
ಚಾಮರಾಜನಗರ: ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಮಂಗಳವಾರ ಜಿಲ್ಲಾಡಳಿತ ಭವನದ ಮುಂಭಾಗ ಆರ್‌ಎಸ್‌ಎಸ್ ಸಂಘಟನೆಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
‘ಸಂವಿಧಾನ, ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ ಗಂಡಾಂತರದಲ್ಲಿದ್ದು, ಸರ್ವಾಧಿಕಾರ ಪ್ರಜಾಪ್ರಭುತ್ವದ ಮುಖವಾಡ ಧರಿಸಿದೆ’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ್ ಬಣ) ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಅಭಿಪ್ರಾಯಪಟ್ಟರು.
ದೇಶದಲ್ಲಿ ಕೋಮುವಾದ, ಮನುವಾದ, ಜಾತಿವಾದ ಹೆಚ್ಚಾಗಿದ್ದು ದ್ವೇಷ, ಪ್ರತೀಕಾರ, ಮತ್ಸರ, ಹಿಂಸೆಯ ವಿಷವನ್ನು ಬಿತ್ತಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡಲಾಗುತ್ತಿದೆ ಎಂದರು.
‘ಆರ್‌ಎಸ್‌ಎಸ್ ಸಂಘಟನೆಯು ಮತೀಯವಾದಿ, ರಾಷ್ಟ್ರವಿರೋಧಿ, ಸಂವಿಧಾನ-ಪ್ರಜಾಪ್ರಭುತ್ವ ವಿರೋಧಿಯಾಗಿ ವರ್ತಿಸುತ್ತದೆ. ಶತಮಾನೋತ್ಸವ ಸಂದರ್ಭದಲ್ಲಿ ಮನುಧರ್ಮಶಾಸ್ತ್ರವನ್ನು ಭಾರತದ ಕಾನೂನಾಗಿಸಲು ಸಂಚು ರೂಪಿಸುತ್ತಿದೆ’ ಎಂದು ಆರೋಪಿಸಿದರು.
‘ಆರ್‌ಎಸ್‌ಎಸ್ ಸಂಘಟನೆಯನ್ನು ವಿರೋಧಿಸಿದ್ದಕ್ಕೆ ಪ್ರತಿಯಾಗಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾ ಬರಹ ಹಾಕಲಾಗುತ್ತಿದ್ದು ಜೀವ ಬೆದರಿಕೆಯೊಡ್ಡಲಾಗುತ್ತಿದೆ. ದಲಿತ ಸಮುದಾಯಕ್ಕೆ ಸೇರಿರುವ ಪ್ರಿಯಾಂಕ್ ಖರ್ಗೆಯ ರಾಜಕೀಯ ಏಳ್ಗೆ ಸಹಿಸದ ಮನುವಾದಿಗಳು ಅವಮಾನಿಸುತ್ತಿದ್ದಾರೆ’ ಎಂದು ಟೀಕಿಸಿದರು.
‘ಮನುವಾದಿಗಳ ಧೋರಣೆ ದಲಿತ ಸಮುದಾಯಗಳ ವಿರೋಧಿಯಾಗಿದ್ದು ಆರ್.ಎಸ್.ಎಸ್ ಸಂಘಟನೆ ಪ್ರಿಯಾಂಕ್ ಖರ್ಗೆ ವಿರುದ್ಧ ವಿರುದ್ಧ ಹೇಳಿಕೆ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡುವುದಾಗಿ’ ಶಿವಣ್ಣ ಎಚ್ಚರಿಸಿದರು.
ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನಾ ಸಂಚಾಲಕ ರಂಗಸ್ವಾಮಿ, ಖಜಾಂಚಿ ರವಿಕುಮಾರ್, ತಾಲ್ಲೂಕು ಅಧ್ಯಕ್ಷ ಕೊತ್ತಲವಾಡಿ ಶಿವು, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಮರಿಸ್ವಾಮಿ, ಯಳಂದೂರು ಅಧ್ಯಕ್ಷ ಮಲ್ಲಿಕಾರ್ಜುನ, ಪುಟ್ಟಬಸಮ್ಮ, ಚಿಕ್ಕತಾಯಮ್ಮ, ನಾಗಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.