ADVERTISEMENT

ಅಂಬೇಡ್ಕರ್‌ಗೆ ಅಪಮಾನ: ನ್ಯಾಯಾಧೀಶರ ವಜಾಕ್ಕೆ ಆಗ್ರಹ

ಮಲ್ಲಿಕಾರ್ಜುನಗೌಡ ನಡೆಗೆ ತೀವ್ರ ಆಕ್ರೋಶ; ಕಠಿಣ ಕ್ರಮಕ್ಕೆ ಸಂಘಟನೆಗಳಿಂದ ಮನವಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 16:39 IST
Last Updated 28 ಜನವರಿ 2022, 16:39 IST
ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ ವಾದ) ಪದಾಧಿಕಾರಿಗಳು ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿಗೆ ಮನವಿ ಸಲ್ಲಿಸಿದರು
ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ ವಾದ) ಪದಾಧಿಕಾರಿಗಳು ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿಗೆ ಮನವಿ ಸಲ್ಲಿಸಿದರು   

ಚಾಮರಾಜನಗರ: ‘ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಾರೆ. ಅವರನ್ನು ನ್ಯಾಯಾಧೀಶರ ಹುದ್ದೆಯಿಂದ ವಜಾಗೊಳಿಸಬೇಕು’ ಎಂದು ಜಿಲ್ಲೆಯ ದಲಿತ ಸಂಘರ್ಷ ಸಮಿತಿಗಳು ಆಗ್ರಹಿಸಿವೆ.

ಈ ಸಂಬಂಧ,ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ದಲಿತ ಸಂಘರ್ಷ ಸಮಿತಿಯು ಜಿಲ್ಲಾಡಳಿತದ ಮೂಲಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ ಮಾಡಿವೆ.

ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ) ಮೈಸೂರು ವಿಭಾಗದ ಪ್ರಧಾನ ಸಂಚಾಲಕ ಕೆ.ಸಿದ್ದರಾಜು ದೊಡ್ಡಿಂದುವಾಡಿ ನೇತೃತ್ವದಲ್ಲಿ ನಿಯೋಗವು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿಗೆ ಮನವಿ ಸಲ್ಲಿಸಿತು.

ADVERTISEMENT

‘ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗಣರಾಜ್ಯೋತ್ಸವದ ದಿನದಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ, ಅಂಬೇಡ್ಕರ್‌ ಭಾವಚಿತ್ರವನ್ನು ತೆಗೆಸಿ ಧ್ವಜಾರೋಹಣ ಮಾಡುವ ಮೂಲಕ ಅಂಬೇಡ್ಕರ್‌ಗೆ, ಸಾಂವಿಧಾನಿಕ ಹುದ್ದೆಗೆ ಅಪಮಾನ ಮಾಡಿದ್ದಾರೆ.ಭಾರತ ಪ್ರಜಾಪ್ರಭುತ್ವದ ಬಹುಮುಖ್ಯ ಅಂಗ ನ್ಯಾಯಾಂಗ. ಅಂತಹ ಶ್ರೇಷ್ಠ ನ್ಯಾಯಾಂಗದ ಮುಖ್ಯ ನ್ಯಾಯಾಧೀಶರ ನಡೆ ನಾಗರಿಕ ಸಮಾಜಕ್ಕೆ ತೀವ್ರ ಆತಂಕ, ನೋವುಂಟು ಮಾಡಿದೆ. ಸಂವಿಧಾನದ ಬಗ್ಗೆ, ಸಂವಿಧಾನದ ನಿರ್ಮಾತೃಗಳ ಬಗ್ಗೆ ಇಷ್ಟೊಂದು ಪೂರ್ವಗ್ರಹ ಪೀಡಿತ ಮನಸ್ಥಿತಿ ಇರುವ ನ್ಯಾಯಾಧೀಶರಿಂದ ನಿಷ್ಪಕ್ಷಪಾತ ನ್ಯಾಯವನ್ನು ನಿರೀಕ್ಷಿಸಲು ಹೇಗೆ ಸಾಧ್ಯ’ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.

‘ನ್ಯಾಯಾಲಯದ ಮೇಲೆ ನಾಗರಿಕ ಸಮಾಜ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಸಂವಿಧಾನ ರಚನೆಗೆ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ಅಂಬೇಡ್ಕರ್ ಘನತೆಯನ್ನು ಎತ್ತಿ ಹಿಡಿಯಲು ಈ ಪ್ರಕರಣವನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗಮನಕ್ಕೆ ತಂದು ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಲಾಗಿದೆ.

ಛಲವಾದಿ ಮಹಾಸಭಾದ ರಾಜ್ಯ ನಿರ್ದೇಶಕ ಅಣಗಳ್ಳಿ ಬಸವರಾಜು, ಅಂಬೇಡ್ಕರ್ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್, ಆಲೂರು ನಾಗೇಂದ್ರ, ಚಿನ್ನಪ್ಪ, ಮೂರ್ತಿ, ಬಿ.ಸಿದ್ದಯ್ಯ, ಪಿ.ಪುಟ್ಟಸ್ವಾಮಿ, ಶ್ರೀಕಂಠಮೂರ್ತಿ, ಗಣೇಶ್, ಜಿಲ್ಲಾ ಸಂಚಾಲಕರಾದ ಕೆ.ವೀರ, ಭಾಗ್ಯ, ನಾಗರಾಜು ಇದ್ದರು.

‘ದೇಶದಿಂದ ಗಡಿಪಾರು ಮಾಡಿ’

ದಲಿತ ಸಂಘರ್ಷ ಸಮಿತಿಯ ಇನ್ನೊಂದು ಬಣ ಸಹ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು ನೇತೃತ್ವದಲ್ಲಿ ಮಲ್ಲಿಕಾರ್ಜುನಗೌಡ ಅವರನ್ನು ನ್ಯಾಯಾಧೀಶರ ಹುದ್ದೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರಿಗೆ ಮನವಿ ಸಲ್ಲಿಸಿತು.

‘ಗಣರಾಜ್ಯೋತ್ಸವದಂದು ಅಂಬೇಡ್ಕರ್ ಭಾವಚಿತ್ರ ತೆಗೆಸುವ ಮೂಲಕ ಸಂವಿಧಾನ ಪಿತಾಮಹರಿಗೆ ಅಪಮಾನ ಮಾಡಿರುವ ನ್ಯಾಯಾಧೀಶರ ಮೇಲೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆ, ದೇಶದ್ರೋಹ ಕಾಯ್ದೆಗಳಡಿ ಪ್ರಕರಣ ದಾಖಲಿಸಿ, ದೇಶದಿಂದ ಗಡಿಪಾರು ಮಾಡಬೇಕು. ಸಂವಿಧಾನಾತ್ಮಕ ಹುದ್ದೆಯಿಂದ ವಜಾಗೊಳಿಸಬೇಕು. ಹೈಕೋರ್ಟ್‌ ಮಲ್ಲಿಕಾರ್ಜುನಗೌಡ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಬೇಕು’ ಎಂದು ಸಮಿತಿ ಆಗ್ರಹಿಸಿದೆ.

‘ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮೇಲೆ ಅವರು ಗಳಿಸಿರುವ ಆಸ್ತಿ ವಿವರ ಪಡೆದು ತನಿಖೆ ನಡೆಸಬೇಕು. ಇದುವರೆಗೆ ಅವರು ವಿಚಾರಣೆ ನಡೆಸಿರುವ ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳ ಆದೇಶಗಳನ್ನು ಮರು ಪರಿಶೀಲನೆ ಮಾಡಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಡಿಎಸ್‌ಎಸ್‌ ಜಿಲ್ಲಾ ಸಂಘಟನಾ ಸಂಚಾಲಕರಾದ ಶಿವಕುಮಾರ್ ಕೊಳ್ಳೇಗಾಲ, ದೊರೆಸ್ವಾಮಿ, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ ನಂಜುಂಡಸ್ವಾಮಿ, ಸಂಘಟನಾ ಸಂಚಾಲಕ ರಂಗಸ್ವಾಮಿ ಮಾಡ್ರಹಳ್ಳಿ, ಕೊಳ್ಳೇಗಾಲ ತಾಲ್ಲೂಕು ಸಂಚಾಲಕ ಸುರೇಂದ್ರ ಮಾಂಬಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.