
ಚಾಮರಾಜನಗರ: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಚಾಮರಾಜನಗರ ನಗರಸಭೆ ವತಿಯಿಂದ ನಗರದ ಹಲವು ವಾರ್ಡ್‌ಗಳಲ್ಲಿ ನಿರ್ಮಾಣ ಮಾಡಲಾಗಿರುವ ಸಮುದಾಯ ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಬಾಗಿಲು ಮುಚ್ಚಿದ್ದು ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಾಗಿವೆ.
ಲಕ್ಷಾಂತರ ರೂಪಾಯಿ ವ್ಯಯಿಸಿ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದರೂ ನಾಗರಿಕರ ಬಳಕೆಗೆ ಸಿಗದೆ ಪಾಳು ಬಿದ್ದಿರುವುದು ಸ್ವಚ್ಛ ಭಾರತ ಯೋಜನೆಯ ಮೂಲ ಆಶಯವನ್ನೇ ಅಣಕಿಸುವಂತಿದೆ.
ಚಾಮರಾಜನಗರ ಸಂಪೂರ್ಣ ‘ಬಯಲು ಶೌಚ’ ಮುಕ್ತವಾಗಬೇಕು ಎಂಬ ಉದ್ದೇಶದಿಂದ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳುವಲ್ಲಿ ತೀರಾ ಹಿಂದುಳಿದಿರುವ ವಾರ್ಡ್‌ಗಳಲ್ಲಿ ಹಾಗೂ ಬಡವರು, ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸವಿರುವ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಾಣ ಮಾಡಿದೆ.
ನಗರದ ಎಪಿಎಂಸಿ ಹಿಂಭಾಗ, ಮಹದೇಶ್ವರ ಬಡಾವಣೆಯ ಸರ್ಕಾರಿ ಶಾಲೆಯ ಪಕ್ಕ, ರಾಮಮಂದಿರದ ಆವರಣ, ಉಪ್ಪಾರ ಸಮುದಾಯ ಭವನದ ಎದುರು, ಆದರ್ಶ ನಗರದ ವಾಟರ್ ಟ್ಯಾಂಕ್ ಬಳಿ, ಸಂತೇಮರಳ್ಳಿ ರಸ್ತೆಯ ತ್ಯಾಜ್ಯ ಸಂಗ್ರಹಣಾ ಘಟಕದ ಬಳಿ, ಪುಟ್ಟಮ್ಮಣ್ಣಿ ಪಾರ್ಕ್ ಬಳಿ, ಆಚಾರಿ ಪುಟ್ಟಣ್ಣ ಮನೆಯ ಹತ್ತಿರ.
ಕೊಂಡದ ಮಾಳ, ಸ್ಮಶಾನ ರಸ್ತೆಯ ಪಕ್ಕದ ಜಾಲಹಳ್ಳಿ ಹುಂಡಿ, ಕುಲುಮೆ ರಸ್ತೆಯಲ್ಲಿರುವ ಸ್ಮಶಾನದ ಪಕ್ಕ, ತಿಬ್ಬಳ್ಳಿ ಕಟ್ಟೆ ರಸ್ತೆಯ ಸಮುದಾಯ ಭವನದ ಪಕ್ಕ, ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಬಳಿ, ರಾಮಸಮುದ್ರದ ಸುಬೇದಾರ್ ಕಟ್ಟೆ ಬೀದಿ, ಸುಂಕದ ಗೇಟ್ ಬಳಿ, ಚಿಕ್ಕಅಂಗಡಿ ಬೀದಿ, ರಾಮಸಮುದ್ರದಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ವಿಪರ್ಯಾಸ ಎಂದರೆ ಬಹುತೇಕ ಸಮುದಾಯ ಶೌಚಾಲಯಗಳು ಇದುವರೆಗೂ ಬಾಗಿಲನ್ನೇ ತೆರೆದಿಲ್ಲ. ಕೆಲವು ಶೌಚಾಲಯಗಳಿಗೆ ನೀರು, ವಿದ್ಯುತ್ ಸಂಪರ್ಕ ಹಾಗೂ ಯುಜಿಡಿ ಪೈಪ್‌ಲೈನ್ ಜೋಡಣೆಯೇ ಮಾಡಿಲ್ಲ. ಹಲವು ವರ್ಷಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿರುವ ಶೌಚಾಲಯಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಕೆ ಮದ್ಯವ್ಯಸನಿಗಳ ಹಾಗೂ ನಿರ್ಗತಿಕರ ಆಶ್ರಯ ತಾಣವಾಗಿ ಬದಲಾಗಿವೆ.
ಚೆನ್ನಾಪುರದ ಮೋಳೆ ರಸ್ತೆಯಲ್ಲಿರುವ ಸ್ಮಶಾನದ ಬಳಿ ಇರುವ ಶೌಚಾಲಯ ಹಾಗೂ ಅನತಿ ದೂರದಲ್ಲಿರುವ ಮತ್ತೊಂದು ಶೌಚಾಲಯ, ಸಂತೇಮರಳ್ಳಿ ರಸ್ತೆ, ಜಿಲ್ಲಾ ನ್ಯಾಯಾಲಯದ ರಸ್ತೆಯಲ್ಲಿರುವ ಶೌಚಾಲಯ, ರಾಮಸಮುದ್ರದಲ್ಲಿರುವ ಮಹಿಳೆಯರ ಶೌಚಾಲಯ, ತಿಬ್ಬಳ್ಳಿಕಟ್ಟೆ ರಸ್ತೆಯಲ್ಲಿರುವ ಶೌಚಾಲಯ, ನಗರಸಭೆ ಕಚೇರಿಗೆ ಹೊಂದಿಕೊಂಡಿರುವ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಲಭ್ಯವಾಗದೆ ಸಂಪೂರ್ಣವಾಗಿ ಪಾಳು ಬಿದ್ದಿವೆ.
ನಗರಸಭೆ ಕಚೇರಿಗೆ ಹೊಂದಿಕೊಂಡಿರುವ ಸಾರ್ವಜನಿಕ ಶೌಚಾಲಯ ಮುಚ್ಚಿರುವುದರಿಂದ ಬಹಿರಂಗ ಮೂತ್ರ ವಿಸರ್ಜನೆ ಮಾಡುವುದು ಹೆಚ್ಚಾಗಿದೆ. ನಗರಸಭೆ ಕಚೇರಿಯ ಸುತ್ತಮುತ್ತ, ಚಾಮರಾಜೇಶ್ವರ ದೇವಸ್ಥಾನದ ಇಕ್ಕೆಲ, ಚಿಕ್ಕ ಅಂಗಡಿ, ದೊಡ್ಡ ಅಂಗಡಿ ಬೀದಿ, ಹೂ, ಹಣ್ಣು, ತರಕಾರಿ ಮಾರುಕಟ್ಟೆಗಳಲ್ಲಿ ಸಾವಿರಾರು ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದು ನಿತ್ಯ ಮಲ–ಮೂತ್ರ ವಿಸರ್ಜನೆಗೆ ಸಮಸ್ಯೆ ಅನುಭವಿಸುತ್ತಿದ್ದಾರೆ.
ಜಿಲ್ಲಾ ಸ್ತ್ರೀಶಕ್ತಿ ಭವನದ ಪಕ್ಕದಲ್ಲಿ ಒಂದು ಸಾರ್ವಜನಿಕ ಶೌಚಾಲಯವಿದ್ದರೂ ಅತಿಯಾದ ಜನದಟ್ಟಣೆ ಇರುವ ಈ ಭಾಗಕ್ಕೆ ಸಾಲುತ್ತಿಲ್ಲ. ನಗರಸಭೆ ಕಚೇರಿ, ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಸ್ಥಾನ, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳು, ಕಿರಾಣಿ ಅಂಗಡಿ, ಹಾರ್ಡ್‌ವೇರ್ ಸೇರಿದಂತೆ ನೂರಾರು ವಾಣಿಜ್ಯ ಮಳಿಗೆಗಳು ಇಲ್ಲಿದ್ದು ನಿತ್ಯ ಗ್ರಾಮಾಂತರ ಭಾಗಗಳಿಂದ ಸಾವಿರಾರು ಮಂದಿ ಭೇಟಿ ನೀಡುತ್ತಾರೆ.
ಹೀಗೆ ಬಂದವರಿಗೆ ಸಮರ್ಪಕ ಶೌಚಾಲಯಗಳು ಇಲ್ಲದೆ ಖಾಲಿ ನಿವೇಶನ, ಉದ್ಯಾನ, ಚರಂಡಿ, ಸಣ್ಣ ಗಲ್ಲಿಗಳಲ್ಲಿ ಶೌಚಕ್ರಿಯೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು, ವೃದ್ಧರು ತೀವ್ರ ಮುಜುಗರದ ಸನ್ನಿವೇಶ ಎದುರಿಸುತ್ತಿದ್ದಾರೆ. ಶೌಚ ಮಾಡಲು ವಾಣಿಜ್ಯ ಮಳಿಗೆಗಳು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಬೇಕಾಗಿದೆ.
ನಗರದ ಜಿಲ್ಲಾ ನ್ಯಾಯಾಲಯ ರಸ್ತೆಯಲ್ಲಿರುವ ಸಮುದಾಯ ಶೌಚಾಲಯಕ್ಕೂ ಬೀಗ ಜಡಿಯಲಾಗಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಈ ರಸ್ತೆ ಹೆಚ್ಚು ಜನದಟ್ಟಣೆ ಹೊಂದಿದ್ದು ಡಿವೈಎಸ್‌ಪಿ ಕಚೇರಿ, ಜೆಎಸ್‌ಎಸ್ ಆಸ್ಪತ್ರೆ, ಜಿಲ್ಲಾ ನ್ಯಾಯಾಲಯ, ವಿರಕ್ತಮಠ, ಐದಾರು ಸರ್ಕಾರಿ ಇಲಾಖೆಗಳ ಕಚೇರಿಗಳಿದ್ದು ಸಮುದಾಯ ಶೌಚಾಲಯದ ಅಗತ್ಯತೆ ಹೆಚ್ಚಾಗಿದೆ.
ಚೆನ್ನಾಪುರದ ಮೋಳೆ ರಸ್ತೆಯಲ್ಲಿರುವ ಎರಡೂ ಸಮುದಾಯ ಶೌಚಾಲಯಗಳು ಮುಚ್ಚಿವೆ. ಶೌಚಾಲಯದ ಸುತ್ತಮುತ್ತ ಆಳೆತ್ತರದ ಗಿಡ–ಗಂಟಿ, ಕಳೆ ಸಸ್ಯಗಳು ಬೆಳೆದುನಿಂತಿವೆ, ಶೌಚಾಲಯ ಪ್ರವೇಶಿಸಲು ಸಾಧ್ಯವಾಗದಷ್ಟು ಅವ್ಯವಸ್ಥೆ ತುಂಬಿಕೊಂಡಿದೆ. ತೀರಾ ಹಿಂದುಳಿದಿರುವ ಪರಿಶಿಷ್ಟ ಜಾತಿ, ವರ್ಗದವರೇ ಹೆಚ್ಚಾಗಿ ನೆಲೆಸಿರುವ ಚೆನ್ನಾಪುರದ ಮೋಳೆಯಲ್ಲಿ ಒಂದು ಸಮುದಾಯ ಶೌಚಾಲಯ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ನಿರ್ವಹಣೆ ಕೊರತೆ ಎದ್ದು ಕಾಣುತ್ತದೆ. ಈ ಭಾಗದಲ್ಲಿ ಇಂದಿಗೂ ಸ್ಥಳೀಯರು ಬಯಲು ಶೌಚವನ್ನೇ ಆಶ್ರಯಿಸಿರುವುದು ವಿಪರ್ಯಾಸ.
ಸ್ವಚ್ಛ ಭಾರತ್ ಯೋಜನೆಯಂತಹ ಮಾದರಿ ಕಾರ್ಯಕ್ರಮ ನಿರ್ವಹನೆ ಕೊರತೆಯಿಂದ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದೂರದಷ್ಟಿತ್ವದ ಕೊರತೆಯಿಂದ ಹಳಿ ತಪ್ಪಿದ್ದು ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ತೀರಾ ಕಿರಿದಾದ ಸೂರು, ಸ್ವಂತ ಜಾಗ ಇಲ್ಲದಿರುವುದು, ದಾಖಲೆಗಳ ಅಲಭ್ಯತೆ ಸಹಿತ ಹಲವು ತಾಂತ್ರಿಕ ಕಾರಣಗಳಿಂದ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗದ ನೂರಾರು ಮಂದಿ ಬಯಲು ಶೌಚ ವ್ಯವಸ್ಥೆಗೆ ಒಗ್ಗಿಕೊಂಡಿರುವುದು ಬೇಸರದ ಸಂಗತಿ. ಕನಿಷ್ಠ ಸಮುದಾಯ ಶೌಚಾಲಯಗಳನ್ನಾದರೂ ಬಳಕೆಗೆ ಮುಕ್ತಗೊಳಿಸಿ ನಿಯಮಿತವಾಗಿ ನಿರ್ವಹಣೆ ಮಾಡಿದರೆ ಬಯಲು ಶೌಚ ಪದ್ಧತಿಗೆ ಕಡಿವಾಣ ಹಾಕಬಹುದು ಎನ್ನುತ್ತಾರೆ ಮುಖಂಡರಾದ ಕೃಷ್ಣ.
ತೀರಾ ಜನದಟ್ಟಣೆ ಹೆಚ್ಚಾಗಿರುವ ಕಡೆಗಳಲ್ಲಿ ಸಮುದಾಯ ಶೌಚಾಲಯಗಳ ಇಲ್ಲದಿರುವುದರಿಂದ ನಾಗರಿಕರು ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ನಗರದ ಪರಿಸರ ಗಬ್ಬುನಾರುತ್ತಿದೆ. ಚಾಮರಾಜೇಶ್ವರ ದೇವಸ್ಥಾನದ ಸುತ್ತಮುತ್ತ, ಹಣ್ಣು, ತರಕಾರಿ ಮಾರುಕಟ್ಟೆಯ ಸುತ್ತಮುತ್ತ ಅನೈರ್ಮಲ್ಯ ಹೆಚ್ಚಾಗಿದೆ.
ಸಮುದಾಯ ಶೌಚಾಲಯಗಳಗಿನ ನೆಲಹಾಸು ಕಿತ್ತುಬಂದಿವೆ. ನಲ್ಲಿಯ ಪೈಪ್‌ಗಳು ಮುರಿದು ಬಿದ್ದಿವೆ. ಪೀಠೋಪಕರಣಗಳು ದುಸ್ಥಿತಿಗೆ ತಲುಪಿವೆ, ವೈರ್, ಸ್ವಿಚ್, ಬಲ್ಬ್‌ಗಳು ಹಾಳಾಗಿವೆ.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಮಂಜೂರಾದ ಅನುದಾನ ಬಳಕೆ ಮಾಡಿಕೊಳ್ಳಲೇಬೇಕು ಎಂಬ ಕಾರಣಕ್ಕೆ ಸ್ಥಳೀಯ ನಗರಸಭೆ ಸದಸ್ಯರ ಒತ್ತಡಕ್ಕೆ ಮಣಿದು ಅಗತ್ಯ ಇಲ್ಲದ ಕಡೆಗಳಲ್ಲೂ ಸಮುದಾಯ ಶೌಚಾಲಯಗಳನ್ನು ನಿರ್ಮಾಣ ಮಾಡಿರುವುದು ಕಾಣುತ್ತದೆ ಎಂದು ದೂರುತ್ತಾರೆ ಸಾರ್ವಜನಿಕರು.
ಸಮುದಾಯ ಶೌಚಾಲಯಗಳ ಅವ್ಯವಸ್ಥೆ ಕುರಿತು ನಗರಸಭೆ ಪ್ರಭಾರ ಪೌರಾಯುಕ್ತರಾದ ಪ್ರಕಾಶ್ ಪ್ರತಿಕ್ರಿಯೆ ನೀಡಲಿಲ್ಲ.
ಯಾರು ಏನಂತಾರೆ ?
‘ಹೊಲಸು ತುಂಬಿ ದುರ್ವಾಸನೆ’ ರಾಮಸಮುದ್ರದಲ್ಲಿರುವ ಶೌಚಾಲಯಕ್ಕೆ ಸರಿಯಾದ ಯುಜಿಡಿ ಸಂಪರ್ಕ ಕಲ್ಪಿಸದೆ ಹೊಲಸು ಶೌಚದೊಳಗೆ ತುಂಬಿಕೊಳ್ಳುತ್ತದೆ. ಶೌಚಾಲಯದೊಳಗೆ ಹೋಗಲು ಸಾಧ್ಯವಿಲ್ಲದಷ್ಟು ದುರ್ವಾಸನೆ ತುಂಬಿಕೊಂಡಿದೆ. ಹೊಲಸು ಸರಾಗವಾಗಿ ಹರಿದುಹೋಗುವಂತೆ ಮಾಡಿಲ್ಲ. ಈ ಭಾಗದಲ್ಲಿ ಶೌಚಾಲಯ ಇದ್ದೂ ಇಲ್ಲದಂತಾಗಿದೆ. ಯಶೋದಾ ಚಾಮರಾಜನಗರ ನಿವಾಸಿ ‘ನಿರ್ವಹಣೆ ಕೊರತೆ’ ತಿಬ್ಬಳ್ಳಿಕಟ್ಟೆಯಲ್ಲಿ ನಿರ್ಮಿಸಿರುವ ಸಮುದಾಯ ಶೌಚಾಲಯದ ಬಾಗಿಲು ಮುಚ್ಚಿ ವರ್ಷಗಳೇ ಕಳೆದಿವೆ. ಶೌಚಾಲಯಕ್ಕೆ ಹೋಗುವ ದಾರಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು ಪಾಳುಬಿದ್ದಿರುವ ಸ್ಥಿತಿಯಲ್ಲಿದೆ. ಯಾವ ಕಾರಣಕ್ಕೆ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ನೀಡುತ್ತಿಲ್ಲವೋ ತಿಳಿಯುತ್ತಿಲ್ಲ. ಮಹದೇವ್ ಚಾಮರಾಜನಗರ ನಿವಾಸಿ ‘ತೆರಿಗೆ ಹಣ ಪೋಲು’ ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿರುರುವ ಬಹಳಷ್ಟು ಸಮುದಾಯ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಮುಕ್ತವಾಗದಿರುವುದು ಬೇಸರದ ವಿಚಾರ ₹ 10 ರಿಂದ ₹ 15 ಲಕ್ಷ ಜನರ ತೆರಿಗೆ ಹಣ ವ್ಯಯಿಸಿ ನಿರ್ಮಿಸಿರುವ ಸಮುದಾಯ ಶೌಚಾಲಯಗಳು ಪಾಳುಬಿದ್ದಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಜನದಟ್ಟಣೆ ಹೆಚ್ಚಾಗಿರುವ ಸ್ಥಳಗಳಲ್ಲಿ ಶೌಚಾಲಯಳಿಲ್ಲದೆ ಮಹಿಳೆಯರು ಮುಜುಗರ ಅನುಭವಿಸುತ್ತಿದ್ದಾರೆ. ನಗರಸಭೆ ಪೌರಾಯುಕ್ತರು ಕೂಡಲೇ ಸಮುದಾಯ ಶೌಚಾಲಯಗಳನ್ನು ದುರಸ್ತಿಗೊಳಿಸಿ ಜನರ ಬಳಕೆಗೆ ನೀಡಬೇಕು. ಮಹೇಶ್ ಮಾಜಿ ನಗರಸಭೆ ಸದಸ್ಯ ಇಚ್ಛಾಶಕ್ತಿ ಕೊರತೆ ಸಾರ್ವಜನಿಕರಿಗೆ ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸುವಲ್ಲಿ ನಗರಸಭೆ ವಿಫಲವಾಗಿದೆ. ಸಮುದಾಯ ಶೌಚಾಲಯಗಳು ದುಸ್ಥಿತಿ ತಲುಪಲು ಶಾಸಕರು ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳೇ ಕಾರಣ. ಕನಿಷ್ಠ ಶೌಚಾಲಯ ಸೌಲಭ್ಯ ನೀಡಲು ಸಾಧ್ಯವಾಗದ ಸ್ಥಳೀಯ ಆಡಳಿತ ವ್ಯವಸ್ಥೆಯಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸಿ.ಎಂ.ಕೃಷ್ಣಮೂರ್ತಿ ದಲಿತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.