ADVERTISEMENT

ಚಾಮರಾಜನಗರ: ಕೋವಿಡ್‌ ಭೀತಿಗೆ ರಸ್ತೆಗಳು ಬಂದ್‌

ಹಲವೆಡೆ ಸ್ವಯಂ ನಿಯಂತ್ರಣ ಹೇರಿಕೊಂಡ ಸಾರ್ವಜನಿಕರು

ಕೆ.ಎಸ್.ಗಿರೀಶ್
Published 14 ಮೇ 2021, 7:08 IST
Last Updated 14 ಮೇ 2021, 7:08 IST
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿಯ ನಾಯಕರ ಬಡಾವಣೆಯಲ್ಲಿ ಜನರು ಓಡಾಡಬಾರದು ಎಂದು ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ರಸ್ತೆಯನ್ನು ಬಂದ್ ಮಾಡಿರುವುದು
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿಯ ನಾಯಕರ ಬಡಾವಣೆಯಲ್ಲಿ ಜನರು ಓಡಾಡಬಾರದು ಎಂದು ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ರಸ್ತೆಯನ್ನು ಬಂದ್ ಮಾಡಿರುವುದು   

ಚಾಮರಾಜನಗರ: ಜಿಲ್ಲಾಡಳಿತ ಏನೇ ಕ್ರಮ ಕೈಗೊಂಡರೂ ಕೊರೊನಾ ಸೋಂಕಿನ ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಾಗುತ್ತಿಲ್ಲ. ಮಂಗಳವಾರ ಮತ್ತು ಅಮಾವಾಸ್ಯೆ ಎಂಬ ಕಾರಣಕ್ಕೆ ಕೋವಿಡ್ ತಪಾಸಣೆಗೆ ಜನರೇ ಬರಲಿಲ್ಲ. ಇದರಿಂದ ಸಹಜವಾಗಿಯೇ ಅಂದು ಕಡಿಮೆ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಆದರೆ, ನಂತರ ಮತ್ತೆ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಸಾಮಾನ್ಯವಾಗಿ ಹಳ್ಳಿಗಳಲ್ಲೇ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಗ್ರಾಮಸ್ಥರು ಸ್ವಯಂ ನಿರ್ಬಂಧ ಹೇರಿಕೊಳ್ಳಲು ಮುಂದಾಗಿದ್ದಾರೆ. ಕಳೆದ ವರ್ಷ ಜಿಲ್ಲಾಡಳಿತ ಕೊರೊನಾ ಸೋಂಕಿನ ಒಂದೇ ಒಂದು ಪ್ರಕರಣ ಕಂಡು ಬಂದರೂ ಸಂಪೂರ್ಣ ಬೀದಿಯನ್ನೇ ಸೀಲ್‌ಡೌನ್‌ ಮಾಡುತ್ತಿತ್ತು. ಈಗಲೂ ಇದೇ ಬಗೆಯ ಕ್ರಮಕ್ಕೆ ಸ್ಥಳೀಯರು ಮುಂದಾಗಿರುವುದು ಜಿಲ್ಲೆಯ ಹಲವೆಡೆ ಕಂಡು ಬಂದಿವೆ. ಆದರೆ, ಈ ಬಾರಿ ಸೋಂಕು ಇಲ್ಲದ ಬೀದಿಗಳು ಸೀಲ್‌ಡೌನ್‌ಗೆ ಒಳಗಾಗಿರುವುದು ವಿಶೇಷ.

ಸೋಂಕಿತರು ತಮ್ಮ ಬೀದಿಗೆ ಬಂದು ಸೋಂಕನ್ನು ಹರಡಬಹುದು ಎಂಬ ಭೀತಿಯಿಂದಹರದನಹಳ್ಳಿಯ ಹಲವು ಬೀದಿಗಳಲ್ಲಿ ಜನರೇ ಬೀದಿಗಳಿಗೆ ಮರಗಳನ್ನು ಅಡ್ಡಹಾಕಿ ಸಂಚಾರ ಬಂದ್ ಮಾಡಿದ್ದಾರೆ. ಕೆಲವೆಡೆ ಹಗ್ಗ ಕಟ್ಟಿದ್ದಾರೆ, ಮತ್ತೆ ಕೆಲವೆಡೆ ಮುಳ್ಳು ಹಾಕಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಮಶೆಟ್ಟಿ, ‘ಸರ್ಕಾರ ಲಾಕ್‌ಡೌನ್‌ ಹೇರಿದೆ. ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ನಂತರ ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಿಸಿದೆ. ಈಗ ಜಿಲ್ಲಾಡಳಿತ ವಾರದ 4 ದಿನ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಆದರೆ, ಇವುಗಳ ಹೊರತಾಗಿಯೂ ಜನರು ಬೀದಿಗಳಲ್ಲಿ ಯಾವುದೇ ಭೀತಿ ಇಲ್ಲದೇ ಸಂಚರಿಸುತ್ತಿದ್ದಾರೆ. ಇದನ್ನು ತಡೆಯಲು ಈ ರೀತಿ ನಾವೇ ಸ್ವಯಂಪ್ರೇರಿತರಾಗಿ ರಸ್ತೆ ಬಂದ್ ಮಾಡಿದ್ದೇವೆ’ ಎಂದರು.

ಚಾಮರಾಜನಗರದ ಉಪ್ಪಾರ ಬಡಾವಣೆಯ ಕೆಲವು ಬೀದಿಗಳನ್ನೂ ಇದೇ ಬಗೆಯಲ್ಲಿ ನಿವಾಸಿಗಳು ಬಂದ್ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿರುವುದರಿಂದ ಗ್ರಾಮಾಂತರ ಪ್ರದೇಶಗಳ ಜನರು ವಾಹನಗಳಲ್ಲಿ ಇಲ್ಲಿಗೆ ಬರಬಾರದು ಎಂಬ ಉದ್ದೇಶಕ್ಕೆ ಅಲ್ಲಲ್ಲಿ ಬಂದ್ ಮಾಡಿದ್ದಾರೆ.

ಇದೇ ರೀತಿ ಕುರುಬರ ಬೀದಿ ಸೇರಿದಂತೆ ಹಲವೆಡೆ ಈ ತೆರನಾದ ನಿರ್ಬಂಧಗಳನ್ನು ನಾಗರಿಕರೇ ಹೇರಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.