ADVERTISEMENT

ಕೊರೊನಾ: ಕಾಂಗ್ರೆಸ್‌ನಿಂದ ಜಿಲ್ಲಾ ಕಾರ್ಯಪಡೆ

ಜನರಲ್ಲಿ ಜಾಗೃತಿ ಮೂಡಿಸಲು ಮುಖಂಡರು, ಕಾರ್ಯಕರ್ತರಿಗೆ ಧ್ರುವನಾರಾಯಣ ಕರೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 14:28 IST
Last Updated 4 ಏಪ್ರಿಲ್ 2020, 14:28 IST
ಸಭೆಯಲ್ಲಿ ಆರ್‌.ಧ್ರುವನಾರಾಯಣ ಅವರು ಮಾತನಾಡಿದರು
ಸಭೆಯಲ್ಲಿ ಆರ್‌.ಧ್ರುವನಾರಾಯಣ ಅವರು ಮಾತನಾಡಿದರು   

ಚಾಮರಾಜನಗರ: ಕೋರೊನಾ ವೈರಸ್ ಸೋಂಕು ತಡೆ ಹಾಗೂ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕೆಪಿಸಿಸಿಯು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಕಾರ್ಯಪಡೆ ಸಮಿತಿಯನ್ನು ರಚನೆ ಮಾಡಿದ್ದು, ಚಾಮರಾಜನಗರದ ಸಮಿತಿಗೆ ಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಚೇರಿಯಲ್ಲಿ ಶನಿವಾರ ಧ್ರುವನಾರಾಯಣ ಅವರ ನೇತೃತ್ವದಲ್ಲಿ ಸಮಿತಿಯ ಮೊದಲ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಧ್ರುವನಾರಾಯಣ ಅವರು, ‘ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಜನರಿಗೆ ಸಹಾಯ ಹಸ್ತ ನೀಡುವ ಜೊತೆಗೆ ಕೋವಿಡ್-19 ವಿರುದ್ದ ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ತೊಡಗಬೇಕು’ ಎಂದು ಹೇಳಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್-19 ವಿರುದ್ದ ಹೋರಾಟ ನಡೆಸಲು ಎಲ್ಲ ರೀತಿಯಲ್ಲೂ ನಿರ್ದೇಶನ ನೀಡುತ್ತಿವೆ. ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಕೂಡ ಈ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಹಂತದಲ್ಲಿ ಪಕ್ಷದಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕಾರ್ಯ ಪಡೆ ಸಮಿತಿ ರಚನೆ ಮಾಡಿ, ಕೃಷ್ಣ ಬೈರೇಗೌಡರನ್ನು ರಾಜ್ಯದ ಅಧ್ಯಕ್ಷರನ್ನು ನೇಮಕ ಮಾಡಿದೆ’ ಎಂದರು.

ADVERTISEMENT

‘ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಕಾರ್ಯನಿರ್ವಹಿಸಬೇಕು. ಕೊರೊನಾ ವೈರಸ್ ವಿರುದ್ದ ಜನರಲ್ಲಿ ಅರಿವು ಮೂಡಿಸಿ, ಜ್ವರ, ಕೆಮ್ಮು, ನೆಗಡಿ, ಇತರೇ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವಂತೆ ತಿಳಿ ಹೇಳಬೇಕು. ಗ್ರಾಮಕ್ಕೆ ಹೊಸದಾಗಿ ಇತರೇ ಜಿಲ್ಲೆ ಹಾಗು ರಾಜ್ಯಗಳಿಂದ ಬಂದಿದ್ದರೆ ಅವರನ್ನು ತಕ್ಷಣ ತಪಾಸಣೆ ಮಾಡಿಸಿ, ದೃಢಪಡಿಸಿಕೊಂಡು ಬಳಿಕ ಗ್ರಾಮದೊಳಗೆ ಬಿಟ್ಟುಕೊಳ್ಳಬೇಕು. ಅಲ್ಲದೇ ಇಡೀ ದೇಶಕ್ಕೆ 21 ದಿನಗಳ ಕಾಲ ದಿಗ್ಬಂಧನ ಹೇರಲಾಗಿದೆ.ಆಗಿದೆ. ಈ ಸಂದರ್ಭದಲ್ಲಿ ನಿರ್ಗತಿಕರು, ಕಡು ಬಡವರಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು’ ಎಂದು ಧ್ರುವನಾರಾಯಣ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ. ಮರಿಸ್ವಾಮಿ,ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ ಹಾಗೂ ಮುಖಂಡ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು.

ಚಾಮುಲ್ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಹೇಶ್, ಸದಸ್ಯರಾದ ಕೆರೆಹಳ್ಳಿ ನವೀನ್, ಕೆ.ಪಿ.ಸದಾಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಎ.ಎಸ್.ಗುರುಸ್ವಾಮಿ, ತೋಟೇಶ್, ಮುನಿರಾಜು, ಹೊಂಗನೂರು ಚಂದ್ರು, ರಾಜಶೇಖರ್, ಕೆಪಿಸಿಸಿ ಸದಸ್ಯ ಸೈಯದ್ ರಫಿ, ಮುಖಂಡರಾದ ಎಚ್.ಎಸ್. ನಂಜಪ್ಪ, ಅರುಣ್, ಚಿಕ್ಕಮಹದೇವ್, ಆರ್. ಮಹದೇವ್ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.