಿಲ್ಲ. ಸಣ್ಣ ಬಜೆಟ್‌ ಚಿತ್ರಗಳಿಗೆ ಪ್ರೇಕ್ಷಕರು ಬರುವುದಿಲ್ಲ. ಇದರ ಜೊತೆಗೆ ಕೋವಿಡ್‌ ತಡೆಗೆ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟ ಎಂಬುದು ಚಿತ್ರ ಮಾಲೀಕರ ಅಭಿಪ್ರಾಯ.

‘ದೊಡ್ಡ ಬಜೆಟ್‌ ಚಿತ್ರಗಳಿಗೆ ಹೆಚ್ಚು ಪ್ರೇಕ್ಷಕರು ಬರುತ್ತಾರೆ. ಕೋವಿಡ್‌ ಕಾರಣದಿಂದ ಅಂತಹ ಚಿತ್ರಗಳು ಬಿಡುಗಡೆಯಾಗಿಲ್ಲ. ಸಣ್ಣ ಬಜೆಟ್‌ ಚಿತ್ರಗಳಿಗೆ ವೀಕ್ಷಕರ ಕೊರತೆ ಕಾಡುತ್ತದೆ. ಕೋವಿಡ್‌ ಭಯದಿಂದಾಗಿ ಪ್ರೇಕ್ಷಕರು ಕುಟುಂಬ ಸಮೇತರಾಗಿ ಬರುವುದಿಲ್ಲ. ಸರ್ಕಾರ ರೂಪಿಸುವ ಮಾರ್ಗಸೂಚಿಗಳನ್ನು ಚಿತ್ರ ಮಂದಿರಗಳಲ್ಲಿ ಪಾಲಿಸುವುದು ಬಹಳ ಕಷ್ಟ. ಟಿಕೆಟ್‌ ಮಾರಾಟವಾಗದಿದ್ದರೆ, ನಮ್ಮ ನಿರ್ವಹಣೆ ವೆಚ್ಚ ಹೆಚ್ಚಾಗುತ್ತದೆ’ ಎಂದು ಜಯಸಿಂಹ ಅವರು ಹೇಳಿದರು.

‘ಬೆಂಗಳೂರು, ಮೈಸೂರಿನಂತರ ‘ಎ’ ಸೆಂಟರ್‌ಗಳಲ್ಲಿ ಹೇಗಾದರೂ ನಿರ್ವಹಣೆ ಮಾಡಬಹುದು. ಉಳಿದ ಕಡೆ ಸಾಧ್ಯವೇ ಇಲ್ಲ. ಖರ್ಚು ಮಾಡಿಕೊಂಡು ಒಂದು ವಾರ ಚಿತ್ರ ಪ್ರದರ್ಶಿಸಿ, ಮತ್ತೆ ಸ್ಥಗಿತಗೊಳಿಸುವುದು ಸರಿಯಾಗುವುದಿಲ್ಲ. ಹಾಗಾಗಿ, ಮಾಲೀಕರೆಲ್ಲ, ಪ್ರದರ್ಶನ ನಡೆಸುವುದು ಬೇಡ ಎಂಬ ಒಮ್ಮತದಿಂದ ತೀರ್ಮಾನಕ್ಕೆ ಬಂದಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ತಿಂಗಳಿಗೆ ಕನಿಷ್ಠ ₹1 ಲಕ್ಷ ನಷ್ಟ

ಜಿಲ್ಲೆಯಲ್ಲಿ ಮಾರ್ಚ್‌ 14ರಿಂದ ಇಲ್ಲಿಯವರೆಗೆ ಏಳು ತಿಂಗಳುಗಳ ಕಾಲ ಚಿತ್ರಮಂದಿರಗಳು ತೆರೆದಿಲ್ಲ. ಮಾಲೀಕರು ಪ್ರತಿ ತಿಂಗಳು ನಷ್ಟ ಅನುಭವಿಸುತ್ತಿದ್ದಾರೆ.

‘ಪ್ರತಿ ತಿಂಗಳು ಮಾಲೀಕರಿಗೆ ಕನಿಷ್ಠ ₹1 ಲಕ್ಷ ನಷ್ಟವಾಗುತ್ತಿದೆ’ ಎಂದು ಜಯಸಿಂಹ ಅವರು ತಿಳಿಸಿದರು.

‘ದೊಡ್ಡ ಚಿತ್ರಮಂದಿರಗಳ ಮಾಲೀಕರಿಗೆ ಹೆಚ್ಚು, ಸಣ್ಣ ಮಂದಿರಗಳ ಮಾಲೀಕರಿಗೆ ಸ್ವಲ್ಪ ಕಡಿಮೆ ನಷ್ಟವಾಗಬಹುದು. ಕನಿಷ್ಠ ₹90 ಸಾವಿರದಿಂದ ₹1.5 ಲಕ್ಷದವರೆಗೆ ನಷ್ಟ ಅನುಭವಿಸುತ್ತಿದ್ದೇವೆ. ಸರ್ಕಾರ ನಮಗೆ ಇದುವರೆಗೆ ಯಾವುದೇ ರಿಯಾಯಿತಿ ನೀಡಿಲ್ಲ. ವಿನಾಯಿತಿ ಕೊಡುವಂತೆ ಬೇಡಿಕೆಗಳನ್ನು ಇಟ್ಟಿದ್ದೇವೆ. ಇದುವರೆಗೆ ನಿರ್ಧಾರ ಕೈಗೊಂಡಿಲ್ಲ’ ಎಂದು ಮಹದೇಶ್ವರ ಚಿತ್ರಮಂದಿರದ ಮಾಲೀಕ ಮಾದೇಶ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಬ್ಬಂದಿಗೆ ನಾವು ವೇತನವನ್ನು ನೀಡುತ್ತಿದ್ದೇವೆ. ಏಳು ತಿಂಗಳುಗಳಿಂದ ಚಿತ್ರ ಪ್ರದರ್ಶನವೇ ಮಾಡಿಲ್ಲ. ಹಾಗಿದ್ದರೂ ವಿದ್ಯುತ್‌ ಬಿಲ್‌ ₹7,000–₹8,000 ಬರುತ್ತಿದೆ. ಎಲ್ಲವನ್ನೂ ಕೈಯಿಂದಲೇ ಹಾಕಬೇಕಾಗಿದೆ. ಸದ್ಯದ ಸ್ಥಿತಿಯಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಸಾಧ್ಯವಿಲ್ಲ. ಎಲ್ಲ ಮಾಲೀಕರು ಈ ಸಂಬಂಧ ಚರ್ಚಿಸಿದ್ದೇವೆ. ಇನ್ನೂ ಕೆಲವು ತಿಂಗಳು ಚಿತ್ರಮಂದಿರಗಳು ಮುಚ್ಚಿರಲಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.