ADVERTISEMENT

ಕೊಕ್ಬರೆ–ದೊಡ್ಡಾಣೆವರೆಗೆ ರಸ್ತೆ ನಿರ್ಮಾಣ ಶೀಘ್ರ

ದೊಡ್ಡಾಣೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಭೇಟಿ, ಮೂಲಸೌಕರ್ಯದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 20:34 IST
Last Updated 6 ಜೂನ್ 2019, 20:34 IST
ಹನೂರು ತಾಲ್ಲೂಕಿನ ದೊಡ್ಡಾಣೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಭೇಟಿ ಪರಿಶೀಲಿಸಿದರು
ಹನೂರು ತಾಲ್ಲೂಕಿನ ದೊಡ್ಡಾಣೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಭೇಟಿ ಪರಿಶೀಲಿಸಿದರು   

ಹನೂರು: ತಾಲ್ಲೂಕಿನ ದೊಡ್ಡಾಣೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ಗುರುವಾರ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

ಗ್ರಾಮದಲ್ಲಿ ರಸ್ತೆ, ವಿದ್ಯುತ್, ಕುಡಿಯುವ ನೀರಿನ ಕೊರತೆ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರಿಂದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಭೇಟಿ ನೀಡಿದ್ದರು.

ಮಳೆ ಬಂದಾಗ ಮಾತ್ರ ಕೃಷಿ ಚಟುವಟಿಕೆ ಇರುತ್ತದೆ. ಉಳಿದ ದಿನಗಳಲ್ಲಿ ಜನರು ಕೂಲಿ ಮಾಡಬೇಕು. ಆದರೆ, ಕೂಲಿ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿರುವ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ 30 ಮಕ್ಕಳು ಕಲಿಯುತ್ತಿದ್ದಾರೆ. ಆದರೆ, ಇಷ್ಟು ಮಕ್ಕಳಿಗೆ ಕೇವಲ ಒಬ್ಬರೇ ಶಿಕ್ಷಕರಿದ್ದಾರೆ. ಇದರಿಂದ ಮಕ್ಕಳ ಕಲಿಕಾ ಮಟ್ಟ ಕುಂಠಿತವಾಗುತ್ತಿದೆ. ಗ್ರಾಮಕ್ಕೆ ಸಮರ್ಪಕ ರಸ್ತೆಯಿಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ರಾತ್ರಿ ವೇಳೆ ಭಯದಲ್ಲೇ ಸಂಚರಿಸಬೇಕು ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ‘ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ಶೀಘ್ರದಲ್ಲೇ ನಿಯೋಜಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಲಾಗುವುದು. ಗ್ರಾಮದಲ್ಲಿನ ಎಲ್ಲಾ ಜನರಿಗೂ ನಾಳೆಯಿಂದಲೇ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ನೀಡಲಾಗುವುದು. ಕೊಕ್ಬರೆಯಿಂದ ದೊಡ್ಡಾಣೆ ಗ್ರಾಮದವರೆಗೆ 7 ಕಿ.ಮೀ ರಸ್ತೆ ನಿರ್ಮಾಣ ಹಾಗೂ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಈಚೆಗೆ ನಡೆದ ಕೆಡಿಪಿ ಸಭೆಯಲ್ಲೂ ದೊಡ್ಡಾಣೆ ಗ್ರಾಮಕ್ಕೆ ರಸ್ತೆ ಸಂಪರ್ಕದ ಬಗ್ಗೆ ಚರ್ಚೆ ನಡೆಸಿತ್ತು. ರಸ್ತೆ ನಿರ್ಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ, ಅಧಿಕಾರಿಗಳು ನಿರಂತರವಾಗಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.

ಮೂರು ದಿನಗಳ ಹಿಂದೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್. ಲತಾಕುಮಾರಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದ್ದರು.

ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಗ್ರಾಮ ನೈರ್ಮಲ್ಯ ವಿಭಾಗದ ಎಂಜಿನಿಯರ್ ಕೋದಂಡರಾಮ, ತಹಶೀಲ್ದಾರ್ ನಾಗರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ಪಿಡಿಒ ರಾಜೇಶ್, ಗ್ರಾಮ ಲೆಕ್ಕಿಗ ವಿನೋದ್ ಇದ್ದರು.

ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರು:‘ಸ್ವಾತಂತ್ರ್ಯ ಬಂದಾಗಿನಿಂದಲೂ ಮೂಲ ಸೌಕರ್ಯದಿಂದ ವಂಚಿತರಾಗಿ ಬದುಕುತ್ತಿದ್ದೇವೆ. ನಮ್ಮ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ’ ಎಂದು ಆರೋಪಿಸಿ ದೊಡ್ಡಾಣೆ ಗ್ರಾಮಸ್ಥರು ಲೋಕಸಭಾ ಚುನಾವಣಾ ಮತದಾನವನ್ನು ಬಹಿಷ್ಕರಿಸಿದ್ದರು. ಹೀಗಾಗಿ, ಗ್ರಾಮದಲ್ಲಿ ಶೂನ್ಯ ಮತದಾನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.