ಚಾಮರಾಜನಗರ: ರೈತರು ಆರೋಗ್ಯವರ್ಧಕವಾಗಿರುವ ತೆಂಗಿನ ಮೌಲ್ಯವರ್ಧನೆಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸಲಹೆ ನೀಡಿದರು.
ನಗರದ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ತೋಟಗಾರಿಕೆ ಮಹಾವಿದ್ಯಾಲಯ ಮೈಸೂರು, ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಚಾಮರಾಜನಗರ ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಸಹಯೋಗದಲ್ಲಿ ವಿಶ್ವ ತೆಂಗು ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ತೆಂಗು ಬೆಳೆಯಲ್ಲಿ ಕೀಟ, ರೋಗಬಾಧೆಯ ಸಮಗ್ರ ನಿರ್ವಹಣೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕೃಷಿ ಪ್ರಧಾನ ಜಿಲ್ಲೆಯಾಗಿರುವ ಚಾಮರಾಜನಗರದಲ್ಲಿ ತೆಂಗು ಬೆಳೆಗೆ ಪ್ರಾಮುಖ್ಯತೆ ನೀಡಲಾಗಿದೆ. ಕರ್ನಾಟಕದಲ್ಲಿ 7 ಲಕ್ಷ ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ದೇಶದಲ್ಲಿ 2ನೇ ಸ್ಥಾನ ಪಡೆದಿಕೊಂಡಿದೆ. ತುಮಕೂರು, ಹಾಸನ, ಚಿತ್ರದುರ್ಗ ಸೇರಿದಂತೆ ಚಾಮರಾಜನಗರದಲ್ಲೂ ತೆಂಗು ಹೆಚ್ಚಾಗಿ ಬೆಳೆಯಲಾಗುತ್ತದೆ.
ಜಿಲ್ಲೆಯಿಂದ ತೆಂಗು ನೇರವಾಗಿ ನೆರೆಯ ರಾಜ್ಯಗಳಿಗೆ ಹೆಚ್ಚಾಗಿ ರಫ್ತಾಗುತ್ತಿರುವುದರಿಂದ ಹೆಚ್ಚಿನ ಲಾಭ ಜಿಲ್ಲೆಯ ರೈತರಿಗೆ ಸಿಗುತ್ತಿಲ್ಲ. ತೆಂಗಿನ ಮೌಲ್ಯವರ್ಧನೆ ಮಾಡಿದರೆ ಲಾಭ ಹೆಚ್ಚು ದೊರೆಯಲಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ತೆಂಗಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಬಲಗೊಳ್ಳಬೇಕು ಎಂದರು.
ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿರುವ ತೆಂಗು ಬಹುಪಯೋಗಿ ಉತ್ಪನ್ನವಾಗಿ ಬೇಡಿಕೆ ಸೃಷ್ಟಿಸಿಕೊಂಡಿದೆ. ಸಮಾಜದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿದ್ದು ಆರೋಗ್ಯ ವರ್ಧನೆಗೆ ಎಳನೀರು ಪೂರಕವಾಗಿರುವುದರಿಂದ ಹೆಚ್ಚು ಮಾರಾಟವಾಗುತ್ತಿದೆ. ಈಚೆಗೆ ತೆಂಗಿನಂದ ತಯಾರಿಸುವ ಕೋಲ್ಡ್ ಪ್ರೆಸ್ಟ್ ಎಣ್ಣೆಗೆ ಹೆಚ್ಚು ಬೇಡಿಕೆಯಿದ್ದು, ಅಡುಗೆಯಲ್ಲೂ ತೆಂಗಿನ ಎಣ್ಣೆ ಬಳಕೆ ಹೆಚ್ಚಾಗುತ್ತಿದೆ. ಕೊಲೆಸ್ಟ್ರಾಲ್ ಅಂಶ ಕಡಿಮೆ ಇರುವ ಆರೋಗ್ಯಕ್ಕೆ ಪೂರಕವಾಗಿರುವ ತೆಂಗಿನ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಯಾಗುತ್ತಿದ್ದು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎ.ಪಿ.ಎಂ.ಸಿಯಲ್ಲಿ ಎಳನೀರು ಮಾರುಕಟ್ಟೆ ತೆರೆಯುವ ಚಿಂತನೆ ಇದೆ. ರಾಜ್ಯ ಸರ್ಕಾರವು ತೆಂಗು ಬೆಳೆಯುವ ರೈತರಿಗೆ ಹಲವು ಕಾರ್ಯಕ್ರಮಗಳಡಿ ರಿಯಾಯಿತಿ ದರದಲ್ಲಿ ಸಾಲ-ಸಹಾಯಧನ ಸೌಲಭ್ಯ ನೀಡುತ್ತಿದೆ. ತೆಂಗು ಬೆಳೆಗಾರರಿಗೆ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಅರಿವು ಹಾಗೂ ಮಾಹಿತಿಯನ್ನು ರೈತರಿಗೆ ತಲುಪಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಸಖಿ ಹಾಗೂ ಪಶು ಸಖಿಯರ ಸೇವೆಯನ್ನು ಬಳಸಿಕೊಂಡು ರೈತರಿಗೆ ಮಾಹಿತಿ ನೀಡಬೇಕು ಎಂದರು.
ಚಾಮರಾಜನಗರ ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎ.ಎಂ.ಮಹೇಶ್ ಪ್ರಭು ಮಾತನಾಡಿ ವಿಶ್ವ ತೆಂಗು ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಚಾಮರಾಜನಗರ ತೆಂಗು ಬೆಳೆಯುವ ಪ್ರಮುಖ ಜಿಲ್ಲೆಯಾಗಿದ್ದು ಬಹುವಾರ್ಷಿಕ ಬೆಳೆಯಾಗಿರುವ ತೆಂಗು ರೈತರಿಗೆ ತಲಾತಲಾಂತರದವರೆಗೆ ಆದಾಯ ತಂದುಕೊಡಲಿದೆ. ತೆಂಗಿನಿಂದ 130 ಬಗೆಯ ಉತ್ಪನ್ನಗಳನ್ನು ತಯಾರಿಸಬಹದಾಗಿದೆ. ಸಹಕಾರಿ ಸಂಸ್ಥೆಗಳ ಮೂಲಕ ತೆಂಗು ಮಾರಾಟಕ್ಕೆ ಹಾಗೂ ಮೌಲ್ಯವರ್ಧನೆ ಅವಕಾಶ ನೀಡುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್, ರೈತ ಮುಖಂಡರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮಹೇಶ್ ಕುಮಾರ್ ಹಾಗೂ ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣೆ ಘಟಕದ ನಿರ್ದೇಶಕ ಪುಟ್ಟರಸು, ತೆಂಗು ಬೆಳೆ ಕುರಿತು ವಿಷಯ ತಜ್ಞರಿಂದ ಸಂವಾದ, ಗೋಷ್ಠಿಗಳು ನಡೆದವು.
ತೆಂಗಿನಲ್ಲಿ ಕಪ್ಪುತಲೆ ಹುಳುವಿನ ಬಾಧೆ | ‘ಮೋನೊ ಕ್ರೊಟೊಪಸ್ ಬೆರೆಸಿ ಸಿಂಪರಿಸಿದರೆ ಹತೋಟಿ’ | ‘ಗೋನಿಯಾಜಿಎಸ್ ಪರೋಪ ಜೀವಿಗಳ ಮೂಲಕವೂ ಹತೋಟಿ ಸಾಧ್ಯ’
ರೈತರಿಗೆ ಸಲಹೆ
ಈಚೆಗೆ ತೆಂಗು ಬೆಳೆಗೆ ರೋಗಭಾಧೆ ಹೆಚ್ಚಾಗಿ ಕಾಡುತ್ತಿದ್ದು ಕಪ್ಪುತಲೆ ಹುಳುಗಳ ನಿಯಂತ್ರಣಕ್ಕೆ ತೆಂಗಿನ ತಾಕುಗಳಿಗೆ ಭೇಟಿನೀಡಿ ಸಮೀಕ್ಷೆ ನಡೆಸಲು ಸರ್ಕಾರ ನಿರ್ದೇಶನ ನೀಡಿದೆ. ಅದರಂತೆ ತೆಂಗು ಬೆಳೆಯಲ್ಲಿ ರೋಗ ನಿಯಂತ್ರಣಕ್ಕೆ ಇಳುವರಿ ಹೆಚ್ಚಳಕ್ಕೆ ರೈತರಿಗೆ ತಜ್ಞರ ಮಾರ್ಗದರ್ಶನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.
ಕೀಟ ನಿಯಂತ್ರಣ ಹೇಗೆ
ತೆಂಗಿನಲ್ಲಿ ಕಪ್ಪುತಲೆ ಹುಳುವಿನ ಬಾಧೆ ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಮಾರ್ಚ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಐದು ವರ್ಷದೊಳಗಿನ ಮರಗಳಲ್ಲಿ ರೋಗಬಾಧೆ ಕಾಣಿಸಿಕೊಂಡರೆ ಗರಿಗಳನ್ನು ಸುಡಬೇಕು ಅಥವಾ ಒಂದು ಲೀಟರ್ ನೀರಿಗೆ ಒಂದೂವರೆ ಎಂಎಲ್ ಮೋನೊ ಕ್ರೊಟೊಪಸ್ ಬೆರೆಸಿ ಸಿಂಪರಣೆ ಮಾಡಬೇಕು. ಐದು ವರ್ಷಕ್ಕಿಂತ ದೊಡ್ಡ ಮರಗಳಿದ್ದರೆ ಗೋನಿಯಾಜಿಎಸ್ ಪರೋಪ ಜೀವಿಗಳನ್ನು ಪ್ರತಿಮರಕ್ಕೆ 15ರಂತೆ ನಾಲ್ಕು ಬಾರಿ ಬಿಡಬೇಕು. ಅಥವಾ ಮರದ ಬೇರಿಗೆ 7.5 ಎಂಎಲ್ ಬೇವಿನ ಎಣ್ಣೆಯನ್ನು 7.5 ಎಂಎಲ್ ನೀರಿನೊಂದಿಗೆ ಮಿಶ್ರಣ ಮಾಡಿ ಬುಡಕ್ಕೆ ಲೇಪಿಸಿ ಕಟ್ಟಬೇಕು. ಈ ಕ್ರಮವನ್ನು ರೈತರು ಸಾಮೂಹಿಕವಾಗಿ ಅನುಸರಿಸಿದರೆ ಕೀಟಗಳ ನಿರ್ವಹಣೆ ಪರಿಣಾಮಕಾರಿಯಾಗಿರಲಿದೆ. ರುಬೊಸ್ ಬಿಳಿನೊಣದ ಬಾಧೆ ಕಾಣಿಸಿಕಕೊಂಡರೆ 5 ಎಂಎಲ್ ಬೇವಿನ ಎಣ್ಣೆಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪರಿಸುವ ಮೂಲಕ ಕೀಟಗಳ ನಿಯಂತ್ರಣ ಮಾಡಬಹುದು ಎಂದು ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ರೋಗಶಾಸ್ತ್ರಜ್ಞ ಡಾ.ಪಂಪನಗೌಡ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.