
ಗುಂಡ್ಲುಪೇಟೆ: ಕಲ್ಲಿನಲ್ಲಿ ದೇವರನ್ನು ಕಂಡ ಮಹಾನ್ ಶಿಲ್ಪಿ ಜಕಣಾಚಾರಿ ಎಂದು ಮುಖ್ಯ ಶಿಕ್ಷಕ ವೆಂಕಟಾಚಲಚಾರಿ ಬಣ್ಣಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬೇಲೂರು, ಹಳೆಬೀಡು, ಸೋಮನಾಥಪುರ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳನ್ನು ಕೆತ್ತನೆ ಮಾಡಿ ಮೂಕವಾಗಿದ್ದ ಕಲ್ಲಿಗೆ ಜಕಣಾಚಾರಿ ಜೀವ ನೀಡಿದ್ದಾರೆ. ಜೊತೆಗೆ ಕಲೆಗೆ ತನ್ನ ಕೈಯನ್ನೂ ಕಳೆದುಕೊಂಡ ಮಹಾನ್ ವ್ಯಕ್ತಿ’ ಎಂದು ಬಣ್ಣಿಸಿದರು.
‘ಯಾವ ಕಲ್ಲು ಯಾವ ವಿಗ್ರಹ ಕೆತ್ತನೆ ಮಾಡಬಹುದು ಎನ್ನುವಷ್ಟು ಕಲ್ಲಿನ ಗುಣಾತ್ಮಕ ಶಕ್ತಿ ಗ್ರಹಿಸುವಷ್ಟು ನಿಪುಣರಾಗಿದ್ದ ಜಕಣಾಚಾರಿ ವಿಗ್ರಹದಲ್ಲಿ ಕೂದಲು, ಉಗುರನ್ನೂ ಕೆತ್ತನೆ ಮಾಡುವಷ್ಟು ಕಲಾ ನೈಪುಣ್ಯತೆ ಹೊಂದಿದ್ದರು’ ಎಂದು ತಿಳಿಸಿದರು
ಮಗನಿಂದಲೇ ಅವಮಾನಿತನಾದ ಜಕಣಾಚಾರಿ ತನ್ನ ಬಲಗೈಯನ್ನೇ ಕತ್ತರಿಸಿಕೊಳ್ಳುತ್ತಾನೆ. ನಂತರದಲ್ಲಿ ತನ್ನ ಜನ್ಮ ಸ್ಥಳವಾದ ಕ್ರೀಡಾಪುರದಲ್ಲಿ ಎಡಗೈಯಲ್ಲಿ ಚೆನ್ನಿಗರಾಯನ ದೇವಾಲಯ ನಿರ್ಮಿಸಿದಾಗ ಜಕಣಾಚಾರಿಗೆ ಮತ್ತೆ ಕೈ ಬಂತು, ಹೀಗಾಗಿ ಕೈ ದಾಳವೆಂದು ಎಂದು ಪ್ರಸಿದ್ದಿಯಾಯಿತು’ ಎಂದು ಹೇಳಿದರು.
ಸಮುದಾಯದ ಅಭಿವೃದ್ಧಿಗೆ ಸಂಘಟನೆ ಬಹುಮುಖ್ಯವಾಗಿದ್ದು, ಆದ್ದರಿಂದ ಎಲ್ಲರೂ ಸಂಘಟಿತರಾಗಬೇಕು. ಸಮಾಜದ ಕೆಲವು ಮಂದಿ ತಮ್ಮ ಮೂಲ ಕೆಲಸಕ್ಕೆ ಮಕ್ಕಳನ್ನು ಬಳಕೆ ಮಾಡಿಕೊಳ್ಳದೆ ವಿಧ್ಯಾಭ್ಯಾಸ ಕೊಡಿಸಬೇಕು. ಸರ್ಕಾರವೂ ವಿಶ್ವಕರ್ಮ ಸಮುದಾಯಕ್ಕೆ ಸೌಲಭ್ಯಗಳನ್ನು ನೀಡುತ್ತಿದ್ದು, ಅದನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು’ ಎಂದು ತಿಳಿಸಿದರು.
ಕಬ್ಬಹಳ್ಳಿ ಬಂಗಾರಚಾರಿ, ಹಂಗಳ ಸುರೇಶಚಾರಿ, ಶ್ರೀನಿವಾಸಚಾರಿ, ಪ್ರಕಾಶಚಾರಿ, ಶಿವರಾಜ ಅವರನ್ನು ಸನ್ಮಾನಿಸಲಾಯಿತು.
ಗ್ರೇಡ್-2 ತಹಶೀಲ್ದಾರ್ ಜಯಪ್ರಕಾಶ್, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಷಣ್ಮುಗಂ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಸಿಡಿಪಿಒ ಹೇಮಾವತಿ, ಹಿರಿಯ ಹೋರಾಟಗಾರ ಬ್ರಹ್ಮಾನಂದ, ಮೂಖಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಹದೇವಚಾರಿ, ಹಂಗಳ ಪುಟ್ಟಚಾರಿ, ರತ್ನಮ್ಮ, ಕಬ್ಬಹಳ್ಳಿ ಮಹೇಶ್, ಸೌಭಾಗ್ಯ, ಶ್ರೀಕಂಠಚಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.