ADVERTISEMENT

ಪರಿಶಿಷ್ಟ ವರ್ಗಕ್ಕೆ ಸೌಲಭ್ಯ ತಲುಪಿಸಲು ತಾಕೀತು

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಸ್‌ಟಿ ಕುಂದು ಕೊರತೆ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 15:23 IST
Last Updated 8 ಡಿಸೆಂಬರ್ 2020, 15:23 IST
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರ ನೇತೃತ್ವದಲ್ಲಿ ಜಿಲ್ಲಾ ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಮಿತಿ ಸಭೆ ಮಂಗಳವಾರ ನಡೆಯಿತು
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರ ನೇತೃತ್ವದಲ್ಲಿ ಜಿಲ್ಲಾ ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಮಿತಿ ಸಭೆ ಮಂಗಳವಾರ ನಡೆಯಿತು   

ಚಾಮರಾಜನಗರ: ಪರಿಶಿಷ್ಟ ವರ್ಗದವರಿಗೆ ವಸತಿ, ಅರಣ್ಯ ಹಕ್ಕು, ಆರೋಗ್ಯ ಸೇವೆ, ಸಮುದಾಯ ಭವನ ಸೇರಿದಂತೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಂಗಳವಾರ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಮಿತಿ ಸಭೆಯಲ್ಲಿ ಮಾತನಾಡಿದ ಸಮುದಾಯದ ಮುಖಂಡರು, ‘ವಸತಿ ಯೋಜನೆಯಡಿ ಅನುಕೂಲವಾಗುವ ರೀತಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕು. ಬೇಡಗುಳಿ ವ್ಯಾಪ್ತಿಯಲ್ಲಿ ಅರಣ್ಯದಂಚಿನ ವಾಸಿಗಳಿಗೆ ನಿವೇಶನ ನೀಡಬೇಕು. ನಗರದ ಹೆದ್ದಾರಿ ಕಾಮಗಾರಿ ವಿಸ್ತರಣೆ ವೇಳೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ತ್ವರಿತವಾಗಿ ಮನೆ ನಿರ್ಮಾಣ ಮಾಡಿಕೊಡಬೇಕು. ಕಾಡು ಕುರುಬರು, ಸೋಲಿಗ ಜನಾಂಗದವರಿಗೂ ವಸತಿ ಯೋಜನೆ ಅನುಕೂಲ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಎಂ.ಆರ್.ರವಿ ಅವರು, ‘ಈಗಾಗಲೇ ಮಂಜೂರಾಗಿರುವ ಮನೆಗಳ ನಿರ್ಮಾಣದಲ್ಲಿ ಫಲಾನುಭವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಮನೆ ನಿರ್ಮಾಣ ವೆಚ್ಚವನ್ನು ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು. ನಗರ ವ್ಯಾಪ್ತಿಯಲ್ಲಿ ಹೆದ್ದಾರಿ ಕಾಮಗಾರಿಗಾಗಿ ಮನೆ ಕಳೆದುಕೊಂಡಿರುವವರಿಗೆ ಮನೆ ನಿರ್ಮಾಣ ಹಾಗೂ ಬೇಡಗುಳಿಯಲ್ಲಿ ನಿವೇಶನ ನೀಡುವ ಸಂಬಂಧ ಅಗತ್ಯ ಪ್ರಕ್ರಿಯೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದರು.

ADVERTISEMENT

ಅರಣ್ಯ ವಾಸಿಗಳ ಆರೋಗ್ಯ ಸೇವೆಗಾಗಿ ಬಳಕೆಯಲ್ಲಿರುವ ಸಂಚಾರಿ ಆರೋಗ್ಯ ಘಟಕಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ಮುಖಂಡರು ದೂರಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು, ‘ಸಂಚಾರಿ ಆರೋಗ್ಯ ಘಟಕಗಳ ಕಾರ್ಯ ಪ್ರಗತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ವರದಿ ಮಾಡಬೇಕು. ಪ್ರತಿ ದಿನದ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

ಚಾಮರಾಜನಗರದಲ್ಲಿ ಆದಿವಾಸಿಗಳ ಸಂಸ್ಕೃತಿ, ಪರಂಪರೆ ಬದುಕು ಪರಿಚಯಿಸುವ ಕೇಂದ್ರ, ಕೌಶಲ ತರಬೇತಿ ಕೇಂದ್ರ ನಿರ್ಮಾಣಕ್ಕೆ ಅವಕಾಶವಿದ್ದು ಈ ಕುರಿತ ಪ್ರಸ್ತಾವನೆ ಸಿದ್ಧಪಡಿಸುವ ಸಲಹೆಯನ್ನು ಜಿಲ್ಲಾಧಿಕಾರಿ ನೀಡಿದರು.

ನಗರ ಹಾಗೂ ಅರಣ್ಯದ ಪೋಡುಗಳಲ್ಲಿ ಸ್ಮಶಾನಕ್ಕಾಗಿ ಭೂಮಿ ನಿಗದಿಪಡಿಸಬೇಕೆಂಬ ಪ್ರಸ್ತಾವವನ್ನು ಮುಖಂಡರು ಸಭೆಯ ಮುಂದಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ರವಿ ಅವರು, ‘ಸ್ಮಶಾನಕ್ಕಾಗಿ ಭೂಮಿ ಕಾಯ್ದಿರಿಸುವ ಪ್ರಕ್ರಿಯೆಗೆ ತಹಶೀಲ್ದಾರರು ಕ್ರಮ ತೆಗೆದುಕೊಳ್ಳಬೇಕು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಬದಲಿ ಭೂಮಿ ನೀಡಬೇಕಾಗುತ್ತದೆ. ಆದ್ಯತೆ ಮೇರೆಗೆ ಸ್ಮಶಾನ ಜಾಗದ ಸಮಸ್ಯೆಗಳನ್ನು ಪರಿಹರಿಸಬೇಕು. ಭೂಮಿ ಗುರುತಿಸುವ ಕೆಲಸ ತ್ವರಿತವಾಗಿ ನಿರ್ವಹಿಸಬೇಕು. ಸ್ಮಶಾನದ ಅಭಿವೃದ್ದಿಗಾಗಿ ಅನುದಾನ ಲಭ್ಯವಿದೆ. ಈಗಾಗಲೇ ಇರುವ ಸ್ಮಶಾನದಲ್ಲಿ ಆಗಬೇಕಿರುವ ಅಭಿವೃದ್ದಿ ಕೆಲಸಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ತಹಶೀಲ್ದಾರರಾದ ಚಿದಾನಂದ ಗುರುಸ್ವಾಮಿ, ಕೆ.ಕುನಾಲ್, ನಂಜುಂಡಯ್ಯ, ನಾಗರಾಜು, ಮುಖಂಡರಾದ ಸುರೇಶ್ ‌ನಾಯಕ, ಚೆಲುವರಾಜು, ಡಾ.ಸಿ.ಮಹದೇವಗೌಡ, ಎಂ.ಜಡೇಸ್ವಾಮಿ, ಮಲ್ಲೇಶ್, ಜಿ.ಬಂಗಾರು, ಮಾದಪ್ಪ, ಮುತ್ತಯ್ಯ, ಪುಟ್ಟಮ್ಮ, ಪಾಳ್ಯ ಕೃಷ್ಣ ಇತರೆ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಸ್ಕ್ಯಾನಿಂಗ್‌ಗಾಗಿ ಅಲೆದಾಡಿದ ಗರ್ಭಿಣಿ: ವಿಷಯ ಪ್ರಸ್ತಾಪ

ಸೋಲಿಗ ಗರ್ಭಿಣಿಯೊಬ್ಬರು ರಾತ್ರಿ ಸ್ಕ್ಯಾನಿಂಗ್‌ಗಾಗಿ ಅಲೆದಾಡಿ ಕೊನೆಗೆ ದಾರಿ ಮಧ್ಯೆ ಆಂಬುಲೆನ್ಸ್‌ನಲ್ಲೇ ಹೆರಿಗೆ ಆದ ಘಟನೆಯನ್ನು ಸೋಲಿಗ ಮುಖಂಡ ಮುತ್ತಯ್ಯ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳು, ಜನಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತಾಗಿ ಸ್ಪಂದಿಸಬೇಕು. ದೂರದಿಂದ ಬರುವ ರೋಗಿಗಳ ಜೊತೆ ಸೌಜನ್ಯದಿಂದ ವರ್ತಿಸಬೇಕು. ರಾತ್ರಿ ವೇಳೆಯಲ್ಲಿಯೂ ಅಗತ್ಯ ವೈದ್ಯಕೀಯ ಸೌಲಭ್ಯ ಲಭ್ಯವಾಗಬೇಕು, ಔಷಧಿ, ಇತರೆ ತಪಾಸಣೆಗಾಗಿ ಹೊರಗೆ ಶಿಫಾರಸು ಮಾಡಬಾರದು. ತಾಲ್ಲೂಕು ಆಸ್ಪತ್ರೆಗಳಿಗೆ ಹಿರಿಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಒದಗಿಸಲಾಗುತ್ತಿರುವ ಚಿಕಿತ್ಸಾ ಔಷಧೋಪಚಾರಗಳನ್ನು ಪರಿಶೀಲಿಸಬೇಕು. ಉತ್ತಮ ಸೇವೆ ನೀಡುವಲ್ಲಿ ಲೋಪಗಳಿಗೆ ಆಸ್ಪದವಾಗಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.