ADVERTISEMENT

ತೆಂಗು ಸಂಸ್ಕರಣ ಘಟಕವೂ ಕಲ್ಪವೃಕ್ಷವಾಗಲಿ: ಸುತ್ತೂರು ಶ್ರೀ

ಸಹಕಾರ ಸಂಸ್ಥೆಯಲ್ಲಿ ಅಸಹಕಾರ ಬೇಡ– ಸಚಿವ ಸೋಮಶೇಖರ್‌ ಸಲಹೆ, ಪ್ರಾಮಾಣಿಕತೆ ಇರಲಿ–ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 13:40 IST
Last Updated 18 ಸೆಪ್ಟೆಂಬರ್ 2020, 13:40 IST
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ತೆಂಗು ಸಂಸ್ಕರಣ ಘಟಕದಲ್ಲಿ ತಯಾರಾದ ತೆಂಗಿನ ಪುಡಿಯನ್ನು ಪರಿಶೀಲಿಸಿದರು
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ತೆಂಗು ಸಂಸ್ಕರಣ ಘಟಕದಲ್ಲಿ ತಯಾರಾದ ತೆಂಗಿನ ಪುಡಿಯನ್ನು ಪರಿಶೀಲಿಸಿದರು   

ಚಾಮರಾಜನಗರ: ‘ತೆಂಗಿನ ಮರವನ್ನು ಕಲ್ಪವೃಕ್ಷ ಎನ್ನುತ್ತೇವೆ. ಚಾಮರಾಜನಗರದಲ್ಲಿ ಸ್ಥಾಪನೆಯಾಗಿರುವ ತೆಂಗು ಸಂಸ್ಕರಣ ಘಟಕವು ಜಿಲ್ಲೆಯ ರೈತ‌ರ ಪಾಲಿಗೆ ಕಲ್ಪವೃಕ್ಷ, ಕಾಮಧೇನುವಾಗಲಿ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಹಾರೈಸಿದರು.

ಕಾಳನಹುಂಡಿ ರಸ್ತೆಯ ಮುಣಚನಹಳ್ಳಿಯಲ್ಲಿ ಚಾಮರಾಜನಗರ ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘ ಸ್ಥಾಪಿಸಿರುವ ತೆಂಗು ಸಂಸ್ಕರಣ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಅವರು ಆಶೀರ್ವಚನ ನೀಡಿದರು.

‘ಚಾಮರಾಜನಗರ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳು ಇಲ್ಲದಿದ್ದರೂ, ಕೃಷಿಯನ್ನು ಅವಲಂಬಿಸಿದವರು ಹೆಚ್ಚು ಜನ ಇದ್ದಾರೆ. ಇಲ್ಲಿನ ಜನರು ಶ್ರಮಜೀವಿಗಳು. ಹಿಂದೆ ರೇಷ್ಮೆಗೆ ಹೆಸರಾಗಿತ್ತು. ನಂತರ ರೇಷ್ಮೆ ಕೃಷಿ ಕಡಿಮೆಯಾಗುತ್ತಾ ಬಂತು. ತೆಂಗಿನ ಬೆಳೆಯನ್ನು ಬೆಳೆಯುವವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ, ನೀರಿನ ಕೊರತೆ ಅವರನ್ನು ಕಾಡಿತು’ ಎಂದರು.

ADVERTISEMENT

‘ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತಂದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್‌.ಎಸ್‌.ಮಹದೇವಪ್ರಸಾದ್‌ ಅವರು ಕೆರೆಗಳನ್ನು ಭರ್ತಿ ಮಾಡಲು ಆಸಕ್ತಿ ತೋರಿದರು. ಇದರಿಂದಾಗಿ ಅಂತರ್ಜಲ ಮಟ್ಟ ಹೆಚ್ಚಾಗಿ, ರೈತರಿಗೆ ಅನುಕೂಲವಾಯಿತು. ಸಾಕಷ್ಟು ನೀರು ಲಭ್ಯವಿರುವುದರಿಂದ ಜಿಲ್ಲೆಯ ರೈತರು ಭಿನ್ನ ಬೆಳೆಗಳನ್ನು ಬೆಳೆಯಲು ಆರಂಭಿಸಿದರು’ ಎಂದು ಅವರು ಹೇಳಿದರು.

‘ಈಗ ಮತ್ತೆ ತೆಂಗು ಬೆಳೆಯುವವರು ಹೆಚ್ಚುತ್ತಿದ್ದಾರೆ. ಬೆಳೆಗಾರರು ಸೇರಿ ಸಹಕಾರ ಸಂಘ ರಚಿಸಿಕೊಂಡು ಸಂಸ್ಕರಣ ಘಟಕ ಸ್ಥಾಪನೆ ಮಾಡಿರುವುದು ಶ್ಲಾಘನೀಯ ಕಾರ್ಯ. ಇದರಿಂದ ನೂರಾರು ರೈತರಿಗೆ ಅನುಕೂಲವಾಗಲಿದೆ. ತೆಂಗಿಗೆ ಸೂಕ್ತ ಬೆಲೆ ಸಿಗಲಿದೆ’ ಎಂದು ಪ್ರತಿಪಾದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್ ಅವರು ಮಾತನಾಡಿ, ‘ಜಿಲ್ಲೆಯ ರೈತರು ಹಲವು ವರ್ಷಗಳ ನಿರೀಕ್ಷೆ ಈಗ ಸಾಕಾರವಾಗಿದೆ. 2010–11ನೇ ಸಾಲಿನ ಬಜೆಟ್‌ನಲ್ಲಿ ಈ ಸಂಸ್ಕರಣ ಘಟಕಕ್ಕಾಗಿ ಮುಖ್ಯಮಂತ್ರಿ ಅವರು (ಯಡಿಯೂರಪ್ಪ) ₹3.5 ಕೋಟಿ ಹಂಚಿಕೆ ಮಾಡಿದ್ದರು. ದಿನಕ್ಕೆ 50 ಸಾವಿರ ತೆಂಗಿನಕಾಯಿ ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿರುವ ಘಟಕವು 200ರಿಂದ 250 ಜನರಿಗೆ ಕೆಲಸ ನೀಡಲಿದೆ. ಪ್ರಾಮಾಣಿಕತೆಯಿಂದ ಹಾಗೂ ರೈತರ ಹಿತಕ್ಕಾಗಿ ಘಟಕ ನಡೆಯಲಿ’ ಎಂದು ಹೇಳಿದರು.

ತೆಂಗಿನಕಾಯಿ ಉತ್ಪನ್ನ ಬಿಡುಗಡೆ ಮಾಡಿ ಮಾತನಾಡಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಅವರು, ‘ಸಹಕಾರ ಸಂಸ್ಥೆಯಲ್ಲಿ ಅಸಹಕಾರ ಇದ್ದರೆ ಸಂಸ್ಥೆ ಬೆಳೆಯುವುದಿಲ್ಲ. ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಇರಬೇಕು. ಬದ್ಧತೆಯಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ. ಸಂಘದ ಎಲ್ಲ ಚಟುವಟಿಕೆಗಳಿಗೆ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.

ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘2013ರಲ್ಲಿ ಘಟಕ ಸ್ಥಾಪ‍ನೆಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು. 2018ರಲ್ಲೇ ಉದ್ಘಾಟನೆ ಆಗಬೇಕಿತ್ತು. ಮುಖ್ಯಮಂತ್ರಿ ಅವರನ್ನು ಕರೆಸಲು ಪ್ರಯತ್ನ ಪಟ್ಟೆವು. ಕಳೆದ ವರ್ಷ, ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರನ್ನು ಉದ್ಘಾಟನೆಗೆ ಕರೆ ತರಲು ಪ್ರಯತ್ನಿಸಿದ್ದೆವು. ಅದು ಕೂಡ ಆಗಲಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಕೆ.ರವೀಶ್‌, ಚಾಮರಾಜನಗರ ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಭೋಯರ್‌ ಹರ್ಷಲ್‌ ನಾರಾಯಣರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌, ಸಹಕಾರ ಸಂಘದ ನಿರ್ದೇಶಕರು, ಸ್ಥಳೀಯ ಪ್ರತಿನಿಧಿಗಳು ಇದ್ದರು.

ಅಕ್ಟೋಬರ್‌ 2: ಮೈಸೂರಿನಲ್ಲಿ ‘ಆರ್ಥಿಕ ಸ್ಪಂದನೆ’

‘ಕೋವಿಡ್‌–19 ಸಂಕಷ್ಟಕ್ಕೆ ತುತ್ತಾಗಿರುವವರಿಗೆ ಸಹಕಾರ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ನೀಡುವ ‘ಆರ್ಥಿಕ ಸ್ಪಂದನೆ’ ಕಾರ್ಯಕ್ರಮ ಅಕ್ಟೋಬರ್‌ 2ರಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದರು.

‘ಆತ್ಮ ನಿರ್ಭರ ಭಾರತ ಪ್ಯಾಕೇಜ್‌ ಅಡಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ₹23 ಸಾವಿರ ಕೋಟಿ ಬಿಡುಗಡೆಯಾಗಿದೆ. ಕೃಷಿ ಹಾಗೂ ಕೃಷಿಯೇತರ ಉದ್ದೇಶಗಳಿಗೆ ಇದನ್ನು ಬಳಸಲಾಗುತ್ತಿದೆ. ಇದಲ್ಲದೇ ಸಹಕಾರ ಇಲಾಖೆಯು ಡಿಸಿಸಿ, ಅಪೆಕ್ಸ್‌ ಬ್ಯಾಂಕುಗಳು ಹಾಗೂ ನಬಾರ್ಡ್‌ ಮೂಲಕ ₹15,300 ಕೋಟಿ ಮೊತ್ತವನ್ನು ಸಣ್ಣ, ಮಧ್ಯಮ ಹಾಗೂ ದೀರ್ಘ ಸಾಲದ ರೂಪದಲ್ಲಿ ನೀಡಲಿದೆ. ಬೆಂಗಳೂರು ವಲಯದಲ್ಲಿ ಈಗಾಗಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮೈಸೂರು ವಿಭಾಗದಲ್ಲಿ ಅಕ್ಟೋಬರ್‌ 2ರಂದು ಕಾರ್ಯಕ್ರಮ ನಡೆಯಲಿದೆ. ₹8,000 ದಿಂದ ₹4 ಲಕ್ಷದವರೆಗೆ ಸಾಲ ನೀಡಲಾಗುವುದು. ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು’ ಎಂದು ಅವರು ಹೇಳಿದರು.

‘ಚಾಮುಲ್‌ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಲಾಖೆಯ ಜಂಟಿ ರಿಜಿಸ್ಟ್ರಾರ್‌ ಅವರ ವರದಿ ಬರಬೇಕಿದೆ. ಆ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಘಟಕ ವಿಳಂಬ: ಪುಟ್ಟರಂಗಶೆಟ್ಟಿ ಕಾಲೆಳೆದ ಸಚಿವ

ತೆಂಗು ಸಂಸ್ಕರಣಾ ಘಟಕ ನಿರ್ಮಾಣ ವಿಳಂಬವಾಗಿರುವ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದ ಸೋಮಶೇಖರ್‌ ಅವರು, ‘ಪುಟ್ಟರಂಗಶೆಟ್ಟಿ ಅವರು ಇದ್ದೂ ಘಟಕ ಯಾಕೆ ವಿಳಂಬವಾಯಿತು ಎಂಬುದು ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮೈಸೂರು– ಚಾಮರಾಜನಗರ ಭಾಗದಲ್ಲಿ ಪುಟ್ಟರಂಗಶೆಟ್ಟಿ ಅವರ ಮಾತನ್ನು ಬಿಟ್ಟರೆ ಬೇರೆ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಇವರು ಅರ್ಜಿ ತೆಗೆದುಕೊಂಡು ಹೋಗಿ ಕೊಟ್ಟರೆ, ಆ ಕೆಲಸ ಆಯಿತು ಎಂದೇ ಅರ್ಥ. ಹನೂರು ಶಾಸಕ ನರೇಂದ್ರ ಅವರಿಗೆ ಈ ಭಾಗ್ಯ ಇರಲಿಲ್ಲ’ ಎಂದು ತಮಾಷೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.