ಕೊಳ್ಳೇಗಾಲ: ಇಲ್ಲಿನ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದಲ್ಲಿ ವಿದ್ಯುತ್ ದುರ್ಬಳಕೆ ಮಾಡಿಕೊಂಡು ಕರ್ನಾಟಕ ಗೃಹ ಮಂಡಳಿ ವತಿಯಿಂದ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿರುವುದು ಬುಧವಾರ ಬೆಳಕಿಗೆ ಬಂದಿದೆ.
ಕಾಲೇಜು ಕಟ್ಟಡದ ಪಕ್ಕದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಸುಮಾರು 60x28 ಅಡಿಯುಳ್ಳ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಒಂದು ತಿಂಗಳಿಂದ ಆರಂಭವಾಗಿದ್ದು, ಸದ್ಯಕ್ಕೆ ಕಬ್ಬಿಣ ಹಾಗೂ ಸಿಮೆಂಟ್ ಪಿಲ್ಲರ್ ಸಹಿತ ಬೇಸ್‌ಮೆಂಟ್ ಕಾಮಗಾರಿ ಮುಗಿದಿದೆ.
ಈ ನಡುವೆ ಕಟ್ಟಡ ಕಾಮಗಾರಿ ಕೈಗೊಳ್ಳಲು ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು ತಾತ್ಕಾಲಿಕವಾಗಿ ಪ್ರತ್ಯೇಕ ವಿದ್ಯುತ್ ಸಂಪರ್ಕವನ್ನು ಸೆಸ್ಕ್‌ನಿಂದ ಪಡೆಯಬೇಕು. ಆದರೆ, ಈ ನಿಯಮ ಉಲ್ಲಂಘಿಸಿ, ಕಾಲೇಜು ಕಟ್ಟಡದ ಕೊಠಡಿಯಿಂದ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ಪಡೆದು ಕಾಮಗಾರಿಗೆ ಬೇಕಿರುವ ಕಬ್ಬಿಣದ ಸರಳುಗಳ ಕಟಾವು ಹಾಗೂ ಕಾಲೇಜಿನ ಸಂಪ್‌ನಿಂದ ಸಬ್ ಮರ್ಸಿಬಲ್ ಪಂಪ್ ಮೂಲಕ ನೀರು ಪೂರೈಕೆ ಮಾಡಿಕೊಳ್ಳಲಾಗಿದೆ. ಕಾಲೇಜು ಕಟ್ಟಡದ ವಿದ್ಯುತ್ ಸಂಪರ್ಕವನ್ನು ಕಾಮಗಾರಿಯೊಂದಕ್ಕೆ ತಿಂಗಳಿಂದಲೂ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ? ಇದು ಸಾರ್ವಜನಿಕ ಚರ್ಚೆಗೂ ಗ್ರಾಸವಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದರು.
ಕಾಲೇಜು ಕಟ್ಟಡಕ್ಕೆ ಸೇರಿದ ವಿದ್ಯುತ್ ಸಂಪರ್ಕವನ್ನು ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ 2 ದಿನದ ಮಟ್ಟಿಗೆ ನೀಡುವಂತೆ ಗುತ್ತಿಗೆದಾರರು ಕೇಳಿದ್ದರು. ಇದಕ್ಕೆ ಸಮ್ಮತಿಸಿದ್ದೆ. ಆದರೆ ನಂತರದಲ್ಲಿಯೂ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿರಲಿಲ್ಲ. ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ. ಇದುವರೆಗೆ ಕಾಮಗಾರಿಗೆ ಬಳಕೆ ಮಾಡಿರುವ ವಿದ್ಯುತ್ ಬಿಲ್ ಅನ್ನು ಗುತ್ತಿಗೆದಾರರಿಂದಲೇ ಪಾವತಿಸಲು ಕ್ರಮವಹಿಸಲಾಗುವುದು ಜಯಲಕ್ಷ್ಮಿ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.