ADVERTISEMENT

ಪೌರಕಾರ್ಮಿಕರಿಗೆ ಸಹಾಯಧನ ನೀಡಲು ಸೂಚನೆ

ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 15:53 IST
Last Updated 18 ಸೆಪ್ಟೆಂಬರ್ 2020, 15:53 IST
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವರ ನೇತೃತ್ವದಲ್ಲಿ ಸಭೆ ನಡೆಯಿತು
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವರ ನೇತೃತ್ವದಲ್ಲಿ ಸಭೆ ನಡೆಯಿತು   

ಚಾಮರಾಜನಗರ: ಮಹದೇಶ್ವರ ಬೆಟ್ಟದ ಪೌರ ಕಾರ್ಮಿಕರಿಗೆ ಜೀವನ ನಿರ್ವಹಣೆಗಾಗಿ ಮುಖ್ಯಮಂತ್ರಿ ಅವರ ಆದೇಶದಂತೆ ಈ ತಿಂಗಳಿನಿಂದಲೇ ಪ್ರತಿ ತಿಂಗಳು ₹4000 ಸಹಾಯ ಧನ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೂಚನೆ ನೀಡಿದರು.

ಇತ್ತೀಚೆಗೆ ನಡೆದ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಹಾಗೂ ಪೌರಕಾರ್ಮಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ‘ಮಲೆಮಹದೇಶ್ವರ ಬೆಟ್ಟದ ಪೌರ ಕಾರ್ಮಿಕರ ಲಾಕ್ ಡೌನ್ ಅವಧಿಯ ವೇತನವನ್ನು ನೀಡಬೇಕು. ಸ್ಥಗಿತಗೊಳಿಸಿರುವ 111 ಎಲ್ಲಾ ರೀತಿಯ ನೌಕರರಿಗೆ ಜೀವನ ನಿರ್ವಹಣೆಗೆ ಅನುಕೂಲವಾಗಲು ಮತ್ತೆ ಕೆಲಸ ನೀಡುವವರೆಗೆ, ಈ ತಿಂಗಳಿನಿಂದಲೇ ಪ್ರತಿ ತಿಂಗಳು ₹4,000 ನೀಡಲು ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ಕುಮಾರ್ ಅವರು ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಇದಕ್ಕೆ ಮುಖ್ಯಮಂತ್ರಿಯವರು ಅನುಮೋದಿಸಿದ್ದಾರೆ. ಈ ಪ್ರಕಾರ ಎಲ್ಲ ತಾತ್ಕಾಲಿಕ ನೌಕರರಿಗೆ ಸಹಾಯ ಧನ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

‘ಪೌರಕಾರ್ಮಿಕರಿಗೆ ಶಾಶ್ವತವಾಗಿ ಮನೆಗಳನ್ನು ನಿರ್ಮಿಸಲು ಅಗತ್ಯವಿರುವ ಮೂರು ಎಕರೆ ಜಮೀನನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಬೇಕು. ಈ ಕಾರ್ಯ ತ್ವರಿತವಾಗಿ ಆಗಬೇಕು’ ಹನೂರು ತಹಶೀಲ್ದಾರ್‌ ಅವರಿಗೆ ಸೂಚಿಸಿದರು.

ADVERTISEMENT

‘ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸ್ಮಶಾನಕ್ಕಾಗಿ ಜಮೀನು ಗುರುತಿಸಬೇಕು, ಇದಕ್ಕಾಗಿ ತಹಶೀಲ್ದಾರರು ಕೂಡಲೇ ಕ್ರಮ ತೆಗೆದುಕೊಳ್ಳ ಬೇಕು. ಸ್ಮಶಾನದ ಜಮೀನಿಗೆ ಜಿಲ್ಲಾಡಳಿತದಿಂದಲೇ ಸುತ್ತುಗೋಡೆ ನಿರ್ಮಾಣ ಮಾಡಲು ಮುಂದಾಗಬೇಕು’ ಎಂದರು.

ಪೌರಕಾರ್ಮಿಕರಿಗೆ ಬೆಳಗಿನ ವೇಳೆ ಉಚಿತ ಉಪಹಾರ ನೀಡಲು ಕ್ರಮ ತೆಗೆದುಕೊಳ್ಳುವಂತೆಯೂ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರಿಗೆ ಡಾ.ಎಂ.ಆರ್.ರವಿ ಅವರು ಸೂಚಸಿದರು.

ಪೌರಕಾರ್ಮಿಕರ ವಸತಿ ಗೃಹಗಳು ಶಿಥಿಲಾವಸ್ಥೆಯಲ್ಲಿವೆ. ದುರಸ್ತಿ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕಿದೆ. ಇದಕ್ಕಾಗಿ ಅಗತ್ಯ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಪ್ರಾಧಿಕಾರದ ಎಂಜಿನಿಯರ್‌ಗೆ ನಿರ್ದೇಶನ ನೀಡಿದ ಅವರು, ಕರ್ನಾಟಕ ಗೃಹ ಮಂಡಳಿ ವತಿಯಿಂದಲೂ ಹೊಸದಾಗಿ ವಸತಿ ನಿರ್ಮಾಣ ಮಾಡುವ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.

ಕೆಲಸದಿಂದ ತೆಗೆದು ಹಾಕಿರುವ ಪೌರಕಾರ್ಮಿಕರನ್ನು ತೆಗೆದುಕೊಳ್ಳುವ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ ಸಭೆಯಲ್ಲಿ ಸೂಚಿಸಲಾಯಿತು.

ಮಹದೇಶ್ವರ ಬೆಟ್ಟದಲ್ಲಿ ವಸತಿ ಗೃಹಗಳು, ಕಾಟೇಜುಗಳು, ಮುಡಿ ಶೆಡ್, ಇತರೆ ಸೇವೆಗಳನ್ನು ಪ್ರಾರಂಭಿಸಲು ಅನುಮತಿಸಿದಲ್ಲಿ ಎಲ್ಲ ಹೊರ ಗುತ್ತಿಗೆ ನೌಕರರನ್ನು ತಕ್ಷಣ ರೊಟೇಷನ್ ಆಧಾರದಲ್ಲಿ ಕೆಲಸಕ್ಕೆ ನಿಯೋಜಿಸಲು ಅನುಕೂಲವಾಗಲಿದೆ ಎಂದು ಜಯವಿಭವಸ್ವಾಮಿ ಅವರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಎಂ.ಆರ್.ರವಿ ಅವರು ಒಂದೆರಡು ವಾರಗಳಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಮದು ತಿಳಿಸಿದರು.

ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.