ADVERTISEMENT

ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ: ಜನ ಏನಂತಾರೆ?

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 3:13 IST
Last Updated 10 ಫೆಬ್ರುವರಿ 2021, 3:13 IST
ಸಿ.ಸುಬ್ರಹ್ಮಣ್ಯ
ಸಿ.ಸುಬ್ರಹ್ಮಣ್ಯ   

ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ: ಜನ ಏನಂತಾರೆ?

ಜಿಎಸ್‌ಟಿ ವ್ಯಾಪ್ತಿಗೆ ತರಲಿ

ಜನಸಾಮಾನ್ಯರು ಓಡಾಟಕ್ಕೆ ದ್ವಿಚಕ್ರವಾಹನಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಪೆಟ್ರೋಲ್‌ ಅಥವಾ ಡೀಸೆಲ್‌ ಬೆಲೆ ಹೆಚ್ಚಳವಾದರೆ, ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿ ಜನರ ಮೇಲೆ ಹೆಚ್ಚು ಹೊರೆ ಬೀಳುತ್ತದೆ. ಇಂಧನ ದರ ಇಳಿಕೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪೆಟ್ರೋಲಿಯಂ ಅನ್ನು ಕೂಡ ಜಿಎಸ್‌ಟಿ ವ್ಯಾಪ್ತಿಗೆ ತರಲಿ. ಆಗ ತನ್ನಿಂತಾನೆ ಬೆಲೆ ಇಳಿಯುತ್ತದೆ

ADVERTISEMENT

– ಸಿ. ಸುಬ್ರಹ್ಮಣ್ಯ, ಚಾಮರಾಜನಗರ

ಎಲ್ಲರಿಗೂ ತೊಂದರೆ

ಪೆಟ್ರೋಲ್‌ ಮತ್ತು ಡೀಸೆಲ್‌ ಈಗ ಜನರಿಗೆ ಅತ್ಯವಶ್ಯಕ ಸಾಮಗ್ರಿ.ದಿನೇ ದಿನೇ ಅವುಗಳ ಬೆಲೆ ಜಾಸ್ತಿಯಾಗುತ್ತಿರುವುದರಿಂದ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತದೆ. ಪ್ರತಿಯೊಬ್ಬರಿಗೂ ಇದರಿಂದ ತೊಂದರೆ. ಕೇಂದ್ರ ಸರ್ಕಾರ ತಕ್ಷಣ ಬೆಲೆಯಲ್ಲಿ ಇಳಿಕೆ ಮಾಡಬೇಕು.

–ಎಂ.ಕೆ.ಸುಬ್ರಹ್ಮಣ್ಯ ಶೆಟ್ಟಿ, ಉದ್ಯಮಿ, ಚಾಮರಾಜನಗರ

ಸರ್ಕಾರಕ್ಕೆ ಆದಾಯವೂ ಮುಖ್ಯ

ಇಂಧನ ಬೆಲೆ ಹೆಚ್ಚಾಗಿದೆ ಎಂದು ಯಾರೂ ವಾಹನ ಓಡಿಸುವುದು ನಿಲ್ಲಿಸಿಲ್ಲ. ಸರ್ಕಾರಕ್ಕೆ ಆದಾಯ ಮುಖ್ಯ. ಇದು ಅದರ ಒಂದು ಭಾಗ. ಬದಲಾವಣೆ ಸಹಜ. ಜನ ಸಾಮಾನ್ಯರೂ ಹೊಂದಿಕೊಂಡು ಹೋಗುತ್ತಿದ್ದಾರೆ. ಕಡಿಮೆಯಾದ ಬೆಲೆಗಳ ಬಗ್ಗೆಯೂ ಗಮನ ಹರಿಸಬೇಕು. ಕಡಿಮೆ ದೂರದ ಪ್ರದೇಶಗಳಿಗೆ ಹೋಗುವಾಗ ವಾಹನ ಬಳಸುವುದನ್ನು ಬಿಡಬೇಕು. ಸಮಸ್ಯೆಗಳಿಗೆ ನಮ್ಮಲ್ಲಿಯೇ ಉತ್ತರ ಇದೆ.

–ಮಹೇಂದ್ರ ಹೆಗ್ಗವಾಡಿ, ಚಾಮರಾಜನಗರ ತಾಲ್ಲೂಕು

ಸೈಕಲ್‌ ಸವಾರಿ ಖಚಿತ

ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಇಂಧನ ಬೆಲೆ ವಿಪರೀತಹೆಚ್ಚಾಗಿದೆ. ದಿನೇ ದಿನೇ ಬೆಲೆ ಏರುಮುಖವಾಗಿ ಸಾಗುತ್ತಿದ್ದರೆ, ನಾವು ಬೈಕ್ ಓಡಿಸಲು ಸಾಧ್ಯವಿಲ್ಲ. ಸೈಕಲ್‌ ಸವಾರಿ ಮಾಡುವುದು ಖಚಿತ

–ರವಿ, ಕೊಳ್ಳೇಗಾಲ

ಗ್ರಾಹಕನ ಜೇಬಿಗೆ ಕತ್ತರಿ

ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ವರ್ಗದ ಜನರಿಗೆ ಪೆಟ್ರೋಲ್‌ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಟ್ರ್ಯಾಕ್ಟರ್‌ಗಳ‌ ಮೂಲಕ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸುವ ರೈತನಿಗೆ ಡೀಸೆಲ್‌ ಬೆಲೆ ನುಂಗಲಾರದ ತುತ್ತಾಗಿದೆ. ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಯಿಂದ ಸಹಜವಾಗಿ ಸಾರಿಗೆ ದರ ಹೆಚ್ಚಾಗಲಿದ್ದು, ಗ್ರಾಹಕನ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

–ಶಶಿಕುಮಾರ್, ಕೊಳ್ಳೇಗಾಲ

ಜನ ಬೀದಿಗೆ

ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ‌ ಜನ ಇನ್ನಷ್ಟು ಬೀದಿಗೆ ಬರುತ್ತಾರೆ. ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಬಿಜೆಪಿಯವರು ಇಂದು ಬೆಲೆ ಏರಿಸುವ ಮೂಲಕ ತಮ್ಮ ಮಾತಿನ ಬದ್ಧತೆಯನ್ನು ಮರೆತಿದ್ದಾರೆ.

–ಜಿ. ರಮೇಶ್, ಕಣ್ಣೂರು ಹನೂರು ತಾಲ್ಲೂಕು

ತಳಮಟ್ಟದ ಜನರ ಅರಿವಿಲ್ಲ

ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡುವುದರಿಂದ ಜನ ಸಮಾನ್ಯರಿಗೆ ಹಾಗೂ ಚಾಲಕರಿಗೆ ಹೆಚ್ಚಿನ ತೊಂದರೆಯಾಗುತ್ತದೆ. ವಾಹನ ನಂಬಿ ಜೀವನ ನಡೆಸುವವರು ದುಡಿಮೆಯನ್ನು ಇಂಧನಕ್ಕೆ ಸುರಿಯಬೇಕಾಗುತ್ತದೆ. ಮಕ್ಕಳ ಭವಿಷ್ಯದ ಗತಿ ಏನು? ಆಡಳಿತ ನಡೆಸುವ ಸರ್ಕಾರಗಳಿಗೆ ತಳಮಟ್ಟದ ಜನರ ಬಗ್ಗೆ ಅರಿವಿರಬೇಕು.

–ವೃಷಬೇಂದ್ರ ಹಂಗಳ, ಗುಂಡ್ಲುಪೇಟೆ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.