ADVERTISEMENT

ಕಾಡಾನೆ ಹಿಂಡು ದಾಳಿಯಿಂದ ಫಸಲು ನಾಶ; ರೈತನಿಗೆ ನಷ್ಟ

ಹನೂರು ತಾಲ್ಲೂಕಿನ ರಾಮನಗುಡ್ಡದ ಶಿವಣ್ಣ ‌ಜಮೀನುಗಳಿಗೆ ನುಗ್ಗಿದ ಏಳು ಆನೆಗಳು, ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 15:46 IST
Last Updated 27 ಸೆಪ್ಟೆಂಬರ್ 2020, 15:46 IST
ಆನೆಗಳ ದಾಳಿಯಿಂದ ಜೋಳ ಬೆಳೆ ನಾಶವಾಗಿರುವುದು
ಆನೆಗಳ ದಾಳಿಯಿಂದ ಜೋಳ ಬೆಳೆ ನಾಶವಾಗಿರುವುದು   

ಹನೂರು: ತಾಲ್ಲೂಕಿನ ರಾಮನಗುಡ್ಡೆ ಕೆರೆ ಸಮೀಪವಿರುವ ಶಿವಣ್ಣ ಎಂಬುವವರ ಜಮೀನಿಗೆ ಶನಿವಾರ ನುಗ್ಗಿದ ಕಾಡಾನೆಗಳ ಹಿಂಡು ಮುಸುಕಿನ ಜೋಳ ಹಾಗೂ ಬಾಳೆ ಪಸಲನ್ನು ತುಳಿದು ನಾಶಗೊಳಿಸಿವೆ.

ಕಾವೇರಿ ವನ್ಯಧಾಮದ ಕೊತ್ತನೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿರುವ ರಾಮನಗುಡ್ಡ ಕೆರೆ ಸಮೀಪದ ಬಿ.ಗುಂಡಾಪುರ ಗ್ರಾಮದ ಶಿವಣ್ಣ ಸ್ವಂತ ಜಮೀನು ಹಾಗೂ ಗುತ್ತಿಗೆ ಆಧಾರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಜಮೀನಿನಲ್ಲಿ ಕಟಾವು ಹಂತಕ್ಕೆ ಬಂದಿದ್ದ ಮುಸುಕಿನ ಜೋಳವನ್ನು ತಿಂದು ನಾಶಗೊಳಿಸಿರುವುದಲ್ಲದೇ ಮತ್ತೊಂದು ಜಮೀನಿನಲ್ಲಿ ಬೆಳೆಯಲಾಗಿದ್ದ ಫಲ ಬರುವ ಹಂತದಲ್ಲಿದ್ದ ಮುಸುಕಿನ ಜೋಳ ಹಾಗೂ ಇತ್ತೀಚೆಗೆ ನಾಟಿ ಮಾಡಿದ್ದ ಬಾಳೆ ಗಿಡಗಳನ್ನು ಕಿತ್ತು ಹಾಕಿವೆ.

ADVERTISEMENT

‘ಹತ್ತು ವರ್ಷಗಳಿಂದಲೂ ಇಲ್ಲಿ ಬೇಸಾಯ ಮಾಡುತ್ತಾ ಬಂದಿದ್ದೇನೆ. ಆದರೆ ಫಸಲು ಕಾಟವಿಗೆ ಬಂದ ಪ್ರತಿ ಬಾರಿಯೂ ಇದೇ ರೀತಿ ಕಾಡಾನೆಗಳಿಗೆ ತುತ್ತಾಗುತ್ತಿದೆ’ ಎಂದು ರೈತ ಶಿವಣ್ಣ ಅಳಲು ತೋಡಿಕೊಂಡರು.

ಶನಿವಾರ ರಾತ್ರಿ 10 ಗಂಟೆ ವೇಳೆಗೆ ಜಮೀನಿಗೆ ದಾಳಿ ಮಾಡಿ ಕಟಾವು ಹಂತದಲ್ಲಿದ್ದ ಮುಸುಕಿನ ಜೋಳವನ್ನು ತಿಂದು ದೊಡ್ಡದಾಗಿ ಸದ್ದು ಮಾಡುತ್ತಿದ್ದ ಸಮಯದಲ್ಲಿ ತೋಟದ ಮನೆಯಲ್ಲಿದ್ದ ಸಾಕು ನಾಯಿಗಳು ಬೊಗಳಲು ಪ್ರಾರಂಭಿಸಿವೆ. ಈ ವೇಳೆ ಎದ್ದು ಬಂದು ಜಮೀನಿನ ಸುತ್ತಾ ಕಣ್ಣು ಹಾಯಿಸಿದಾಗ 2 ಮರಿ ಆನೆಗಳ ಜೊತೆಗೆ 5 ದೊಡ್ಡ ಆನೆಗಳು ಬೆಳೆಯನ್ನು ನಾಶಗೊಳಿಸುತ್ತಿರುವುದನ್ನು ಕಂಡು ಅರಣ್ಯ ಇಲಾಖೆಯವರಿಗೆ ದೂರವಾಣಿ ಮುಖಾಂತರ ಹೇಳಿದೆ. ಅದಕ್ಕೆ ಅವರು ರಾತ್ರಿ ಸಮಯದಲ್ಲಿ ಬರುವುದು ತಡವಾಗುತ್ತದೆ ಪಟಾಕಿಗಳನ್ನು ಸಿಡಿಸಿ ಓಡಿಸಿ ಎಂದರು. ಅವರು ಹೇಳಿದಂತೆ ಪಟಾಕಿ ಸಿಡಿಸಿದಾಗ ಮರಿ ಆನೆ ಇದ್ದರಿಂದ ಎಲ್ಲೆಂದರಲ್ಲಿ ಅಡ್ಡಾಡಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ಕಾಡಾನೆಗಳ ಕಾಲ್ತುಳಿತಕ್ಕೆ ನಷ್ಟ ಉಂಟಾಗಿವೆ’ ಎಂದು ಅವರು ಆರೋಪಿಸಿದರು.

ಅರಣ್ಯದಂಚಿನಲ್ಲೇ ಇರುವ ಜಮೀನಿಗೆ ಆಗಾಗ್ಗೆ ಕಾಡಾನೆಗಳು ದಾಳಿ ನಡೆಸುತ್ತಿರುವ ಬಗ್ಗೆ ರೈತರು ಅನೇಕ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಈ ಬಗ್ಗೆ ಕ್ರಮವಹಿಸುವಂತೆ ಮನವಿ ಮಾಡಿದ್ದರೂ ಅರಣ್ಯಇಲಾಖೆಯವರು ನಿರ್ಲಕ್ಷ್ಯ ವಹಿಸಿರುವುದರಿಂದ ಪ್ರತಿ ದಿನ ಆತಂಕದಲ್ಲೇ ದಿನ ಕಳೆಯಬೇಕಾಗಿದೆ. ಒಂದು ವರ್ಷದಲ್ಲಿ ಐದು ಬಾರಿ ಕಾಡಾನೆಗಳು ದಾಳಿ ನಡೆಸಿ ಆಗಾಗ್ಗೆ ಬೆಳೆ ಹಾಗೂ ನೀರಿನ ಪೈಪ್‍ಗಳನ್ನು ಒಡೆದು ಹಾಕಿವೆ. ಇದರಿಂದ ನಷ್ಟ ಉಂಟಾಗಿದೆ. ಕಳೆದ ರಾತ್ರಿ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ಹೀಗೆ ಪ್ರತಿ ವರ್ಷ ಬೆಳೆದ ಫಸಲು ಕಾಡಾನೆಗಳ ಪಾಲಾಗುತ್ತಿದ್ದರೆ ನಾವು ಬದುಕುವುದಾದರೂ ಹೇಗೆ’ ಎಂದು ರೈತ ಶಿವಣ್ಣ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

ಪ್ರತಿಕ್ರಿಯೆಗಾಗಿ ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್.ರಮೇಶ್ ಅವರಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.