ADVERTISEMENT

ಅಂಗವಿಕಲರಿಗೆ ಒಂದೇ ಸೂರಿನಡಿ ಸೌಲಭ್ಯ ಕಲ್ಪಿಸಲು ಸಬಲೀಕರಣ ಕೇಂದ್ರ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 13:52 IST
Last Updated 28 ಜನವರಿ 2021, 13:52 IST
ಸಭೆಯಲ್ಲಿ ಅಂಗವಿಕಲರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು
ಸಭೆಯಲ್ಲಿ ಅಂಗವಿಕಲರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು   

ಚಾಮರಾಜನಗರ: ಅಂಗವಿಕಲರಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳನ್ನು ನೀಡುವುದಕ್ಕಾಗಿ ಅಂಗವಿಕಲರ ಸಬಲೀಕರಣ ಕೇಂದ್ರವನ್ನು ನಗರದಲ್ಲಿ ಸ್ಥಾಪಿಸಲು ಜಿಲ್ಲಾಡಳಿತ ಉದ್ದೇಶಿಸಿದೆ.ಈ ಕೇಂದ್ರಕ್ಕಾಗಿ ಅಗತ್ಯ ಭೂಮಿಯನ್ನು ಶೀಘ್ರವಾಗಿ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು.

ಗುರುವಾರ ನಡೆದ ಜಿಲ್ಲಾ ಮಟ್ಟದ ಅಂಗವಿಕಲರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ‘ಅಂಗವಿಕಲರು ಒಂದೇ ಕಡೆ ಎಲ್ಲ ಸೌಲಭ್ಯಗಳನ್ನು ಪಡೆಯುವಂತಾಗಬೇಕು. ಅವರನ್ನು ಸ್ವಾವಲಂಬಿಗಳಾಗಿಸುವ ದಿಸೆಯಲ್ಲಿ ತರಬೇತಿ, ಜಾಗೃತಿ ಶಿಬಿರಗಳು ಮತ್ತು ಲಭಿಸಬೇಕಿರುವ ವಿವಿಧ ಸೌಕರ್ಯಗಳು ಒಂದೇ ಕಡೆ ನೀಡಬೇಕು ಎಂಬ ಆಶಯ ಇಟ್ಟುಕೊಂಡು ‌‌ಸಬಲೀಕರಣ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದರು.

‘ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ₹30 ಲಕ್ಷಬಳಕೆ ಮಾಡಿಕೊಳ್ಳಲು ಅನುಮೋದನೆ ದೊರೆತಿದೆ’ ಎಂದರು.

ADVERTISEMENT

ಸಮಸ್ಯೆಗಳನ್ನು ಹೇಳಿಕೊಂಡ ಅಂಗವಿಕಲರು: ಅಂಗವೈಕಲ್ಯ ತಪಾಸಣೆ ಮಾಡಿ ನೀಡುವ ಗುರುತಿನ ಚೀಟಿ ಪಡೆಯಲು ಕಷ್ಟವಾಗುತ್ತಿದೆ. ಕೆಲವು ಕಚೇರಿಗಳು, ಬ್ಯಾಂಕುಗಳಲ್ಲಿ ರ‍್ಯಾಂಪ್‌ಗಳಿಲ್ಲ. ಜಿಲ್ಲಾಡಳಿತದಲ್ಲಿರುವ ಇಲಾಖೆಗಳ ನಾಮಫಲಕಗಳಲ್ಲಿ ಬ್ರೈಲ್‌ ಲಿಪಿಯಲ್ಲಿ ವಿವರಗಳನ್ನು ಬರೆಯಬೇಕು. ಖಾಸಗಿ ಕ್ಷೇತ್ರದಲ್ಲೂ ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನನ್ನು ಅಂಗವಿಕಲರು ಸಭೆಯ ಮುಂದಿಟ್ಟರು.

‘ಅಂಗ ವೈಕಲ್ಯ ತಪಾಸಣೆ ಮಾಡಿ ನೀಡಲಾಗುವ ವಿಶೇಷ ಗುರುತಿನ ಚೀಟಿಗೆ ಅಲೆದಾಡಿಸಬಾರದು. ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಿ ತಕ್ಷಣವೇ ಗುರುತಿನ ಚೀಟಿಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ವಿತರಿಸಬೇಕು. ಜಿಲ್ಲಾ ಆಸ್ಪತ್ರೆ ಮಾತ್ರವಲ್ಲದೇ ತಾಲ್ಲೂಕು ಆಸ್ಪತ್ರೆಗಳಲ್ಲೂ ಗುರುತಿನ ಚೀಟಿ ನೀಡಬೇಕು. ಗುರುತಿನ ಚೀಟಿ ಸೇರಿದಂತೆ ಇತರೆ ಸೌಲಭ್ಯಗಳನ್ನು ತಲುಪಿಸಲು ಆಯಾ ಹೋಬಳಿ ಅಥವಾ ತಾಲ್ಲೂಕು ಕೇಂದ್ರಗಳಲ್ಲಿ ಶಿಬಿರಗಳನ್ನು ಆಯೋಜಿಸಬೇಕು’ ಎಂದರು.

ಎಲ್ಲ ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ತಿಂಗಳೊಳಗೆ ರ‍್ಯಾಂಪ್ ನಿರ್ಮಾಣ ಮಾಡುವಂತೆ ಅವರು ನಿರ್ದೇಶನ ನೀಡಿದರು. ಬ್ರೈಲ್ ಲಿಪಿಯಲ್ಲಿ ಮಾಹಿತಿ ಪ್ರಕಟಿಸುವ ಫಲಕ ಅಳವಡಿಕೆ ಕುರಿತು ಪರಿಶೀಲಿಸಿ ಕ್ರಮವಹಿಸುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣ್ ರಾವ್, ಉಪ ಕಾರ್ಯದರ್ಶಿ ಧರಣೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಬಿ. ಬಸವರಾಜು, ಅಂಗವಿಕಲಕರ ಕಲ್ಯಾಣಾಧಿಕಾರಿ ತಿಬ್ಬಯ್ಯ, ಅಂಗವಿಕಲರ ಕ್ಷೇಮಾಬಿವೃದ್ದಿ ಸಂಘದ ಮುಖಂಡರಾದ ರೂಪೇಶ್, ವಿ.ಕುಮಾರ್, ಬಸವಣ್ಣ, ಮಹದೇವಸ್ವಾಮಿ, ಎನ್.ಕೃಷ್ಣಮೂರ್ತಿ, ರಮೇಶ್, ಸಿದ್ದಯ್ಯ ಇತರರು ಇದ್ದರು.

ಫೆ.9ರಂದು ಉದ್ಯೋಗ ಮೇಳ
ಖಾಸಗಿ ವಲಯದಲ್ಲೂ ಅಂಗವಿಕಲರಿಗೆ ಉದ್ಯೋಗ ಅವಕಾಶ ದೊರೆಯುವಂತೆ ಮಾಡಬೇಕು ಎಂಬ ಮನವಿಗೆ ಪ್ರತಿಕ್ರಿಯಿಸಿದ ಡಾ.ಎಂ.ಆರ್.ರವಿ ಅವರು, ಫೆಬ್ರುವರಿ 9ರಂದು ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. 30ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿದ್ದು, ಈ ಸಂದರ್ಭದಲ್ಲಿ ಅಂಗವಿಕಲರು ಪಾಲ್ಗೊಂಡು ಉದ್ಯೋಗ ಪಡೆಯಲು ಅವಶ್ಯವಿರುವ ವ್ಯವಸ್ಥೆಯನ್ನು ಕಲ್ಪಿಸುವಂತೆ ಜಿಲ್ಲಾ ಉದ್ಯೋಗ ಅಧಿಕಾರಿಯವರಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರು ಸೂಚಿಸಿದರು.

‘ಅಂಗವಿಕಲರು ವಸತಿ ಕಲ್ಪಿಸಲು ಕೋರಿರುವ ಅರ್ಜಿಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ಅವರಿಗೆ ಅನುಕೂಲ ಮಾಡಿಕೊಡಬೇಕು, ತಾಲ್ಲೂಕು ಮಟ್ಟದಲ್ಲಿ ಕನಿಷ್ಠ ಮೂರು ತಿಂಗಳಿಗೊಮ್ಮೆ ಅಂಗವಿಕಲರ ಕುಂದು ಕೊರತೆ ಸಭೆಯನ್ನು ತಹಶೀಲ್ದಾರರು ತಪ್ಪದೇ ನಡೆಸಬೇಕು. ಈ ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಬೇಕು’ ಎಂದು ಜಿಲ್ಲಾಧಿಕಾರಿ ಅವರು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.