ADVERTISEMENT

ಮಲೆಮಹದೇಶ್ವರ ವನ್ಯಧಾಮ: ಸಾಧುಪ್ರಾಣಿಗಳಿಗೆ ವಾಹನ, ನಾಯಿಗಳು ಕಂಟಕ

ಹೆಚ್ಚುತ್ತಿವೆ ವಾಹನ ಅಪಘಾತದಲ್ಲಿ ಜಿಂಕೆ ಸಾವು, ನಾಯಿ ದಾಳಿ ಪ್ರಕರಣಗಳು

ಬಿ.ಬಸವರಾಜು
Published 5 ಏಪ್ರಿಲ್ 2019, 20:01 IST
Last Updated 5 ಏಪ್ರಿಲ್ 2019, 20:01 IST
ಮಲೆಮಹದೇಶ್ವರ ವನ್ಯಧಾಮದಲ್ಲಿ ನಾಯಿಗಳ ದಾಳಿಗೆ ತುತ್ತಾಗಿ ಮೃತಪಟ್ಟಿರುವ ಜಿಂಕೆ
ಮಲೆಮಹದೇಶ್ವರ ವನ್ಯಧಾಮದಲ್ಲಿ ನಾಯಿಗಳ ದಾಳಿಗೆ ತುತ್ತಾಗಿ ಮೃತಪಟ್ಟಿರುವ ಜಿಂಕೆ   

ಹನೂರು: ತಾಲ್ಲೂಕಿನ ಎರಡು ಅಭಯಾರಣ್ಯಗಳಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ನೀರು ಮೇವನ್ನು ಅರಸಿ ಕಾಡಿನಿಂದ ಹೊರಗಡೆ ಬರುವ ವನ್ಯಪ್ರಾಣಿಗಳು ವಾಹನಗ‌ಳು ಡಿಕ್ಕಿ ಹೊಡೆದು ಹಾಗೂ ಬೀದಿನಾಯಿಗಳ ದಾಳಿಗೆ ತುತ್ತಾಗಿ ಸಾವಿಗೀಡಾಗುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಬಹುತೇಕ ಅರಣ್ಯದಿಂದಲೇ ಕೂಡಿರುವ ಹನೂರು ತಾಲ್ಲೂಕಿನಲ್ಲಿ ಕಾಡಂಚಿನ ಗ್ರಾಮಗಳೇ ಹೆಚ್ಚು. ಕಾಡಂಚಿನ ಜಮೀನುಗಳಿಗೆ ನೀರು ಕುಡಿಯಲು ಬರುವ ಜಿಂಕೆಯಂತಹ ಸಾಧುಪ್ರಾಣಿಗಳು ನಾಯಿಗಳ ದಾಳಿಗೆ ತುತ್ತಾಗುತ್ತಿವೆ. ವನ್ಯಧಾಮಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದ ನಂತರ ನೀರನ್ನು ಅರಸಿಕೊಂಡು‍ನಾಡಿನ ಬರುವ ಪ್ರಾಣಿಗಳ ಸಂಖ್ಯೆ ಅಧಿಕವಾಗುತ್ತಿರುವುದು ಅಧಿಕಾರಿಗಳಿಗೆ ತಲೆನೋವು ತಂದಿದೆ.

ರಾಮಾಪುರದಿಂದ ಹೂಗ್ಯಂವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೇ ಇಂತಹ ಪ್ರಕರಣಗಳು ಹೆಚ್ಚು ಸಂಭವಿಸಿವೆ. ಗ್ರಾಮಗಳಿಗೆ ನುಗ್ಗುವ ಜಿಂಕೆಗಳು ಮರಳಿ ಕಾಡಿಗೆ ಹೋಗಲು ಮಾರ್ಗ ತಿಳಿಯದೇ ಮೃತಪಟ್ಟಿರುವ ಘಟನೆಗಳೂ ಜರುಗಿವೆ. ಬುಧವಾರ ನೀರು ಕುಡಿಯಲು ನಕ್ಕುಂದಿ ಗ್ರಾಮಕ್ಕೆ ಬಂದ ಜಿಂಕೆ ಮರಳಿ ಅರಣ್ಯಕ್ಕೆ ಹೋಗಲು ದಾರಿ ತಿಳಿಯದೇ, ಜನಸಂದಣಿಯನ್ನು ನೋಡಿದ ಕೂಡಲೇ ಮೃತಪಟ್ಟಿದೆ. ಇತ್ತೀಚೆಗೆ ರಾಮಾಪುರ ವನ್ಯಜೀವಿ ವಲಯದ ಕೋಣನಕೆರೆ ಅರಣ್ಯ ಪ್ರದೇಶದಲ್ಲಿ ಬೀದಿನಾಯಿ ದಾಳಿಗೆ ತುತ್ತಾಗಿ ತೀವ್ರವಾಗಿ ಗಾಯಗೊಂಡಿದ್ದ ಜಿಂಕೆಯನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ. ಇದೇ ವಲಯದಲ್ಲಿ ಮೂರು ತಿಂಗಳ ಅವಧಿಯಲ್ಲಿ ಇಂತಹ ಮೂರು ಪ್ರಕರಣಗಳು ನಡೆದಿವೆ.

ADVERTISEMENT

ಇಲಾಖೆ ಸಿಬ್ಬಂದಿ ಹೇಳುವ ಪ್ರಕಾರ, ಬೇಸಿಗೆ ಬಂದಾಗ ಇಂಥ ಘಟನೆಗಳು ಸಾಕಷ್ಟು ನಡೆಯುತ್ತವೆ. ನಮಗೆ ಗೊತ್ತಾದರೆ ಹೋಗಿ ರಕ್ಷಿಸಿ ಅರಣ್ಯಕ್ಕೆ ಬಿಡುತ್ತೇವೆ. ಆದರೆ ನೀರು ಕುಡಿಯಲು ಬರುವ ಪ್ರಾಣಿಗಳನ್ನು ಬೇಕಂತಲೇ ನಾಯಿಗಳನ್ನು ಬಿಟ್ಟು ಬೇಟೆಯಾಡುವ ಪ್ರವೃತ್ತಿ ಬಳಕಿಗೆ ಬಂದಿದೆ.

ಈಚೆಗೆ ಸಮೀಪದ ಎಲ್ಲೇಮಾಳ ಗ್ರಾಮದಲ್ಲಿ ಮಾಂಸ ಪಾಲು ಹಾಕುವಾಗ ದಾಳಿ ನಡೆಸಿ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಜಮೀನಿಗೆ ನೀರು ಕುಡಿಯಲು ಬಂದ ಜಿಂಕೆಯನ್ನು ನಾಯಿ ಮೂಲಕ ಬೇಟೆಯಾಡಿರುವುದಾಗಿ ಆತ ವಿಚಾರಣೆ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿರುವುದುಬೆಳಕಿಗೆ ಬಂದಿದೆ.

ವಾಹನಗಳಿಗೆ ಬಲಿ: ಎರಡು ವನ್ಯಧಾಮಗಳ ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿ 79ರಲ್ಲಿ ವನ್ಯಪ್ರಾಣಿಗಳು ವಾಹನಗಳ ಅತಿವೇಗಕ್ಕೆ ಬಲಿಯಾಗುತ್ತಿವೆ. ಮಾರ್ಚ್‌ 29ರಂದು ಅಜ್ಜೀಪುರದ ಪಕ್ಕ ಆಂಜನೇಯ ದೇವಸ್ಥಾನದ ಬಳಿಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿತ್ತು.

ಹನೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಹೋಗುವ ಎಲ್ಲೇಮಾಳ ಹಾಗೂ ರಾಮಾಪುರ ಮಾರ್ಗದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಈಚೆಗೆ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ.ವಾಹನಗಳು ಈ ರಸ್ತೆಗಳಲ್ಲಿ ನಿಧಾನಗತಿಯಲ್ಲಿ ಸಂಚರಿಸಬೇಕು ಎಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೇ, ವನ್ಯಜೀವಿಧಾಮಗಳಲ್ಲಿ ಹಾದು ಹೋಗುವ ರಸ್ತೆಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ. ಆದರೆ, ಉಬ್ಬುಗಳನ್ನು ಇನ್ನೂ ನಿರ್ಮಿಸಲಾಗಿಲ್ಲ.

‘ರಸ್ತೆ ಉಬ್ಬು ನಿರ್ಮಿಸದಿರುವುದರಿಂದ ಪ್ರಾಣಿಗಳು ವಾಹನಗಳಿಗೆ ಬಲಿಯಾಗುತ್ತಿವುರುದು ಹೆಚ್ಚಾಗುತ್ತಿದೆ’ ಎಂಬುದು ವನ್ಯಜೀವಿಪ್ರಿಯರ ಆರೋಪ.

ಮಾಹಿತಿ ನೀಡಲು ಮನವಿ

‘ಜಿಂಕೆ ಅತ್ಯಂತ ಸೂಕ್ಷ್ಮಪ್ರಾಣಿ. ಮನುಷ್ಯನ ಸ್ಪರ್ಶವಾಗುತ್ತಿದ್ದಂತೆ ಅದಕ್ಕೆ ಹೃದಯಘಾತವಾಗುವ ಸಂಭವ ಇರುತ್ತದೆ. ಆದ್ದರಿಂದ ಅರಣ್ಯದಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳು ಕಾಣಿಸಿಕೊಂಡರೆ ತಕ್ಷಣ ಗ್ರಾಮಸ್ಥರು ಸಮೀಪದ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ನಾವು ಅವುಗಳನ್ನು ರಕ್ಷಿಸುತ್ತೇವೆ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.