ADVERTISEMENT

ಕೋವಿಡ್‌ ಗೆದ್ದವರು | ಜನರಲ್ಲಿ ತಿಳಿವಳಿಕೆ ಮೂಡಬೇಕಿದೆ

ಕೋವಿಡ್‌ ಗೆದ್ದವರ ಕಥೆಗಳು

ಮಹದೇವ್ ಹೆಗ್ಗವಾಡಿಪುರ
Published 30 ಜುಲೈ 2020, 13:29 IST
Last Updated 30 ಜುಲೈ 2020, 13:29 IST
   

ಸಂತೇಮರಹಳ್ಳಿ: ಕೋವಿಡ್‌–19ನಿಂದ ಗುಣಮುಖರಾಗಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವಭಾಸ್ಕರ್ ಉಮ್ಮತ್ತೂರು ಅವರು ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ ಜೊತೆ ಹಮ್ಮಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿಯೇ ನೆಮ್ಮದಿಯಾಗಿದ್ದೆ. ಕೋವಿಡ್‌ನಿಂದ ಗುಣಮುಖನಾಗಿ ಮನೆಗೆ ಬಂದಿದ್ದರೂ ಗ್ರಾಮದಲ್ಲಿ ಯಾರೂ ಸರಿಯಾಗಿ ಮಾತನಾಡಿಸುತ್ತಿಲ್ಲ ಎಂದು ಬೇಸರವಾಗುತ್ತಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ಗ್ರಾಮ ಪಂಚಾಯಿತಿಯವರು ಕೋವಿಡ್‌ ಪರೀಕ್ಷೆ ಮಾಡಿಸುವಂತೆ ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದರು. 3ನೇ ದಿನಕ್ಕೆ, ‘ನಿಮಗೆ ಕೋವಿಡ್ ಇದೆ’ ಎಂದು ತಿಳಿಸಿದರು. ನನಗೆ ಕೋವಿಡ್‌–19 ರೋಗದ ಯಾವುದೇ ಲಕ್ಷಣ ಇರಲಿಲ್ಲ. ಇದರಿಂದಾಗಿ ಭಯ ಆಗಲಿಲ್ಲ.

ADVERTISEMENT

ಮನೆಗೆ ಬಂದು ಚಾಮರಾಜನಗರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮೊದಲು ಭಯ ಆಯಿತು. ಆಸ್ಪತ್ರೆ ಸೇರಿದ ಮೇಲೆ ವೈದ್ಯರು, ನರ್ಸ್‍ಗಳು ಧೈರ್ಯ ತುಂಬಿ ಭಯ ಹೋಗಲಾಡಿಸಿದರು. ಅಲ್ಲಿರುವಷ್ಟು ದಿವಸ ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ಮಾತ್ರೆ ನೀಡಿದರು. ಸ್ನಾನಕ್ಕೆ ಬಿಸಿನೀರು ಸಿಗುತ್ತಿತ್ತು. ಅಲ್ಲಿರುವಷ್ಟು ದಿವಸ ಯಾವುದೇ ಸಮಸ್ಯೆಯೂ ಬಾರದಂತೆ ದಿನಗಳನ್ನು ಕಳೆದೆ.

ಪ್ರತಿದಿನ ಪರೀಕ್ಷೆ ನಡೆಸುತ್ತಿದ್ದರು. ನಾಲ್ಕು ದಿನಗಳ ನಂತರ ನಿಮಗೆ ಯಾವುದೇ ಕಾಯಿಲೆ ಇಲ್ಲ ಎಂದು ವೈದ್ಯರು ತಿಳಿಸಿದರು. ಇದರಿಂದ ಮತ್ತಷ್ಟು ಸಂತೋಷವಾಯಿತು. ಜತೆಗೆ ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳ ಜೊತೆಗೂಡಿ ಆನಂದವಾಗಿದ್ದೆ.

ಇದೀಗ ಗ್ರಾಮಕ್ಕೆ ಬಂದು ವಾರ ಕಳೆದಿದೆ. ಗ್ರಾಮದವರು ಇಂದಿಗೂ ಸರಿಯಾಗಿ ಮಾತನಾಡಿಸುತ್ತಿಲ್ಲ. ಅವರಿಗೆ ಸೋಂಕಿನ ಬಗ್ಗೆ ಭಯ ಜಾಸ್ತಿಯಾಗಿದೆ. ತಪ್ಪು ಅವರದ್ದಲ್ಲ. ಸೋಂಕು ತಗುಲಬಹುದು ಎಂಬ ಭಯದಿಂದ ನನ್ನನ್ನು ನೋಡಲು, ಮಾತನಾಡಿಸಲು ಹೆದರುತ್ತಿದ್ದಾರೆ.

ಕೋವಿಡ್‌–19 ಎಂದರೆ ಭಯ ಪಡುವಂತಹದ್ದು ಏನೂ ಇಲ್ಲ. ಅದರ ಬಗ್ಗೆ ತಿಳಿವಳಿಕೆ ಮುಖ್ಯ. ಸೋಂಕಿನ ಬಗ್ಗೆ ಅರಿವಿಲ್ಲದೇ ಗ್ರಾಮೀಣ ಭಾಗಗಳಲ್ಲಿ ಜನರು ಕಾಯಿಲೆಗೆ ತುತ್ತಾದವರ ಬಗ್ಗೆ ತಾತ್ಸಾರವಾಗಿ ಕಾಣುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.