ADVERTISEMENT

ಸಾಲೂರು ಮಠಕ್ಕೆ ಉತ್ತರಾಧಿಕಾರಿ: ತಡೆಯಾಜ್ಞೆ ರದ್ದು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 12:08 IST
Last Updated 4 ಆಗಸ್ಟ್ 2020, 12:08 IST

ಕೊಳ್ಳೇಗಾಲ: ಮಹದೇಶ್ವರ ಬೆಟ್ಟದ ಸಾಲೂರು ಮಠಕ್ಕೆ ತಮ್ಮ ಅನುಪಸ್ಥಿತಿಯಲ್ಲಿ ಉತ್ತರಾಧಿಕಾರಿಯನ್ನು ನೇಮಕ ಮಾಡುವ ಪ್ರಕ್ರಿಯೆಗೆ ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಅವರು ತಂದಿದ್ದ ತಡೆಯಾಜ್ಞೆಯನ್ನು ಇಲ್ಲಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯ ರದ್ದುಗೊಳಿಸಿದೆ.

ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿಯಾಗಿರುವಇಮ್ಮಡಿ ಮಹದೇವಸ್ವಾಮಿ ಅವರು ಜೈಲಿನಲ್ಲಿ ಇದ್ದಾರೆ. ಘಟನೆಯ ನಂತರ ಮಠದ ಭಕ್ತ ಮಂಡಳಿ, 20 ಹಳ್ಳಿಗಳು ಮತ್ತು ತಮಿಳುನಾಡಿನ 33 ಹಳ್ಳಿಗಳ ಬೇಡಗಂಪಣ ಮುಖಂಡರು ಸಭೆ ನಡೆಸಿ ಇಮ್ಮಡಿ ಮಹದೇವಸ್ವಾಮಿ ಅವರನ್ನು ಪೀಠದಿಂದ ಇಳಿಸಬೇಕು ಎಂದು ಒತ್ತಾಯಿಸಿದ್ದರು. ಇದರ ನಡುವೆಯೇ ಉತ್ತರಾಧಿಕಾರಿ ಆಯ್ಕೆಗೆ ಸಮಿತಿಯನ್ನೂ ರಚಿಸಲಾಗಿತ್ತು.

ಉತ್ತರಾಧಿಕಾರಿ ನೇಮಕದ ವಿರುದ್ಧಇಮ್ಮಡಿ ಮಹದೇವಸ್ವಾಮಿ ಅವರು 2019ರ ಆಗಸ್ಟ್‌ನಲ್ಲಿ ಕೊಳ್ಲೇಗಾಲದ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯವು ಉತ್ತರಾಧಿಕಾರಿ ಆಯ್ಕೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.

ADVERTISEMENT

ಸೋಮವಾರ ನ್ಯಾಯಾಧೀಶ ಸಂತೋಷ್ ಕೊಠಾರಿ ಅವರು, ‘ಈ ಪ್ರಕರಣ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದ್ದಾರೆ.

ಇದರಿಂದಾಗಿ ಉತ್ತರಾಧಿಕಾರಿ ಆಯ್ಕೆ ಸುಗಮವಾದಂತಾಗಿದೆ. ಇಮ್ಮಡಿ ಮಹದೇವಸ್ವಾಮಿ ಅವರಿಗೆ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.