ADVERTISEMENT

ಬಿಜೆಪಿಯ ಮಾಜಿ ಶಾಸಕ ಸಿ.ಗುರುಸ್ವಾಮಿ ಕೋವಿಡ್‌ನಿಂದ ನಿಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 3:59 IST
Last Updated 19 ಆಗಸ್ಟ್ 2020, 3:59 IST
ಗುರುಸ್ವಾಮಿ
ಗುರುಸ್ವಾಮಿ   

ಚಾಮರಾಜನಗರ: ಕೋವಿಡ್‌ಗೆತುತ್ತಾಗಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸಿ. ಗುರುಸ್ವಾಮಿ (68) ಅವರು ಬುಧವಾರ ಬೆಳಿಗ್ಗೆ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಆಗಸ್ಟ್ 5ರಂದು ಅವರಲ್ಲಿ ಸೋಂಕು ದೃಢಪಟ್ಟಿತ್ತು.ಹೃದಯಾಘಾತದಿಂದ ಅವರು ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ವೃತ್ತಿಯಲ್ಲಿ ವಕೀಲರಾಗಿದ್ದ ಸಿ. ಗುರುಸ್ವಾಮಿಯವರು ಹಿರಿಯ ರಾಜಕೀಯ ನಾಯಕ, ಕೇಂದ್ರದ ಮಾಜಿ ಸಚಿವ ರಾಜಶೇಖರಮೂರ್ತಿಯವರ ಶಿಷ್ಯರಾಗಿದ್ದರು.ಜನತಾ ಪಕ್ಷ, ಜನತಾದಳದಿಂದ ರಾಜಕೀಯ ಜೀವನ ಆರಂಭಿಸಿದ್ದರು. ರಾಜಶೇಖರಮೂರ್ತಿಯವರು ಬಿಜೆಪಿ ಸೇರಿದ ಸಂದರ್ಭದಲ್ಲಿ ಗುರುಸ್ವಾಮಿ ಅವರೂ ಬಿಜೆಪಿ ಸೇರಿದರು.

ADVERTISEMENT

ಬಿಜೆಪಿಯ ಮೊದಲ‌ ಶಾಸಕ: 1999ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಾಮರಾಜನಗರ ಕ್ಷೇತ್ರದಿಂದ ಗೆದ್ದಿದ್ದರು.ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರನ್ನು ಸೋಲಿಸಿದ್ದರು.

ಚಾಮರಾಜನಗರ ಕ್ಷೇತ್ರದ ಮೊದಲ ಬಿಜೆಪಿ ಶಾಸಕ ಅವರು.

1999-2004ರ ಅವಧಿ ಮುಗಿದ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಗುರುಸ್ವಾಮಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. ನಂತರ ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿ ಜೊತೆ ಕೈ ಜೋಡಿಸಿದ್ದರು.

ಗುರುಸ್ವಾಮಿ ಅವರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಸೇರಿದಂತೆ ಇಬ್ಬರು ಪುತ್ರಿಯರು, ಪತ್ನಿ ಶೀಲ ಇದ್ದಾರೆ.

ಅಂತ್ಯಕ್ರಿಯೆ ಅವರ ಸ್ವಗ್ರಾಮ ತಾಲ್ಲೂಕಿನ ಯಾನಗಹಳ್ಳಿಯ ತೋಟದಲ್ಲಿ ಕೋವಿಡ್ ಶಿಷ್ಟಾಚಾರದಂತೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.