ADVERTISEMENT

ಸಂವಿಧಾನ ಬದಲಾವಣೆ ಬಿಜೆಪಿ ರಹಸ್ಯ ಕಾರ್ಯಸೂಚಿ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಸಿ.ಎಂ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 23:43 IST
Last Updated 12 ಮಾರ್ಚ್ 2024, 23:43 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಚಾಮರಾಜನಗರ: ‘ಮನುವಾದ, ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವ ಬಿಜೆಪಿಯವರು ಸಂವಿಧಾನ ಬದಲಿಸುವ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಸಂಸದ ಅನಂತಕುಮಾರ್ ಹೆಗಡೆಯವರ ಬಾಯಿಂದ ಹೇಳಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ವಾಗ್ದಾಳಿ ನಡೆಸಿದರು. 

ತಾಲ್ಲೂಕಿನ ಹೆಗ್ಗವಾಡಿಯಲ್ಲಿ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಅನಂತ ಕುಮಾರ್ ಹೆಗಡೆ ಸಾಮಾನ್ಯ ವ್ಯಕ್ತಿಯಲ್ಲ. ಐದು ಬಾರಿ ಸಂಸದರಾದವರು. ಕೇಂದ್ರ ಸಚಿವರಾಗಿದ್ದವರು. ಅವರು ಇಂತಹ ಹೇಳಿಕೆ ನೀಡುತ್ತಾರೆ ಎಂದರೆ, ಪಕ್ಷದ ತೀರ್ಮಾನ ಇಲ್ಲದೆಯೇ ಹೇಳುವುದಕ್ಕಾಗುತ್ತದೆಯಾ?  ಈ ಹಿಂದೆಯೂ, ತಾ‌ವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಹೇಳಿಕೆ ನೀಡಿದ್ದರು. ಈಗ ಮೂರನೇ ಎರಡರಷ್ಟು ಬಹುಮತ ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದಿದ್ದಾರೆ’ ಎಂದು ಟೀಕಿಸಿದರು.

‘ಸಂವಿಧಾನ ಬದಲಾವಣೆ ಬಿಜೆಪಿಯ ರಹಸ್ಯ ಕಾರ್ಯಸೂಚಿ. ಈಗಲ್ಲ, ಸಂವಿಧಾನ ಜಾರಿಯಾದಾಗಿನಿಂದಲೂ ಅವರು ಇದೇ ರೀತಿ ಹೇಳುತ್ತಲೇ ಬಂದಿದ್ದಾರೆ’ ಎಂದು ಹರಿಹಾಯ್ದರು.

ADVERTISEMENT

ಸಿಎಎಗೆ ವಿರೋಧ: ಸಿಎಎ ಜಾರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಎಂ, ‘ಚುನಾವಣೆಗಾಗಿ ಜಾರಿಗೆ ತಂದಿದ್ದಾರೆ. ಇಲ್ಲದಿದ್ದರೆ ಇಷ್ಟು ದಿನ ಯಾಕೆ ಸುಮ್ಮನಿದ್ದರು? ಧರ್ಮಾಧಾರಿತ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧವಿದೆ’ ಎಂದರು.

ಬಿಜೆಪಿ ಸೋಲಿಸುವುದೇ ಗುರಿ: ಮೈಸೂರು–ಕೊಡಗು ಕ್ಷೇತ್ರಕ್ಕೆ ಬಿಜೆಪಿ‌ಯಿಂದ ರಾಜವಂಶಸ್ಥ ಯದುವೀರ್‌ ಅವರ ಹೆಸರು ಕೇಳಿ ಬರುತ್ತಿರುವುದರ ಕುರಿತ ಪ್ರಶ್ನೆಗೆ, ‘ಪ್ರತಾಪ ಸಿಂಹ ಹೆಸರು ಕೆಡಿಸಿಕೊಂಡಿದ್ದಾನೆ ಎಂದು ಬದಲಾವಣೆ ಮಾಡಿಕೊಂಡಿರಬಹುದು. ಅದು ನನಗೆ ಗೊತ್ತಿಲ್ಲ. ಯದುವೀರ್‌ ಹೆಸರು ಇನ್ನೂ ಬಂದಿಲ್ಲ. ಅವರು ಯಾರನ್ನು ಅಭ್ಯರ್ಥಿ ಮಾಡುತ್ತಾರೆ ಎಂಬುದು ಪ್ರಶ್ನೆ ಅಲ್ಲ. ಬಿಜೆಪಿಯನ್ನು ಸೋಲಿಸಬೇಕು ಎಂಬುದು ನಮ್ಮ ಗುರಿ. ನಾವು ಬಡವರ ಪರ ಮಾಡಿದ ಕಾರ್ಯಕ್ರಮಗಳನ್ನು ಅವಲಂಬಿಸಿದ್ದೇವೆಯೇ ವಿನಾ ಬಿಜೆಪಿಯಿಂದ ಯಾರು ಅಭ್ಯರ್ಥಿಯಾಗುತ್ತಾರೆ ಎಂಬುದು ಮುಖ್ಯವಲ್ಲ’ ಎಂದು ಹೇಳಿದರು. 

ಒಂದು ತೊಟ್ಟು ನೀರು ಕೊಡುವುದಿಲ್ಲ
‘ತಮಿಳುನಾಡಿಗೆ ಕದ್ದು ಮುಚ್ಚಿ ಕಾವೇರಿ ನೀರು ಬಿಡಲಾಗುತ್ತಿದೆ’ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ‘ಇದೆಲ್ಲ ಸುಳ್ಳು. ತಮಿಳುನಾಡಿಗೆ ಒಂದು ತೊಟ್ಟು ನೀರು ಕೊಡುವುದಿಲ್ಲ. ನಮಗೇ ನೀರು ಇಲ್ಲ. ಅವರಿಗೆ ಹೇಗೆ ಕೊಡುವುದು. ತಮಿಳುನಾಡಿನವರೂ ನೀರು ಕೇಳಿಲ್ಲ. ನೀರು ಕೊಡುವ ಪ್ರಶ್ನೆಯೇ ಇಲ್ಲ. ತಮಿಳುನಾಡಿನವರು ಕೇಳಿದರೂ ಕೊಡುವುದಿಲ್ಲ ಕೇಂದ್ರದವರು ಹೇಳಿದರೂ ಕೊಡುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.