ಚಾಮರಾಜನಗರ: ಜಿಲ್ಲಾಡಳಿತ ಶೀಘ್ರ ಜಿಲ್ಲಾಮಟ್ಟದ ಪರಿಶಿಷ್ಟ ಜಾತಿ ಪಂಗಡಗಳ ಹಿತರಕ್ಷಣಾ ಸಮಿತಿ ಸಭೆ ಕರೆಯದಿದ್ದರೆ ಸಮುದಾಯ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ್ ಬಣ) ಜಿಲ್ಲಾ ಸಂಯೋಜಕ ಸಿ.ಎಂ. ಶಿವಣ್ಣ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ‘ಜಿಲ್ಲಾ ಮಟ್ಟದ ಎಸ್‌ಸಿ, ಎಸ್‌ಟಿ, ಹಿತರಕ್ಷಣಾ ಸಮಿತಿ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಪರಿಶಿಷ್ಟ ಜಾತಿಯವರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ನ್ಯಾಯ ದೊರೆತಿಲ್ಲ. ಜಿಲ್ಲಾ ಮಟ್ಟದ ಸಭೆ ಕರೆದರೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಹಾಯವಾಗುತ್ತದೆ, ಆದರೆ, ಜಿಲ್ಲಾಡಳಿತ ಸಭೆ ನಡೆಸಲು ಆಸಕ್ತಿ ತೋರುತ್ತಿಲ್ಲ. ದಲಿತ ಸಮುದಾಯಗಳ ಹಿತದೃಷ್ಟಿಯಿಂದ ಸಭೆ ನಡೆಸಿ ಅಹವಾಲು ಆಲಿಸಿ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮುಖಂಡರಾದ ಹರದನಹಳ್ಳಿ ರಾಮಚಂದ್ರ ನಾಯಕ, ಕೃಷ್ಣರಾಜು, ಸೋಮು ಮಲ್ಲಯ್ಯನಪುರ, ಮಲ್ಲಿಕಾರ್ಜುನ, ಶಿವು ಕೊತ್ತಲವಾಡಿ, ಆಟೋ ಉಮೇಶ್, ಉಮೇಶ್ ಕುಮಾರ್, ಮಹದೇವಸ್ವಾಮಿ, ರಂಗಸ್ವಾಮಿ, ರವಿಕುಮಾರ್, ಮಹೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.